ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ, ಏಕಾಗ್ರತೆಯ ಸಾಧಕನೇ ವಿವೇಕಾನಂದ

ಯುವ ಸಮಾವೇಶ ಉದ್ಘಾಟಿಸಿದ ಸ್ವಾಮಿ ರಾಘವೇಶಾನಾಂದಜೀ ಮಹಾರಾಜ್‌
Last Updated 12 ಜನವರಿ 2020, 14:00 IST
ಅಕ್ಷರ ಗಾತ್ರ

ದಾವಣಗೆರೆ: ಸ್ವಾಮಿ ವಿವೇಕಾನಂದರಂತೆ ನೀವೂ ಧೀರ, ಶೂರರಾಗಬೇಕಿದ್ದರೆ ಸತ್ಯ ಹೇಳುವುದನ್ನು ಕಲಿಯಬೇಕು. ಏಕಾಗ್ರತೆ ಇರಬೇಕು. ಬಾಹುಬಲ ಗಟ್ಟಿ ಇರಬೇಕು. ಸತ್ಯ ಮತ್ತು ಏಕಾಗ್ರತೆಯ ಸಾಧಕನೇ ವಿವೇಕಾನಂದ ಎಂದು ತಮುಳುನಾಡು ಉದಕಮಂಡಲದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ರಾಘವೇಶಾನಂದಜೀ ಮಹಾರಾಜ್‌ ಹೇಳಿದರು.

ಇಲ್ಲಿನ ರಾಮಕೃಷ್ಣ ಮಿಷನ್‌ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯುವ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ತಮಾಷೆಗೂ ಸುಳ್ಳು ಹೇಳಲ್ಲ ಎಂದು ವಿವೇಕಾನಂದರು ಹೇಳುತ್ತಿದ್ದರು. ಸತ್ಯವಂತರಾದರೆ ಜಗತ್ತೇ ನಿಮ್ಮ ಪದತಳದಲ್ಲಿರುತ್ತದೆ. ಅಂಥ ಸತ್ಯವನ್ನು ಅಸ್ತ್ರ ಮಾಡಿಕೊಂಡ ಮತ್ತೊಬ್ಬರು ಯಾರೆಂದರೆ ಮಹಾತ್ಮಗಾಂಧಿ. ಹಾಗಾಗಿ ಅವರಿಗೆ ಬ್ರಿಟಿಷರನ್ನು ಎದುರಿಸಲು ಆಯಿತು. ಸತ್ಯಮೇವ ಜಯತೇ ಎಂದು ವಿಧಾನಸೌಧದಲ್ಲಿ ಬರೆದಿದೆ. ಆದರೆ ನಿತ್ಯ ನಾವು ಸುಳ್ಳುಗಳನ್ನೇ ಆಡುತ್ತೇವೆ’ ಎಂದು ಟೀಕಿಸಿದರು.

‘ವಿವೇಕಾನಂದರು ಧ್ಯಾನಕ್ಕೆ ಕುಳಿತರೆ ಎರಡು–ಮೂರು ದಿನಗಳವರೆಗೂ ಏಳದಷ್ಟು ಏಕಾಗ್ರತೆ ಅವರದ್ದು. ಅಂಥ ಸಾಧನೆ ಮಾಡಿದವರು. ಧ್ಯಾನ ಮಾಡಬೇಕು ಎಂದು ಎಲ್ಲ ರಿಗೂ ಆಸೆ ಇರುತ್ತದೆ. ಆದರೆ ಐದು ನಿಮಿಷ ಕುಳಿತುಕೊಳ್ಳಲು ಆಗುವುದಿಲ್ಲ. ಧ್ಯಾನಕ್ಕೆ ಕುಳಿತ ಎರಡನೇ ನಿಮಿಷಕ್ಕೇ ಬಹಳ ಹೊತ್ತಾಯಿತು ಎಂದಂದುಕೊಳ್ಳ ತೊಡಗುತ್ತೇವೆ. ಏಕಾಗ್ರತೆ ಇಲ್ಲದೇ ಆಂತರ್ಯದಲ್ಲಿರುವ ಭಗವಂತ ಅಥವಾ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದರು.

