ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು‍ಪಾಲಾದ ಮೂವರು ಯುವಕರು; ದಿಕ್ಕು ತೋಚದಂತಾದ ಪೋಷಕರು

Published 24 ಏಪ್ರಿಲ್ 2023, 2:47 IST
Last Updated 24 ಏಪ್ರಿಲ್ 2023, 2:47 IST
ಅಕ್ಷರ ಗಾತ್ರ

ಹೊನ್ನಾಳಿ: ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಭಾನುವಾರ ಬಸವ ಜಯಂತಿಯಂದು ಮೊದಲ ಬೇಸಾಯ ಮತ್ತು ಬಿಸಿಲಿನ ಧಗೆಗೆ ದಣಿದ ಎತ್ತುಗಳಿಗೆ ನೀರು ಕುಡಿಸಲು ತುಂಗಭದ್ರಾ ನದಿಗೆ ಹೋಗಿ ನೀರು ಪಾಲಾಗಿ ಮೂವರು ಯುವಕ ಸಾವನ್ನಪ್ಪಿದ್ದು, ಯುವಕರ ಪೋಷಕರಿಗೆ ದಿಕ್ಕು ತೋಚದಾಗಿದ್ದಾರೆ.

ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಗ್ರಾಮದಲ್ಲಿ ಪ್ರತಿ ವರ್ಷ ಬಸವ ಜಯಂತಿಯಂದು ಮೊದಲ ಬೇಸಾಯ ಹೂಡುವ ಪದ್ಧತಿ ಇದೆ. ಮೊದಲ ಬೇಸಾಯ ಹೂಡುವ ಹುಮ್ಮಸ್ಸಿನಿಂದ ಹೊರಟ ಮೂವರು ಚಿಗುರು ಮೀಸೆಯ ಹೈದರು ನೀರು ಪಾಲಾದ ವಿಷಯ ತಿಳಿದ ಗ್ರಾಮಸ್ಥರ ಕಣ್ಣಾಲಿಗಳು ನೀರಿನಿಂದ ತುಂಬಿವೆ .

ಕುಟುಂಬಗಳ ನಿರ್ವಹಣೆಯ ಕಾರಣ ಮೂವರೂ ಪಿಯುಸಿಗೆ ಶಿಕ್ಷಣ ಮೊಟಕುಗೊಳಿಸಿದ್ದರು. ತಂದೆ–ತಾಯಿಯವರ ದುಡಿಮೆಗೆ ಹೆಗಲು ನೀಡಲು ಕೃಷಿಯತ್ತ ಮುಖಮಾಡಿದ್ದರು. ಮೃತ ಕಿರಣ್ ದ್ವಿತೀಯ ಪಿಯು, ಆತನ ಚಿಕ್ಕಪ್ಪನ ಮಗ ವರುಣ್ ಮತ್ತು ಈತನ ಸ್ನೇಹಿತ ಪವನ್ ಮೊದಲ ಪಿಯುಗೆ ವಿದ್ಯಾಭ್ಯಾಸ ನಿಲ್ಲಿಸಿದ್ದರು.

ಮೃತ ಕಿರಣ್ ತಂದೆ ಬಸವರಾಜ್ ಸೇರಿ ಒಟ್ಟು 5 ಜನ ಸಹೋದರರು. ಅವರಿಗೆ ಈಗ ಪತ್ನಿ, ಪುತ್ರಿ ಇದ್ದಾರೆ. ಬಸವರಾಜ್ ಅವರ ಸಹೋದರ ದಿವಂಗತ ಶಿವಾಜಿಯವರಿಗೆ ಇಬ್ಬರು ಗಂಡುಮಕ್ಕಳು. ಹಿರಿಯ ಮಗ ಅರುಣ್, ಕಿರಿಯ ಮಗ ವರುಣ್.

ಪುರದಕೆರೆ ಈರಪ್ಪ ಅವರ ಮೊದಲ ಪತ್ನಿ ಅಕಾಲಿಕ ಮರಣದ ನಂತರ ಮತ್ತೊಂದು ಮದುವೆಯಾಗಿದ್ದರು. ಎರಡನೇ ಪತ್ನಿಗೆ ಜನಿಸಿದ ಮಗ ಪವನ್. ಪವನ್ ತಾಯಿ ಕೂಡ ಮೂರು ವರ್ಷಗಳ ಹಿಂದೆ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ನಂತರ ಈರಪ್ಪ ಮೂರನೇ ಮದುವೆಯಾಗಿದ್ದಾರೆ.

ಈ ಮೂರು ಜನ ಯುವಕರನ್ನು ಕಳೆದುಕೊಂಡ ಕುಟುಂಬಗಳ ಆಕ್ರಂದನ ಹೇಳತೀರದು. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಬಸವರಾಜ್ ಅವರಿಗೆ ಈಗ ಮಗಳೇ ಆಧಾರ. ದಿವಂಗತ ಶಿವಾಜಿ ಅವರ ಕುಟುಂಬದಲ್ಲಿ ಅವರ ಹಿರಿಯ ಮಗ ಅರುಣ್ ಒಬ್ಬಂಟಿಯಾಗಿದ್ದಾರೆ. ಈರಪ್ಪ ಅವರಿಗೆ ಮೂವರು ಪುತ್ರಿಯರು ಇದ್ದು ಅವರ ವಿವಾಹವಾಗಿದ್ದು, ಎಲ್ಲರೂ ಗಂಡನ ಮನೆಯಲ್ಲಿದ್ದಾರೆ. ಕುಟುಂಬಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT