ಮಂಗಳವಾರ, ಸೆಪ್ಟೆಂಬರ್ 27, 2022
27 °C

ದಾವಣಗೆರೆ: ರೈತ ಮೋರ್ಚಾದಿಂದ ಬೃಹತ್ ಟ್ರ್ಯಾಕ್ಟರ್‌ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ರೈತ ಮೋರ್ಚಾವತಿಯಿಂದ ಇಲ್ಲಿನ ವಿದ್ಯಾನಗರ ಸರ್ಕಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಟ್ರ್ಯಾಕ್ಟರ್ ಜಾಥಾ ಗಮನ ಸೆಳೆಯಿತು.

ಸಂಸದ ಜಿ.ಎಂ. ಸಿದ್ದೇಶ್ವರ ಜಾಥಾಕ್ಕೆ ಚಾಲನೆ ನೀಡಿದರು. ವಿದ್ಯಾನಗರ ಸರ್ಕಲ್‌ನಿಂದ ಆರಂಭಗೊಂಡ ಜಾಥಾ ಡೆಂಟಲ್ ಕಾಲೇಜು ರಸ್ತೆಯ ಮೂಲಕ ಗುಂಡಿ ಛತ್ರ ತಲುಪಿ, ವಿದ್ಯಾರ್ಥಿಭವನದ ಸರ್ಕಲ್ ಮೂಲಕ ಅಂಬೇಡ್ಕರ್ ವೃತ್ತದ ಮೂಲಕ ಜಯದೇವ ವೃತ್ತದಲ್ಲಿ ಅಂತ್ಯಗೊಂಡಿತು.

ಸ್ವಾತಂತ್ರ್ಯ ಹೋರಾಟಗಾರರಾದ ಛತ್ರಪತಿ ಶಿವಾಜಿ, ಭಗತ್‌ಸಿಂಗ್, ರಾಜಗುರು, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಬಾಲಗಂಗಾಧರ್ ತಿಲಕ್, ಮೊರಾರ್ಜಿ ದೇಸಾಯಿ, ಸರ್ವಪಲ್ಲಿ ರಾಧಾಕೃಷ್ಣನ್, ಜಾಕೀರ್ ಹುಸೇನ್ ಅಲ್ಲದೇ ಎಂ.ಎಸ್. ಗೊಲವಾಲ್ಕರ್, ವೀರ ಸಾವರ್ಕರ್ ಅವರ ಚಿತ್ರಗಳನ್ನು 100ಕ್ಕೂ ಟ್ರ್ಯಾಕ್ಟರ್‌ಗಳಲ್ಲಿ ಸ್ವಾತಂತ್ರ್ಯ  ಅಳವಡಿಸಿಕೊಂಡು ಜಾಗೃತಿ ಮೂಡಿಸಲಾಯಿತು. 

‘ಸ್ವತಂತ್ರ್ಯ ಕಾಲದಲ್ಲಿ ಬ್ರಿಟಿಷರು ಒಡೆದು ಹಾಳುವ ನೀತಿಯನ್ನು ಅನುರಿಸಿದರು. ಈ 75 ವರ್ಷಗಳಲ್ಲಿ ದೇಶ ಪ್ರಗತಿ ಸಾಧಿಸಿದ್ದು, ಇನ್ನಷ್ಟು ಪ್ರಗತಿ ಸಾಧಿಸಲಿ’ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್ ಆಶಿಸಿದರು.

‘ದೇಶ ವಿಭಜನೆಯ ಕಾಲದಲ್ಲಿ, ಪಾಕೀಸ್ತಾನ, ಭಾರತ, ಬಾಂಗ್ಲಾವನ್ನು ವಿಭಜನೆ ಮಾಡಿ ನಮ್ಮನಮ್ಮಲ್ಲೇ ಕಚ್ಚಾಟ ಆರಂಭಿಸಿದರು. ಈ ದಿನವನ್ನು ಯಾರೂ ಮರೆಯಬಾರದು’ ಎಂದು ಪಕ್ಷದ ಜಿಲ್ಲಾ ಉಸ್ತುವಾರಿ ಶಿವಲಿಂಗಪ್ಪ ಹೇಳಿದರು. 

‘ಸ್ವಾತಂತ್ರ್ಯವನ್ನು ನಾವು ಬ್ರಿಟಿಷರಿಂದ ಹಣ ಕೊಟ್ಟು ಕೊಂಡುಕೊಂಡಿಲ್ಲ. ಬದಲಾಗಿ ಸಾವಿರಾರು ಮಂದಿ ಹುತಾತ್ಮರಾಗಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನದಡಿಯಲ್ಲಿ ನರೇಂದ್ರ ಮೋದಿ ನಾಯಕತ್ವದಡಿ ಎಲ್ಲರೂ ಹೊಂದಿಕೊಂಡು ಹೋಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಳಿಗಾಲವಿಲ್ಲ’ ಎಂದು ಪಕ್ಷದ ರೈತ ಉಸ್ತುವಾರಿ ಫಾಲಾಕ್ಷಗೌಡ ಪಟೇಲ್ ಎಚ್ಚರಿಸಿದರು.

ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ, ಮೇಯರ್ ಜಯಮ್ಮ ಗೋಪಿನಾಯ್ಕ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯೆ ಗೀತಾ ದಿಳ್ಯೆಪ್ಪ, ಮಾಜಿ ಮೇಯರ್‌ಗಳಾದ ಎಸ್‌.ಟಿ.ವೀರೇಶ್, ಬಿ.ಜಿ. ಅಜಯ್‌ಕುಮಾರ್, ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಬಸವರಾಜನಾಯ್ಕ, ಮುಖಂಡರಾದ ಅಣಜಿ ಗುಡ್ಡೇಶ್, ಗೋಪನಾಳ್ ಅಶೋಕ್ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು