ಬುಧವಾರ, ಜೂನ್ 23, 2021
30 °C
ಕೊನೇ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮರಣ ಉಂಟಾಗಿದೆ: ಡಿಸಿ ಸ್ಪಷ್ಟನೆ

ಮೂರು ಸಾವು ಹೇಗಾಯಿತು: ಬೈರತಿ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಸೋಂಕಿತರನ್ನು ಗುಣಮುಖರನ್ನಾಗಿಸಲು ಎಲ್ಲ ಸಿದ್ಧತೆಗಳಿವೆ ಎಂದ ಮೇಲೆ ಮೂರು ಸಾವು ಹೇಗೆ ಉಂಟಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಪ್ರಶ್ನಿಸಿದರು. ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗ ಬಾರದೇ ಸ್ವಯಂ ಔಷಧ ಮಾಡಿಕೊಂಡು ಕೊನೇ ಕ್ಷಣದಲ್ಲಿ ಆಸ್ಪತ್ರೆಗಳಿಗೆ ಬಂದಿದ್ದರಿಂದ ಮರಣ ಉಂಟಾಗಿದೆ. ರೋಗದ ಆರಂಭಿಕ ಹಂತದಲ್ಲೇ ಪರೀಕ್ಷೆಗೆ ಮತ್ತು ಚಿಕಿತ್ಸೆಗೆ ಆಸ್ಪತ್ರೆಗೆ ಬಂದರೆ ಗುಣಮುಖರಾಗಿಸಲು ಸುಲಭ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ಪಷ್ಟನೆ ನೀಡಿದರು.

ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಬುಧವಾರ ನಡೆಸಿದ ಸಭೆಯಲ್ಲಿ ಈ ಸಂವಾದ ನಡೆಯಿತು.

ಸರ್ಕಾರ ಹೊರಡಿಸಿರುವ ಕೋವಿಡ್ ನಿಯಂತ್ರಣದ ಹೊಸ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜೊತೆಗೆ ಕೋವಿಡ್ ಔಷಧ, ಆಕ್ಸಿಜನ್ ಮತ್ತು ಲಸಿಕೆ ಸಮರ್ಪಕ ನಿರ್ವಹಣೆ ಮಾಡಬೇಕು. ರೈತರು, ಕೈಗಾರಿಕೆಗಳು ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕು ಎಂದು ಸಚಿವರು ಸೂಚಿಸಿದರು.

‘ಜಿಲ್ಲೆಯಲ್ಲಿ ಕೋವಿಡ್ ಲಸಿಕೆ, ರೆಮ್‌ಡಿಸಿವಿರ್ ಸೇರಿ ಔಷಧಗಳು ಮತ್ತು ಆಕ್ಸಿಜನ್, ಬೆಡ್ ಸಹಿತ ಯಾವುದೇ ಸೌಲಭ್ಯದ ಕೊರತೆ ಉಂಟಾದರೆ ತಕ್ಷಣ ನನ್ನ ಗಮನಕ್ಕೆ ತರಬೇಕು. ಆಗ ಮುಖ್ಯಮಂತ್ರಿ, ಆರೋಗ್ಯ ಸಚಿವರ ಜತೆ ಚರ್ಚಿಸಿ ಸಮರ್ಪಕ ವ್ಯವಸ್ಥೆ ಮಾಡಲಾಗುವುದು. ಹೊರಜಿಲ್ಲೆಗಳಿಂದ ಬಂದವರಿಗೆ ಕೊರೊನಾ ಪರೀಕ್ಷೆ ಮಾಡಿಸಬೇಕು. ಫಲಿತಾಂಶ ಬರುವವರೆಗೆ ಹೋಂಕ್ವಾರಂಟೈನ್‌ನಲ್ಲಿ ಇರಿಸಬೇಕು’ ಎಂದು ಹೇಳಿದರು.

ಹೊಸ ಮಾರ್ಗಸೂಚಿಗಳ ಜಾರಿಗೆ ಪೊಲೀಸ್ ಇಲಾಖೆಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಗೃಹರಕ್ಷಕದಳ ಸಿಬ್ಬಂದಿ ಸೇವೆಯನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಎಲ್ಲ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಂಬುಲೆನ್ಸ್ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಕೋವಿಡ್ ರೋಗಿಗಳಿಗೆ ರೆಮ್‌ಡಿಸಿವಿರ್ ಒಂದೇ ಪರಿಣಾಮಕಾರಿ ಚಿಕಿತ್ಸೆ ಅಲ್ಲ. ಇತರ ಲಸಿಕೆಗಳು ಮತ್ತು ಆಂಟಿಬಯಾಟಿಕ್‍ಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಇಂಡೆಂಟ್ ಹಾಕಲಾಗಿದೆ. ಆ ಔಷಧಗಳನ್ನು ಜಿಲ್ಲಾಸ್ಪತ್ರೆಗೆ ಶೀಘ್ರವಾಗಿ ಸರಬರಾಜು ಮಾಡಲು ಕ್ರಮ ವಹಿಸಬೇಕು. 800 ರೆಮ್‌ಡಿಸಿವಿರ್‌ ಕಳುಹಿಸಬೇಕು ಎಂದು ಜಿಲ್ಲಾದಿಕಾರಿ ಮಹಾಂತೇಶ ಬೀಳಗಿ ಸಚಿವರಲ್ಲಿ ಮನವಿ ಮಾಡಿದರು.

ದಿನಕ್ಕೆ 13 ಸಾವಿರ ಲಸಿಕೆ ನೀಡುವ ಗುರಿ ಇದೆ. 20 ಸಾವಿರ ವರೆಗೆ ನೀಡಲು ಲಸಿಕೆ ಪೂರೈಕೆ ಮಾಡಬೇಕು ಎಂದು ಬೇಡಿಕೆ ಸಲ್ಲಿಸಿದರು.

45 ವರ್ಷ ಮೇಲಿನವರಿಗೆ ಇಲ್ಲಿಯವರೆಗೆ 1,55,204 ಜನರಿಗೆ ಲಸಿಕೆ ನೀಡಲಾಗಿದೆ. 1,86,667 ಆರೋಗ್ಯ ಮತ್ತು ಫ್ರಂಟ್‍ಲೈನ್ ಉದ್ಯೋಗಿಗಳಿಗೆ ಲಸಿಕೆ ನೀಡಲಾಗಿದೆ. ಎರಡು ಕಂಪನಿಗಳಿಂದ ರೆಮ್‌ಡಿಸಿವಿರ್ ಲಸಿಕೆ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆಯಾಗಲಿದೆ ಎಂದು ಡಿಎಚ್‌ಒ ಡಾ.ನಾಗರಾಜ್‌ ಮಾಹಿತಿ ನೀಡಿದರು.

ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ 930 ಬೆಡ್ ಸಾಮರ್ಥ್ಯವಿದೆ. ಅದರಲ್ಲಿ 300 ಬೆಡ್‍ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿರಿಸಲಾಗಿದೆ. ಈ ಪೈಕಿ 30 ಆಕ್ಸಿಜನ್ ಬೆಡ್‍ಗಳಿವೆ. ಪ್ರಸ್ತುತ ಆಕ್ಸಿಜನ್‍ಗೆ ಕೊರತೆ ಇಲ್ಲ. 270 ಆಕ್ಸಿಜನ್ ಸಿಲಿಂಡರ್‌ಗಳು, 80 ಶೀಶೆ ಲಭ್ಯವಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್ ತಿಳಿಸಿದರು.

ಜಿಲ್ಲೆಯಲ್ಲಿ 387415 ಆರ್.ಟಿ.ಪಿ.ಸಿ.ಆರ್, 111204 ರ‍್ಯಾಪಿಡ್ ಆ್ಯಂಟಿಜೆನ್‌ ಟೆಸ್ಟ್ ಸೇರಿ ಒಟ್ಟು 4,98,619 ಪರೀಕ್ಷೆ ಮಾಡಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 937 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 636 ಪಾಲಿಕೆ ವ್ಯಾಪ್ತಿಯವರು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ವಿವರಿಸಿದರು.

ಒಂದು ವಾರದಲ್ಲಿ 2,335 ಮಾಸ್ಕ್ ಪ್ರಕರಣ ದಾಖಲಿಸಲಾಗಿದೆ. ಲಾಕ್‍ಡೌನ್ ಉಲ್ಲಂಘನೆಯ 15 ಪ್ರಕರಣಗಳನ್ನು ಎಪಿಡೆಮಿಕ್ ಕಾಯ್ದೆ ಅಡಿ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಹನುಮಂತರಾಯ ಮಾಹಿತಿ ನೀಡಿದರು

ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಎಸ್‍ಎಲ್‍ಒಗಳಾದ ರೇಷ್ಮಾ ಹಾನಗಲ್, ಸರೋಜ, ತಹಶೀಲ್ದಾರ್ ಗಿರೀಶ್, ಆರ್‍ಸಿಎಚ್‍ಒ ಡಾ.ಮೀನಾಕ್ಷಿ, ಡಾ. ನಟರಾಜ್, ಡಾ.ಗಂಗಾಧರ್, ಡಾ.ರೇಣುಕಾರಾಧ್ಯ, ಡಾ.ಯತೀಶ್, ಟಿಎಚ್‍ಒ ಡಾ.ವೆಂಕಟೇಶ್ ಅವರೂ ಇದ್ದರು.

ಬೆಡ್, ಆಕ್ಸಿಜನ್ ವಿವರ

ನಗರದಲ್ಲಿ 2,425 ಕೋವಿಡ್ ರೋಗಿಗಳಿಗೆ ಬೆಡ್ ಮೀಸಲಿಡಲಾಗಿದೆ. ಈ ಪೈಕಿ 515 ಭರ್ತಿಯಾಗಿದ್ದು 1,908 ಖಾಲಿ ಇವೆ. ಸಿಜಿ ಆಸ್ಪತ್ರೆಯಲ್ಲಿ 181, ಎಸ್‍ಎಸ್ ಆಸ್ಪತ್ರೆಯಲ್ಲಿ 128, ಬಾಪೂಜಿಯಲ್ಲಿ 76 ಮತ್ತು ಸಿಟಿ ಸೆಂಟರ್‌ಲ್ಲಿ 10 ಜನ ರೋಗಿಗಳು ಇದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು