ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜಿಲ್ಲೆಯಲ್ಲಿ ‘ಕೋವಿಡ್‌ 19’ ಪ್ರಕರಣ ಇಲ್ಲ

ಮುನ್ನೆಚ್ಚರಿಕೆ ಕ್ರಮವಾಗಿ ಸಕಲ ಸಿದ್ದತೆ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
Last Updated 4 ಮಾರ್ಚ್ 2020, 14:44 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ 19 ಪ್ರಕರಣ ವರದಿಯಾಗಿಲ್ಲ. ಒಂದು ವೇಳೆ ಈ ಪ್ರಕರಣ ಎದುರಾದರೆ ಎಲ್ಲ ಪೂರ್ವ ಸಿದ್ಧತೆಗಳನ್ನು ಸರ್ಕಾರದ ನಿರ್ದೇಶನದನ್ವಯ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಯಾವುದೇ ಭೀತಿಗೆ ಒಳಗಾಗಬೇಕಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸೂಚನೆಯನ್ವಯ ಜಿಲ್ಲಾಡಳಿತದಿಂದ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಿದೇಶಿ ಪ್ರವಾಸಿಗರು, ಪ್ರಯಾಣಿಕರಿಂದ ಎಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಕೋವಿಡ್ 19 ವೈರಸ್ ಪ್ರಕರಣಗಳನ್ನು ಸಾಂಕ್ರಾಮಿಕವಾಗಿ ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಹಾಗೂ ಅನುಸರಿಸಬೇಕಾದ ಕಾರ್ಯವಿಧಾನಗಳ ಬಗ್ಗೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯು 2019 ನೊವೆಲ್ ಕೋವಿಡ್ 19 ವೈರಸ್ ಪೀಡಿತ ದೇಶಗಳನ್ನು ಅಂತರಾಷ್ಟ್ರೀಯ ಕಳಕಳಿಯ ಸಾರ್ವಜನಿಕ ಆರೋಗ್ಯ ತುರ್ತು(PHEIC) ಎಂದು ಘೋಷಿಸಿದ್ದು, ಈ ವೈರಸ್ ಹರಡುವಿಕೆಯನ್ನು ತಡೆಯುವಲ್ಲಿ ಪ್ರವೃತ್ತರಾಗುವಂತೆ ಕರೆ ನೀಡಿದೆ. ಜಿಲ್ಲಾ ಮಟ್ಟದಲ್ಲಿ ಎಲ್ಲ ರೀತಿಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡು ಸರ್ಕಾರದ ಮಾರ್ಗಸೂಚಿಯನ್ವಯ ತಂಡಗಳನ್ನು ರಚಿಸಿಕೊಂಡು ಕಾರ್ಯ ಪ್ರವೃತ್ತರಾಗಬೇಕಿದ್ದು, ನಾಳೆಯೇ ತಂಡಗಳನ್ನು ರಚಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

‘ಕೋವಿಡ್ 19 ರೋಗಲಕ್ಷಣಗಳು ಶೀತ ನೆಗಡಿಯನ್ನು ಹೋಲುತ್ತಿದ್ದು, ಎಲ್ಲ ಶೀತ ನೆಗಡಿ ಕೋವಿಡ್ 19 ಸೋಂಕಲ್ಲ. ಆದರೆ ಉಲ್ಬಣಗೊಂಡ ಶೀತ ಮತ್ತು ಜ್ವರವನ್ನು ಅಸಡ್ಡ ಮಾಡದೇ ವೈದ್ಯರ ಬಳಿ ತೋರಿಸಿಕೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಮಾತನಾಡಿ, ‘ಕೋವಿಡ್ 19 ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು, ಮೆಡಿಕಲ್ ಕಾಲೇಜು ನಿರ್ದೇಶಕರು, ವಾರ್ತಾಧಿಕಾರಿ, ಡಿಡಿಪಿಐ, ಕೆಎಸ್‍ಆರ್‍ಟಿಸಿ ಡಿಸಿ, ವೈದ್ಯಕೀಯ ಕಾಲೇಜುಗಳ ಸಂಘದ ಜಿಲ್ಲಾ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ ಹಾಗೂ ಡಿಎಚ್‍ಒ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದರು.

‘ರಚನೆಯಾದ ತಂಡ ಅಥವಾ ಸಮಿತಿಗಳು ನಿರ್ದಿಷ್ಟ ಚಟುವಟಿಕೆ ಕೈಗೊಂಡು, ಡೇಟಾ ಸಂಗ್ರಹಿಸಿ ನಿಗದಿತ ನಮೂನೆಯಲ್ಲಿ ಪ್ರಸ್ತುತಪಡಿಸಬೇಕು. ಎಲ್ಲ ಸಮಿತಿಗಳು ಪ್ರತಿದಿನ ಡಿಎಚ್‍ಒ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಕೈಗೊಂಡ ಚಟುವಟಿಕೆ ಬಗ್ಗೆ ವರದಿ ನೀಡಬೇಕು. ಡಿಎಚ್‍ಒ ನೀಡಿದ ವರದಿಯನ್ನು ಜಿಲ್ಲಾಧಿಕಾರಿ ಪರಿಶೀಲಿಸಿ ಆರೋಗ್ಯ ಇಲಾಖೆ ಆಯುಕ್ತರಿಗೆ ಕಳುಹಿಸಿಕೊಡುವರು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ‘ಜಿಲ್ಲೆಯಲ್ಲಿ ಲಭ್ಯವಿರುವ ಕೋವಿಡ್ 19 ವೈರಸ್‍ಗೆ ಸಂಬಂಧಿಸಿದಂತೆ ಅವಶ್ಯಕವಾದ ಎನ್ 95 ಮಾಸ್ಕ್‌ಗಳು, ಫೇಸ್‍ಶೀಲ್ಡ್, ಸಂರಕ್ಷಣಾ ಕನ್ನಡಕಗಳು, ಗೌನ್‍ಗಳು, ಸೋಪ್, ಕೈವರೆಸುವ ಟಿಶ್ಯು,ಶಾರ್ಪ್ ಕಂಟೈನರ್ ಗ್ಲಾಸಗಳು, ಗ್ಲೋವ್‍ಗಳು, ಸರ್ಜಿಕಲ್ ಮಾಸ್ಕ್‌ಗಳು, ಟ್ರಿಪಲ್ ಪ್ಯಾಕೇಜಿಂಗ್ ಬಾಕ್ಸ್‌ಗಳು, ಆಕ್ಸಿಜನ್ ಪ್ರಾಂಗ್ಸ್ ಮತ್ತು ಟ್ಯೂಬ್ಸ್ ಇತರೆ ಅವಶ್ಯಕ ಸಾಮಗ್ರಿಗಳ ಸ್ಟಾಕ್ ಇರುವಂತೆ ನಿಗಾ ವಹಿಸಬೇಕು’ ಎಂದು ಹೇಳಿದರು.

ಎಸ್.ಎಸ್.ಮೆಡಿಕಲ್ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಕಾಳಪ್ಪನವರ್. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜೆಜೆಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಮುರುಗೇಶ್, ನರ್ಸಿಂಗ್ ಹೋಂಗಳ ಸಂಘದ ಅಧ್ಯಕ್ಷ ಡಾ. ಮಾವಿನತೋಪ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಕೆಎಸ್‍ಆರ್‍ಟಿಸಿ ಡಿಪೊ ಮ್ಯಾನೇಜರ್ ರಾಮಚಂದ್ರ, ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಯತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT