ಶುಕ್ರವಾರ, ಏಪ್ರಿಲ್ 23, 2021
28 °C
ಸಾರಿಗೆ ನೌಕರರ ಮುಷ್ಕರಕ್ಕೆ ಹಾಜರಾದವರಿಗೆ ವೇತನ ಕಡಿತ l ಆಟೊಗಳಿಗೆ ಹೆಚ್ಚಿದ ಬೇಡಿಕೆ

ಪ್ರಯಾಣಿಕರಿಗೆ ಖಾಸಗಿ ಬಸ್ಸೇ ಗತಿಯಾಯ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: 6ನೇ ವೇತನ ಆಯೋಗ ಜಾರಿಗೊಳಿಸುವುದು ಸೇರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ನಡೆದ ಕೆಎಸ್ಆರ್‌ಟಿಸಿ ನೌಕರರ ಮುಷ್ಕರಕ್ಕೆ ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಯಿತು. ಹರಿಹರ–ದಾವಣಗೆರೆ ನಡುವೆ ಮೂರು ಬಸ್‌ಗಳು ಸಂಚರಿಸಿದ್ದು ಬಿಟ್ಟರೆ ಉಳಿದ ನೌಕರರು ಕೆಲಸದಿಂದ ದೂರ ಉಳಿದರು.

ಮುಷ್ಕರದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಇದರಿಂದಾಗಿ ಪ್ರಯಾಣಿಕರು ಪರದಾಡಿದರು. ಬಳಿಕ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್ ಹಾಗೂ ಆಟೊಗಳ ಮೊರೆಹೋದರು. ನಗರದ ಹೈಸ್ಕೂಲ್ ಮೈದಾನದ ಬಳಿ ಇರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪೊಲೀಸರನ್ನು ಬಿಟ್ಟರೆ ಪ್ರಯಾಣಿಕರು, ಬಸ್‌ಗಳು ನಿರ್ವಾಹಕರು ಇರಲಿಲ್ಲ. ಇದರಿಂದಾಗಿ ಬಸ್ ನಿಲ್ದಾಣ ಬಿಕೊ ಎನ್ನುತ್ತಿತ್ತು. ಆದರೆ ಪಕ್ಕದಲ್ಲೇ ಇದ್ದ ಖಾಸಗಿ ಬಸ್‌ ನಿಲ್ದಾಣದಲ್ಲಿ ಹೆಚ್ಚಿನ ಪ್ರಯಾಣಿಕರು ಇದ್ದರು.

ಖಾಸಗಿ ಬಸ್‌ಗಳ ಪ್ರವೇಶ: ಮುಷ್ಕರದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಎರಡು ಖಾಸಗಿ ಬಸ್‌ಗಳು ಪ್ರವೇಶಿಸಿದವು. ಆದರೆ ಹೆಚ್ಚಿನ ದರ ಕೇಳುತ್ತಾರೆ ಎಂಬ ಆತಂಕದಿಂದ ಬಸ್ ಏರಲಿಲ್ಲ.

ಪೊಲೀಸ್ ಭದ್ರತೆ: ಖಾಸಗಿ ಬಸ್‌ಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಿದರು. 

ಆಟೊಗಳಿಗೆ ಶುಕ್ರದೆಸೆ: ಬಸ್ ಮುಷ್ಕರದಿಂದಾಗಿ ಆಟೊಗಳು, ಕ್ಯಾಬ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿತ್ತು. ಖಾಸಗಿ ಬಸ್ ನಿಲ್ದಾಣದ ಹೊರಗೆ ನಿಲ್ಲುತ್ತಿದ್ದ ಆಟೊಗಳು, ಬುಧವಾರ ಒಳ ಪ್ರವೇಶಿಸಿದ್ದವು. ಜಯದೇವ ವೃತ್ತ, ಸಿ.ಜಿ. ಆಸ್ಪತ್ರೆ, ಮಹಾನಗರಪಾಲಿಕೆ ಸಮೀಪದ ವೃತ್ತಗಳಲ್ಲಿ ಹೆಚ್ಚಿನ ಆಟೊ
ಗಳು ಸಾಲುಗಟ್ಟಿ ನಿಂತು ಪ್ರಯಾಣಿಕರನ್ನು ಸಾಗಿಸಿದವು. ಮುಷ್ಕರವನ್ನೇ ಅಸ್ತ್ರವನ್ನಾಗಿಟ್ಟು
ಕೊಂಡು ಚಾಲಕರು ಹೆಚ್ಚಿನ ಹಣ ಕೇಳುತ್ತಿದ್ದುದು ಕಂಡುಬಂತು.

‘ಯಾರ ಮೇಲೂ ಒತ್ತಡ ಹಾಕಿಲ್ಲ’: ‘ನಮ್ಮ ಬೇಡಿಕೆ ನಿನ್ನೆ ಮೊನ್ನೆಯದಲ್ಲ. ಮೂರು ವರ್ಷಗಳಿಂದಲೂ ಕೇಳುತ್ತಿದ್ದೇವೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಮುಷ್ಕರ ಕೈಗೊಂಡಿದ್ದಾಗ 9 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರಿಂದ ಮುಷ್ಕರ ಹಿಂಪಡೆದಿದ್ದವು. 6ನೇ ವೇತನ ಆಯೋಗ ಜಾರಿಗೊಳಿಸಿಲ್ಲ’ ಎಂದು ಸಾರಿಗೆ ನೌಕರರ ಒಕ್ಕೂಟದ ಮುಖಂಡ ಓಂಕಾರಪ್ಪ ಆರೋಪಿಸಿದರು.

‘8 ಬೇಡಿಕೆಗಳನ್ನು ಈಡೇರಿಸಿದ್ದೇವೆ ಎಂದು ಸರ್ಕಾರ ಹೇಳುತ್ತಿದ್ದರೂ ಅವೆಲ್ಲಾ ಅವೈಜ್ಞಾನಿಕ. ಈ ಬೇಡಿಕೆಗಳು ನೌಕರರಿಗೆ ಪೂರಕವಾಗಿಲ್ಲ. ಸರ್ಕಾರಿ ಸಂಸ್ಥೆ ಎಂದ ಮೇಲೆ ಸರ್ಕಾರಿ ನೌಕರರಿಗೆ ನೀಡುವ ಸಂಬಳವನ್ನು ನೀಡಬೇಕು. ಯಾವುದನ್ನೂ ನೀಡಿಲ್ಲ. ನಾವು ಯಾರ ಮೇಲೂ ಒತ್ತಡ ಹಾಕುತ್ತಿಲ್ಲ’ ಎಂಬುದು ಓಂಕಾರಪ್ಪ ಅವರ ವಾದ. 

‘ಕೆಎಸ್‌ಆರ್‌ಟಿಸಿ ಬಸ್ ಹೋಗುತ್ತವೊ ಇಲ್ಲವೋ ಗೊತ್ತಿಲ್ಲ. ಬಸ್ ಬಾರದಿದ್ದರೆ ಖಾಸಗಿ ಬಸ್‌ನಲ್ಲಾದರೂ ಹೋಗುತ್ತೇವೆ’ ಎಂದು ಹುಬ್ಬಳ್ಳಿಗೆ ಹೊರಡಬೇಕಾಗಿದ್ದ ‍ಪದ್ಮ  ಅವರು ಹೇಳುತ್ತಾರೆ.

 ಮುಷ್ಕರದಿಂದಾಗಿ ₹35 ಲಕ್ಷ ನಷ್ಟ: ಸಿದ್ದೇಶ್ವರ

ಬುಧವಾರದ ಮುಷ್ಕರದಿಂದಾಗಿ ದಾವಣಗೆರೆ ವಿಭಾಗಕ್ಕೆ ₹ 35 ಲಕ್ಷ ನಷ್ಟವಾಗಿದೆ ಎಂದು ಸಿದ್ದೇಶ್ವರ ಎನ್.ಹೆಬ್ಬಾಳ್ ತಿಳಿಸಿದರು.

‘ದಾವಣಗೆರೆ ಹಾಗೂ ಹರಿಹರ ಡಿಪೊಗಳಿಂದ 350 ಬಸ್‌ಗಳು ಸಂಚರಿಸಬೇಕಿತ್ತು. 1,132 ಚಾಲಕರು ಹಾಗೂ ನಿರ್ವಾಹಕರು ಇದ್ದು, ಕೆಲಸಕ್ಕೆ ಗೈರು ಹಾಜರಾದವರಿಗೆ ವೇತನ ಕಡಿತಗೊಳಿಸಲಾಗುವುದು.
‘ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಖಾಸಗಿ ಬಸ್‌ಗಳಿಗೆ ತಾತ್ಕಾಲಿಕ ಪರ್ಮಿಟ್ ನೀಡಿದ್ದು, ನಮ್ಮ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳು ಸಂಚರಿಸಿವೆ. ಯಾವುದೇ ತೊಂದರೆಯಾಗಿಲ್ಲ’ ಎಂದು ಸಿದ್ದೇಶ್ವರ
ತಿಳಿಸಿದರು. 

 ಮೂರು ಟ್ರಿಪ್‌ಗಳ ಸಂಚಾರ

‘ಬೆಳಿಗ್ಗೆಯಿಂದ ಮುಷ್ಕರ ನಡೆಸಿದ್ದು, ಸಂಜೆ ವೇಳೆ ದಾವಣಗೆರೆಯಿಂದ ಹರಿಹರಕ್ಕೆ ಮೂರು ಟ್ರಿಪ್‌ಗಳು ಸಂಚರಿಸಿದವು. ಅಲ್ಲದೇ ಜಗಳೂರಿನಿಂದಲೂ 5 ಟ್ರಿಪ್‌ಗಳು ದಾವಣಗೆರೆಗೆ ವಾಪಸ್ ಆಗಿವೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್.ಹೆಬ್ಬಾಳ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.