ಗುರುವಾರ , ಜೂನ್ 17, 2021
24 °C
ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ದಿನೇಶ್‌ ಕೆ. ಶೆಟ್ಟಿ ಸಲಹೆ

ಫೋಟೊ ಪೋಸ್‌ ಸಾಕು, ಆಮ್ಲಜನಕ ತನ್ನಿ ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆಸ್ಪತ್ರೆಯಲ್ಲಿ ಇರುವ ಲಿಕ್ವಿಡ್‌ ಆಕ್ಸಿಜನ್‌ ಪ್ಲಾಂಟ್‌ ಬಳಿ ನಿಂತು ಫೋಟೊ ತೆಗೆಸಿಕೊಳ್ಳುವುದು ಸಾಕು. ಇನ್ನಾದರೂ ಅಗತ್ಯ ಇರುವಷ್ಟು ಆಮ್ಲಜನಕ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ಆಮ್ಲಜನಕ ಬೆಡ್‌ಗಳ ಸಂಖ್ಯೆ ಹೆಚ್ಚಿಸಿ ಜನರ ಜೀವ ಉಳಿಸಬೇಕು ಎಂದು ಸಂಸದರು, ಜಿಲ್ಲಾಧಿಕಾರಿಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ ಸಲಹೆ ನೀಡಿದ್ದಾರೆ.

ರೆಮ್‌ಡಿಸಿವಿರ್, ಆಮ್ಲಜನಕ ಪೂರೈಕೆ ಮಾಡುವಲ್ಲಿ, ಆಮ್ಲಜನಕ ಬೆಡ್‌ ಒದಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಇದರಿಂದ ಜನರ ಸಾವು ನೋವು ಜಾಸ್ತಿಯಾಗಿದೆ. ಕರ್ಫ್ಯೂ, ಲಾಕ್‌ಡೌನ್‌ಗಳಿಂದಾಗಿ ಕೂಲಿಕಾರ್ಮಿಕರು, ಸಣ್ಣ ವರ್ತಕರು, ಚಾಲಕರು, ಕಟ್ಟಡ ಕಾರ್ಮಿಕರು ಹೀಗೆ ಅನೇಕ ಬಡಕುಟುಂಬಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಆರ್ಥಿಕ ಸಹಾಯ ಮಾಡಬೇಕು. ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಇದೆ. ಆದರೆ ಪ್ರಧಾನಿ ಜತೆ ಮಾತನಾಡಿ ಆಮ್ಲಜನಕ ಪೂರೈಕೆ ಮಾಡಲು ಸಂಸದರು ವಿಫಲರಾಗಿದ್ದಾರೆ. ಜಿಲ್ಲೆಗೆ ಮೆಡಿಕಲ್ ಆಕ್ಸಿಜನ್ ಜನರೇಟರ್, ಆಕ್ಸಿಜನ್ ಕಾನ್‌ಸಂಟ್ರೇಟರ್‌ಗಳನ್ನು ದೇಣಿಗೆಯಾಗಿ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ದಿವಾಳಿ ಆಗಿರುವುದರಿಂದ ದಾನಿಗಳನ್ನು ಕೋರುವ ಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದರು.

ಕೊರೊನಾ ಪ್ರಕರಣ ಇಳಿಮುಖ ಎಂದು ತೋರಿಸುವುದಕ್ಕಾಗಿ ಟೆಸ್ಟ್‌ಗಳನ್ನು ಕಡಿಮೆ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ. ಟೆಸ್ಟ್‌ಗಳನ್ನು ಜಾಸ್ತಿ ಮಾಡಿ, ಸೋಂಕು ಬಂದವರಿಗೆ ಸರಿಯಾದ ಚಿಕಿತ್ಸೆ ಒದಗಿಸಬೇಕು. ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿಯೇ ಪ್ರತಿದಿನ 30–40 ಮಂದಿ ಮರಣ ಪ್ರಮಾಣ ಪತ್ರ ಪಡೆಯಲು ಸರದಿಯಲ್ಲಿ ನಿಂತಿರುತ್ತಾರೆ. ಆದರೆ ಬುಲೆಟಿನ್‌ನಲ್ಲಿ ದಿನಕ್ಕೆ ನಾಲ್ಕೈದು ಸಾವುಗಳನ್ನಷ್ಟೇ ತೋರಿಸುತ್ತಿದ್ದಾರೆ. ಸಾವಿನ ಪ್ರಮಾಣ ಮುಚ್ಚಿಡಬಾರದು ಎಂದು ಸಲಹೆ ನೀಡಿದರು.

‘ಲಸಿಕೆ ಇಲ್ಲದೇ ಇದ್ದರೆ ನಾವು ನೇಣು ಹಾಕಿಕೊಳ್ಳಬೇಕಾ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ. ಆಡಳಿತ ನೀಡಲು ವಿಫಲರಾಗಿರುವುದಕ್ಕೆ ಇದು ಸಾಕ್ಷಿ. ಎಲ್ಲರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು. ರೆಮ್‌ಡಿಸಿವಿರ್‌ ಸಹಿತ ಎಲ್ಲವನ್ನು ಉತ್ಪಾದನೆ ಮತ್ತು ಮಾರಾಟಕ್ಕೆ ಮುಕ್ತ ಮಾಡಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಜಿಲ್ಲಾ ವಕ್ತಾರ ಎಂ. ನಾಗೇಂದ್ರಪ್ಪ, ದಾವಣಗೆರೆ ದಕ್ಷಿಣ ವಲಯ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಇದ್ದರು.

‘ಪ್ರಚಾರ ಪ್ರಿಯ ರೇಣುಕಾಚಾರ್ಯ’

ಹೊನ್ನಾಳಿ ಶಾಸಕ ಪ್ರಚಾರಕ್ಕಾಗಿ ಏನೇನೋ ಮಾಡುತ್ತಾರೆ. ಮಾಧ್ಯಮದಲ್ಲಿದ್ದ ಕೆಲವು ಹುಡುಗರನ್ನು ಇಟ್ಟುಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಆದರೆ ಹೊನ್ನಾಳಿಯಲ್ಲಿಯೂ ಆಮ್ಲಜನಕ ಕೊರತೆ ಇದೆ. ಸಿಬ್ಬಂದಿ ಇಲ್ಲ. ಲಸಿಕೆ ಸಿಗುತ್ತಿಲ್ಲ. ಇವುಗಳ ನಡುವೆ ಪ್ರಚಾರದ ಗಿಮಿಕ್‌ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಟೀಕಿಸಿದ್ದಾರೆ.

ಬಳಕೆಯಾಗದ ವೆಂಟಿಲೇಟರ್‌

ಚಿಗಟೇರಿ ಆಸ್ಪತ್ರೆಯಲ್ಲಿ ಹೈಫ್ಲೋ ಸೇರಿ ಒಟ್ಟು 38 ವೆಂಟಿಲೇಟರ್‌ಗಳಿವೆ. ಅದರಲ್ಲಿ 12 ಮಾತ್ರ ಬಳಕೆಯಾಗುತ್ತಿದೆ. ಯಾಕೆ ಬಳಕೆಯಾಗುತ್ತಿಲ್ಲ ಎಂದು ಸರ್ಜನ್‌ರನ್ನು ಕೇಳಿದರೆ ಕೆಲವು ಕೆಟ್ಟು ಹೋಗಿವೆ ಎಂದು ಉತ್ತರಿಸಿದರು. ಎಷ್ಟು ಕೆಟ್ಟು ಹೋಗಿವೆ ಎಂದು ಕೇಳಿದಾಗ 6 ಎಂದಿದ್ದರು. ಈ 6 ಹೊರತುಪಡಿಸಿದರೂ 32 ವೆಂಟಿಲೇಟರ್‌ ಬಳಕೆಯಾಗಬೇಕಿತ್ತು. ಆದರೆ ಅದಕ್ಕೆ ಬೇಕಾದ ಸಿಬ್ಬಂದಿ ಇನ್ನೂ ಇಲ್ಲ ಎಂದು ಎ. ನಾಗರಾಜ್‌ ಆರೋಪಿಸಿದರು.

ಆಮ್ಲಜನಕ ಇದ್ದರೂ ಬಂದ್ ಮಾಡಿದ್ದಾರೆ

‘ಹರಿಹರ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಇದ್ದರೂ ಅದನ್ನು ಬಂದ್‌ ಮಾಡಿದ್ದಾರೆ ಎಂದು ಜನ ಒದ್ದಾಡುತ್ತಿದ್ದಾರೆ. ಆದರೆ ಬಿಜೆಪಿಯ ಹರೀಶ್‌ ಅವರು ಸಿಲಿಂಡರ್‌ ಬಳಿ ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದರು. ಈ ವಿಡಿಯೊ ಹರಿದಾಡಿದೆ’ ಎಂದು ಜಿಲ್ಲಾ ವಕ್ತಾರ ಎಂ. ನಾಗೇಂದ್ರಪ್ಪ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.