ಗುರುವಾರ , ಮೇ 13, 2021
38 °C
ಎರಡು ದಶಕಗಳಿಂದ ಕಸದ ಕೊಂಪೆಯಾಗಿದ್ದ ಹೊಂಡಕ್ಕೆ ಕಾಯಕಲ್ಪ

ಕಲ್ಯಾಣಿ ಆಗಲಿದೆ ಹೊಂಡದ ಸರ್ಕಲ್‌ನ ಹೊಂಡ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹೊಂಡದ ಸರ್ಕಲ್‌ ಎಂಬ ಹೆಸರು ಬರಲು ಕಾರಣವಾಗಿದ್ದ ಹೊಂಡವು ಎರಡು ದಶಕಗಳಿಂದ ಕಸದ ತೊಟ್ಟಿಯಂತಾಗಿತ್ತು. ಇದೀಗ ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಯಕಲ್ಪ ಪಡೆಯುತ್ತಿದೆ. ಕಲ್ಯಾಣಿಯಾಗಿ ಪರಿವರ್ತನೆಗೊಳ್ಳುತ್ತಿದೆ.

ಈ ಹೊಂಡದ ಅಭಿವೃದ್ಧಿ ಮತ್ತು ಕ್ಲಾಕ್‌ಟವರ್ ನವೀಕರಣ ಎರಡೂ ಕಾಮಗಾರಿಗಳನ್ನು ಒಂದೇ ಯೋಜನೆಯಡಿ ₹ 3.15 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಕ್ಲಾಕ್‌ಟವರ್‌ ನವೀಕರಣ ಕಾಮಗಾರಿ ಅಂತಿಮ ಹಂತ ತಲುಪಿದೆ. ಕಲ್ಯಾಣಿ ನಿರ್ಮಾಣ ಕಾಮಗಾರಿ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ತಿಳಿಸಿದ್ದಾರೆ.

ತಲಾ 80 ಅಡಿ ಉದ್ದ ಮತ್ತು ಅಗಲ ಇರುವ ಈ ಹೊಂಡದ ಸುತ್ತ ಕಲ್ಲಿನ ಆಕರ್ಷಕ ಕಂಬಗಳನ್ನು ನಿರ್ಮಿಸಲಾಗಿದೆ. ನಾಲ್ಕು ಮೂಲೆಗಳಲ್ಲಿ ನಾಲ್ಕು ಮೂರ್ತಿಗಳು ಬರಲಿವೆ ಎಂದು ವಿವರಿಸಿದರು.

ಹೊಂಡದ ನೆನಪು: ‘ಈ ಹೊಂಡಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಒಂದು ಕಾಲದಲ್ಲಿ ಹಳೇದಾವಣಗೆರೆ ಭಾಗಕ್ಕೆ ಕುಡಿಯುವ ನೀರು ಇದೇ ಹೊಂಡದಿಂದ ಪೂರೈಕೆಯಾಗುತ್ತಿತ್ತು. ನಾನೂ ಸೇರಿ ಇಲ್ಲಿನ ಕೆರೆ ಗರಡಿಮನೆಯ ಎಲ್ಲ ಪೈಲ್ವಾನರು ಕುಸ್ತಿ ಆಡಿ ಬಂದು ಈ ಕೆರೆಯಲ್ಲಿ ಈಜಾಡಿಯೇ ಹೋಗುತ್ತಿದ್ದೆವು. ಈ ಭಾಗದಲ್ಲಿ ಈಜು ಕಲಿಯುತ್ತಿದ್ದುದೇ ಈ ಕೆರೆಯಲ್ಲಿ’ ಎಂದು ಪೈಲ್ವಾನ್‌ ಯಶವಂತರಾವ್‌ ಜಾಧವ್‌ ನೆನಪು ಮಾಡಿಕೊಂಡರು.

ಪ್ರಸಿದ್ಧ ಕುಸ್ತಿಪಟು ಚಾರ್ಲಿ ಪೈಲ್ವಾನ್‌ರ ತಂದೆ ಈ ಕೆರೆಯನ್ನು ಕಾಯುತ್ತಿದ್ದರು. ಬಳಿಕ ಹೊಂಡ ಕಾಯುವ ನಿಂಗಪ್ಪ ಎಂಬವರು ಕಾಯುತ್ತಿದ್ದರು. ಇಲ್ಲೊಬ್ಬರು ಪೋಸ್ಟ್‌ಮ್ಯಾನ್‌ ಮನೆಮನೆಗೆ ಕಾಗದ ತಲುಪಿಸಿ ಮಧ್ಯಾಹ್ನ ಬಂದು ಈ ಹೊಂಡಕ್ಕೆ ಜಿಗಿದು ಅರ್ಧ ಗಂಟೆ ನೀರಲ್ಲಿ ಆಡಿಯೇ ಮುಂದಕ್ಕೆ ಹೋಗುತ್ತಿದ್ದರು. ಆನಂತರ ಹೊಂಡ ನಿರ್ವಹಣೆ ಇಲ್ಲದೇ ಹೋಯಿತು. ಈಗ ಮತ್ತೆ ಪುನರುಜ್ಜೀವನಗೊಳ್ಳುತ್ತಿದೆ ಎಂದು ಹೇಳಿದರು.

ಸ್ಮಾರ್ಟ್‌ಸಿಟಿಯವರು ಅಭಿವೃದ್ಧಿ ಮಾಡಲು ಯೋಜನೆ ರೂಪಿಸಿದಾಗ ಇಲ್ಲಿ ಹಲವು ಶೆಡ್‌ಗಳಿದ್ದವು. ಅವರೆಲ್ಲ ಮನವೊಲಿಸಿ ತೆಗೆಸಲಾಯಿತು ಎಂದು ಜಾಧವ್‌ ತಿಳಿಸಿದರು.

ಹೊಂಡ ಯಾವ ಕಾಲದಲ್ಲಿ ರಚನೆಯಾಯಿತು ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ. 1957–58ರಲ್ಲಿ ನವೀಕರಣಗೊಂಡಿತು. ಇಲ್ಲಿ ದನದ ಸಂತೆ ನಡೆಯುತ್ತಿತ್ತು. ಅಲ್ಲಿ ಜಾನುವಾರುಗಳಿಗೆ ಕುಡಿಯುವ ನೀರನ್ನು ಈ ಕೆರೆಯಿಂದ ಪಂಪ್ ಮೂಲಕ ಹಾಯಿಸಲಾಗುತ್ತಿತ್ತು. ಗಣೇಶೋತ್ಸವ ಸಂದರ್ಭದಲ್ಲಿ ಊರಿನ ಎಲ್ಲ ಗಣಪತಿ ವಿಗ್ರಹಗಳನ್ನು ಇಲ್ಲಿಯೇ ನೀರಿಗೆ ಹಾಕಲಾಗುತ್ತಿತ್ತು. ಆನಂತರ ಪಾಳು ಬಿದ್ದು ಹೋಯಿತು. ಮಧ್ಯದಲ್ಲಿ ಒಬ್ಬ ಜಿಲ್ಲಾಧಿಕಾರಿ ಬಂದು ಈ ಹೊಂಡವನ್ನು ಸ್ವಚ್ಛಗೊಳಿಸಿ ಸುತ್ತ ತಂತಿಬೇಲಿ ಹಾಕಿದರು. ಬಳಿಕ ಮತ್ತೆ ಕಸದ ತೊಟ್ಟಿಯಾಯಿತು. ಎರಡು ದಶಕಗಳಿಂದ ಉಪಯೋಗವಿಲ್ಲದಾಂತಾಗಿತ್ತು’ ಎಂದು ಹಿರಿಯ ವರ್ತಕ ತಿಪ್ಪೇಶ್‌ ರಾವ್‌ ಚೌಹಾಣ್‌ ವಿವರಿಸಿದರು.

‘ಕಾರಂಜಿ, ಬೆಳಕು ಆಗಬೇಕು’

ಕ್ಲಾಕ್‌ ಟವರ್‌ ನವೀಕರಣ ಆಗಿದೆ. ಕಲ್ಯಾಣಿ ನಿರ್ಮಾಣ ಕಾಮಗಾರಿ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ. ಕ್ಲಾಕ್‌ ಟವರ್‌ಗೆ ಬೆಳಕಿನ ವ್ಯವಸ್ಥೆಯಾಗಬೇಕು. ಹಾಗೆಯೇ ಕಲ್ಯಾಣಿಯಲ್ಲಿ ನೀರು ಶುದ್ಧೀಕರಿಸುವ ಕಾರಂಜಿ. ಆಕರ್ಷಕ ಬೆಳಕಿನ ವ್ಯವಸ್ಥೆಗಳಾಗಬೇಕು. ಅವು ಈಗಿನ ಯೋಜನೆಯಲ್ಲಿ ಇಲ್ಲ. ಅದಕ್ಕಾಗಿ ಪ್ರತ್ಯೇಕವಾಗಿ ನೀಲನಕ್ಷೆ ತಯಾರಿಸಬೇಕು. ಅವೆಲ್ಲ ಕಾಮಗಾರಿಗಳಾದರೆ ಕಲ್ಯಾಣಿ ಮತ್ತು ಕ್ಲಾಕ್‌ಟವರ್‌ ಆಕರ್ಷಣೆಯ ಕೇಂದ್ರಗಳಾಗಲಿವೆ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.