ನಮ್ಮ ವಿದ್ಯಾರ್ಥಿಗಳು ಓದಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಾರೆ. ಟೈಮ್‌ಟೇಬಲ್‌ ಕೂಡ ಹಾಕಿಕೊಳ್ಳುತ್ತಾರೆ. ಆದರೆ ಓದಲು ಮಾತ್ರ ಕಷ್ಟಪಡುತ್ತಾರೆ. ವಿವೇಕಾನಂದರು ಓದುವುದು ಅಂದರೆ ಅವರಿಗೆ ಹೊರಗಿನ ಪರಿವೇ ಇರುತ್ತಿರಲಿಲ್ಲ. ಅವರ ಕಣ್ಣಿಗೆ ಅಕ್ಷರಗಳಷ್ಟೇ ಕಾಣಿತ್ತಿದ್ದವು. ಅಲ್ಲಿಂದ ‌ಮೆದುಳಿಗೆ ಹೋಗುತ್ತಿತ್ತು. ಅಲ್ಲಿ ಸ್ಥಿರವಾಗಿ ಉಳಿಯುತ್ತಿತ್ತು. ಅಂಥ ಏಕಾಗ್ರತೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಬದುಕಿನಲ್ಲಿ ಪ್ರಲೋಭನೆಗಳು ಬರುತ್ತ ಇರುತ್ತವೆ. ಅವುಗಳನ್ನು ಗೆಲ್ಲಬೇಕು. ದುರ್ಬಲ ಮನಸ್ಸಿನವರಾದ ನಾವು ಪ್ರಲೋಭನೆಗೆ ಒಳಗಾಗಿ ಬಿಡುತ್ತೇವೆ. ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿ ಭಾಷಣ ಮಾಡುವ ಹಿಂದಿನ ದಿನವೂ ಅವರಿಗೆ ಊಟ ಸಿಕ್ಕಿರಲಿಲ್ಲ. ಮಲಗಲು ವ್ಯವಸ್ಥೆ ಇರಲಿಲ್ಲ. ಆದರೆ ಅವರ ಭಾಷಣ ಕೇಳಿದ ಮೇಲೆ ಎಲ್ಲರೂ ಅವರನ್ನು ಹಾಡಿ ಹೊಗಳಿದ್ದರು. ರಾತ್ರಿ ಶ್ರೀಮಂತರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯಾಗಿತ್ತು. ಆದರೆ ವಿವೇಕಾನಂದರು ಅಲ್ಲಿ ಕೊರಗುತ್ತಾ ಹೊರಳಾಡುತ್ತಿದ್ದರು. ಯಾಕೆಂದರೆ ಇಲ್ಲಿ ವೈಭೋಗ ಇದೆ. ಆದರೆ ನನ್ನ ದೇಶದ ಜನರು ಒಪ್ಪೊತ್ತಿನ ಊಟಕ್ಕೂ ತೊಂದರೆಯಲ್ಲಿದ್ದಾರಲ್ಲ ಎಂಬುದು ಅವರ ಕೊರಗಿಗೆ ಕಾರಣವಾಗಿತ್ತು. ಅಂಥ ದೇಶಪ್ರೇಮ ಬೆಳೆಸಿಕೊಳ್ಳಬೇಕು’ ಎಂದರು.

ಎಲ್ಲರ ಆಂತರ್ಯದಲ್ಲಿ ಅದ್ಭುತ ದೈವಶಕ್ತಿ ಇರುತ್ತದೆ ಎಂದು ಅಮೆರಿಕನ್ನರಿಗೆ ತಿಳಿಸಿಕೊಟ್ಟವರು ವಿವೇಕಾನಂದರು. ಅಲ್ಲಿಯವರೆಗೆ ಎಲ್ಲರೂ ಪಾಪಾತ್ಮರು. ವಾರಕ್ಕೊಮ್ಮೆ ಚರ್ಚ್‌ಗೆ ಹೋಗಿ ದುಡ್ಡುಕೊಟ್ಟು ತಪ್ಪೊಪ್ಪಿಗೆ ಮಾಡಿಕೊಳ್ಳಬೇಕು ಎಂದು ಅಮೆರಿಕನ್ನರು ತಿಳಿದಿದ್ದರು. ಎಲ್ಲ ವೈಭವ ಇದ್ದರೂ ಅಧ್ಯಾತ್ಮದ ಕೊರತೆಯಿಂದಾಗಿ ಶಾಂತಿ, ಆನಂದ ಯಾಕೆ ಇಲ್ಲ ಎಂಬುದನ್ನು ಸ್ವಾಮಿ ವಿವೇಕಾನಂದರು ಹೇಳಿಕೊಟ್ಟಿದ್ದರು ಎಂದು ನೆನಪಿಸಿಕೊಂಡರು.

ಸೇವಾ ತತ್ಪರರಾಗುವುದೇ ದೇವ ಕಾರ್ಯ. ನನ್ನಲ್ಲಿರುವುದನ್ನು ಬೇರೆಯವರಿಗೆ ಹಂಚಿಕೊಳ್ಳುವುದೇ ವಿದ್ಯೆ. ಭಾರತ ಮುಂದೊಂದು ದಿನ ಜಗತ್ತನ್ನು ಆಳಲಿದೆ. ಬಾಂಬ್‌, ಗನ್‌ಗಳ ಮೂಲಕ ಅಲ್ಲ, ಅಧ್ಯಾತ್ಮದ ಮೂಲಕ ಎಂದು ಅವರು ನಂಬಿದ್ದರು ಎಂದರು.

ಕೋಲ್ಕತದ ರಾಮಕೃಷ್ಣ ಮಹಾಸಂಘದ ಟ್ರಸ್ಟಿ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್‌, ಬೆಂಗಳೂರು ರಾಮಕೃಷ್ಣ ವಿದ್ಯಾರ್ಥಿ ಮಂದಿರಂ ಮುಖ್ಯಸ್ಥ ಸ್ವಾಮಿ ತದ್ಯುಕ್ತಾನಂದಜೀ ಮಹಾರಾಜ್‌, ದಾವಣಗೆರೆ ರಾಮಕೃಷ್ಣ ಮಿಷನ್‌ನ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್‌, ಸ್ವಾಮಿ ನಿತ್ಯಸ್ಥಾನಂದ, ಟಿ.ಎಸ್‌. ಜಯರುದ್ರೇಶ್‌, ರಮೇಶ್‌ ಬಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT