ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಉತ್ಪಾದನೆ ತಡೆದರೆ ನಿಯಂತ್ರಣ ಸಾಧ್ಯ

ತಂಬಾಕು ನಿಯಂತ್ರಣ ಕಾಯ್ದೆ ಕುರಿತು ವೈದ್ಯರಿಗೆ ಒಂದು ದಿನದ ತರಬೇತಿ ಕಾರ್ಯಗಾರದಲ್ಲಿ ನ್ಯಾಯಾಧೀಶ ಸಾಬಪ್ಪ
Last Updated 15 ಡಿಸೆಂಬರ್ 2020, 13:25 IST
ಅಕ್ಷರ ಗಾತ್ರ

ದಾವಣಗೆರೆ: ತಂಬಾಕು ತಯಾರಿಸುವುದನ್ನೇ ನಿಲ್ಲಿಸಲು ಸಾಧ್ಯವಾದರೆ ತಂಬಾಕು ಸೇವನೆಯನ್ನು ನಿಯಂತ್ರಿಸಬಹುದು ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿದೆ. ಕಂಪನಿಗಳಲ್ಲಿ ತಂಬಾಕುಗಳಿಗೆ ಸಂಬಂಧಿಸಿದ ಉತ್ಪನ್ನ ತಡೆದರೆ ನಿಜವಾಗಿಯೂ ನಿಯಂತ್ರಣ ಸಾಧಿಸಬಹುದು. ಉತ್ಪನ್ನವೇ ಕೈಗೆ ಸಿಗದೇ ಇದ್ದರೆ ಅದಕ್ಕೆ ಬಲಿಯಾಗುವ, ಅದನ್ನಯ ತಡೆಯುವ ಪ್ರಮೇಯಗಳೇ ಬರುವುದಿಲ್ಲ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ಸಾಬಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಮಂಗಳವಾರ ನಗರದ ಚೇತನ ಹೋಟೆಲ್‍ನಲ್ಲಿ ಆಡಳಿತ ವೈದ್ಯಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳಿಗೆ ತಂಬಾಕು ನಿಯಂತ್ರಣ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸದಸ್ಯ ಕಾರ್ಯದರ್ಶಿ ಡಾ.ನಾಗರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ, ತಂಬಾಕು ಬಳಕೆಯಲ್ಲಿ ಸುಧಾರಣೆ ಕಂಡುಬಂದಿದೆ. ಆದರೆ ಹದಿಹರೆಯದವರಲ್ಲೇ ತಂಬಾಕು ಉತ್ಪನ್ನ ಬಳಕೆ ಹೆಚ್ಚುತ್ತಿದೆ. ಇಲ್ಲಿ ತರಬೇತಿ ಹೊಂದಿದ ವೈದ್ಯರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳು, ಸಮುದಾಯಕ್ಕೆ ಸಭೆ, ಸಮಿತಿಗಳು, ಸಮಾರಂಭಗಳಲ್ಲಿ ಮುಕ್ತವಾಗಿ ಈ ಬಗ್ಗೆ ಮಾಹಿತಿ ನೀಡಬೇಕು’ ಎಂದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಅರುಣ್‍ಕುಮಾರ್ ಎಲ್.ಎಚ್. ‘ಪ್ರತಿ ವರ್ಷ ವಿಶ್ವಾದ್ಯಂತ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಉತ್ಪಾದಿಸುವುದನ್ನೇ ನಿಲ್ಲಿಸಿದರೆ ಒಳಿತಲ್ಲವೇ ಎಂದು ವಿದ್ಯಾರ್ಥಿಗಳು ಪ್ರಶ್ನೆ ಕೇಳುತ್ತಾರೆ. ಆದರೆ ಉತ್ಪಾದನೆ ನಿಲ್ಲಿಸಿದಲ್ಲಿ ಇದಕ್ಕಿಂತ ಮಾರಕವಾದ ಉತ್ಪನ್ನಗಳ ಬಳಕೆಯಾಗಬಹುದು. ಸರ್ಕಾರದ ಆದಾಯದ ಮೂಲವಾಗಿರುವ ತಂಬಾಕು ಉತ್ಪನ್ನ ತಡೆ ಕಷ್ಟ. ಅದಕ್ಕಾಗಿಯೇ ನಿಯಂತ್ರಣ ಕಾಯ್ದೆ ಜಾರಿಗೆ ಬಂದಿದೆ’ ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ‘ಅಸಾಂಕ್ರಾಮಿಕ ರೋಗಗಳಿಂದ ಶೇ 60 ಸಾವು ಸಂಭವಿಸುತ್ತಿದೆ. ಅದಕ್ಕೆ ತಂಬಾಕು ಪ್ರಮುಖ ಕಾರಣವಾಗಿದೆ. ಹೃದ್ರೋಗ, ರಕ್ತದ ಅಧಿಕ ಒತ್ತಡ, ಸಕ್ಕರೆ ಕಾಯಿಲೆ, ಪಾರ್ಶ್ವವಾಯು, ಕ್ಯಾನ್ಸರ್‌ಗೂ ಇದು ಕಾರಣವಾಗಿದೆ’ ಎಂದರು.

ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿ ಡಾ. ಗಂಗಾಧರ್ ಕೆ.ಎಚ್., ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಮಹಾಂತೇಶ್ ಉಳ್ಳಾಗಡ್ಡಿ ಉಪನ್ಯಾಸ ನೀಡಿದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ವಿ.ವರ್ಕೇರಿ ಸ್ವಾಗತಿಸಿದರು. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಸಮಾಜ ಕಾರ್ಯಕರ್ತ ಕೆ.ಪಿ ದೇವರಾಜ್ ನಿರೂಪಿಸಿದರು. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT