ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಸಿಣ ಕೃಷಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಯಶೋಗಾಥೆ

ಅಡಿಕೆ ಗಿಡಗಳ ಮಧ್ಯೆ ಸಮೃದ್ಧವಾಗಿ ಬೆಳೆದ ಅರಿಸಿಣ
Last Updated 16 ಫೆಬ್ರುವರಿ 2022, 5:48 IST
ಅಕ್ಷರ ಗಾತ್ರ

ಬಸವಾಪಟ್ಟಣ: ಸಮೀಪದ ಕಾರಿಗನೂರಿನ ಯುವಕ, ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ರಕ್ಷಿತ್‌ಕುಮಾರ್‌ ತಮ್ಮ ಎರಡು ಎಕರೆಯ ಅಡಿಕೆ ಗಿಡಗಳ ಮಧ್ಯೆ ಔಷಧೀಯ ಗುಣವುಳ್ಳ, ಸಾಂಬಾರ ಪದಾರ್ಥ, ಸೌಂದರ್ಯ ವರ್ಧಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುವ ಅರಿಸಿಣವನ್ನು ಬೆಳೆದು ಯಶಸ್ಸು ಪಡೆದಿದ್ದಾರೆ.

ಪ್ರಗತಿಪರ ರೈತರ ಗ್ರಾಮವೆಂದೇ ಹೆಸರಾಗಿರುವ ಕಾರಿಗನೂರಿನ ಯುವಕ ರಕ್ಷಿತ್‌ಕುಮಾರ್‌ ನಾಲ್ಕು ವರ್ಷಗಳಿಂದ ದೆಹಲಿಯ ಖಾಸಗಿ ಸಂಸ್ಥೆಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ, ಮನೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದರು. ಇವರ ಐದೂವರೆ ಎಕರೆ ಜಮೀನಿನಲ್ಲಿ ಭತ್ತ ಮತ್ತು ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಬಿಡುವಿನ ವೇಳೆಯಲ್ಲಿ ಅರಿಸಿಣ ಕೃಷಿ ಮಾಡುವ ಆಲೋಚನೆ ಬಂತು. ಎರಡು ವರ್ಷ ವಯಸ್ಸಿನ ಅಡಿಕೆ ಗಿಡಗಳ ಮಧ್ಯೆ ಒಂಬತ್ತು ತಿಂಗಳ ಹಿಂದೆ ಹಾಕಿದ್ದ ಅರಿಸಿಣ ಈಗ ಸಮೃದ್ಧ ಫಲ ನೀಡಿದೆ.

ಅರಿಸಿಣ ಒಂದು ಉತ್ತಮ ಲಾಭದಾಯಕ ಬೆಳೆಯಾಗಿದೆ. ಒಂಬತ್ತು ತಿಂಗಳಿಗೆ ಕೈಗೆ ಬರುವ ಫಸಲು. ಕೆಂಪು ಮತ್ತು ಕಪ್ಪು ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಇದನ್ನು ನಾಟಿ ಮಾಡುವ ಮೊದಲು ಜಮೀನಿನಲ್ಲಿ ಹುರುಳಿ, ಸೆಣಬು, ಚಂಬೆ ಮುಂತಾದ ಯಾವುದಾದರೂ ಒಂದು ಹಸಿರೆಲೆ ಬೆಳೆಯನ್ನು ಬೆಳೆದು ಅದನ್ನು ಮಣ್ಣಿನಲ್ಲಿ ಸೇರಿಸಬೇಕು. ಇದರೊಂದಿಗೆ ಎಕರೆಗೆ ಐದು ಟ್ರ್ಯಾಕ್ಟರ್‌ ಕೊಟ್ಟಿಗೆ ಗೊಬ್ಬರವನ್ನು ಬಳಸಬೇಕು. ನಂತರ ಮೂರು ಅಡಿ ಅಂತರದಲ್ಲಿ ಏರುಮಡಿಗಳನ್ನು ಮಾಡಿ (ಬೆಡ್‌ ಸಿಸ್ಟಮ್‌), ಮಡಿಯ ಎರಡೂ ಬದಿಗಳಲ್ಲಿ 45 ಸೆಂ.ಮೀ ಅಂತರದಲ್ಲಿ ಅರಿಸಿಣ ಕೊಂಬುಗಳನ್ನು ನಾಟಿ ಮಾಡಬೇಕು.

‘ನಾಟಿ ಮಾಡಲು ಒಂದು ಎಕರೆಗೆ ಎಂಟು ಕ್ವಿಂಟಲ್‌ ಅರಿಸಿಣ ಕೊಂಬುಗಳು ಬೇಕು. ನಾನು ಅಡಿಕೆ ಬೆಳೆಯಲ್ಲಿ ಉಪ ಬೆಳೆಯಾಗಿ ಅರಿಸಿಣವನ್ನು ಬೆಳೆದಿದ್ದರಿಂದ ಎಕರೆಗೆ ನಾಲ್ಕು ಕ್ವಿಂಟಲ್‌ ಅರಿಸಿಣ ಕೊಂಬುಗಳನ್ನು ಬಳಸಿದ್ದೇನೆ. ನಾಟಿ ಮಾಡುವ ಮುಂಚೆ ಅರಿಸಿಣ ಕೊಂಬುಗಳನ್ನು ಸುಡುವ ನೀರಿನಲ್ಲಿ ಮೆಟಲಾಕ್‌ ಮ್ಯಾರಕೋಸ್‌ ಎಂಬ ಬೀಜೋಪಚಾರದ ರಾಸಾಯನಿಕವನ್ನು ಒಂದು ಲೀಟರ್‌ ನೀರಿಗೆ ಮೂರು ಗ್ರಾಮನಂತೆ ಬೆರೆಸಿ ಒಂದು ಗಂಟೆ ನೆನೆಸಿ ನೆರಳಿನಲ್ಲಿ ಒಣಗಿಸಿ ಮಾರನೇ ದಿನ ನಾಟಿ ಮಾಡಬೇಕು. ಇದರಿಂದ ಗಡ್ಡೆ ಕೊಳೆರೋಗ ಜಂತು ಹುಳದ ಕಾಟವನ್ನು ತಡೆಗಟ್ಟಬಹುದು. ಅರಿಸಿಣ ನಿಧಾನವಾಗಿ ಮೊಳಕೆ ಒಡೆಯುತ್ತದೆ. ಈ ಸಂದರ್ಭದಲ್ಲಿ ಪೋಷಕಾಂಶಗಳನ್ನು ನೀಡಬೇಕು. ಗಡ್ಡೆ ಬೆಳೆಯುವ ಸಂದರ್ಭದಲ್ಲಿ ನಾನೇ ತಯಾರಿಸಿದ ಜೀವಾಮೃತವನ್ನು ಸಿಂಪರಣೆ ಮಾಡಿದ್ದೇನೆ. ದ್ರವರೂಪದ ಗೊಬ್ಬರ ಇದಕ್ಕೆ ಅಗತ್ಯ. ಬೆಳೆಯಲ್ಲಿ ನೆಲ ಬಿರುಕು ಬಿಡುವ ಮುಂಚೆ ಹನಿ ನೀರಾವರಿ ಪದ್ಧತಿಯಲ್ಲಿ ನೀರನ್ನು ಹಾಯಿಸಬೇಕು. ಐದು ತಿಂಗಳ ನಂತರ ನೆಲದ ಒಳಗೆ ಗಡ್ಡೆಗಳು ಬೆಳೆಯ ತೊಡಗುತ್ತವೆ. ಆಗ ಯಾವ ಪೋಷಕಾಂಶವನ್ನೂ ಬೆಳೆಗೆ ನೀಡಬಾರದು. ಒಂಬತ್ತು ತಿಂಗಳ ನಂತರ ಅರಿಸಿಣವನ್ನು ಕೊಯ್ಲು ಮಾಡಿದಾಗ ನನಗೆ 120 ಕ್ವಿಂಟಲ್‌ ಹಸಿ ಅರಿಸಿಣ ದೊರೆತಿದೆ. ಅದನ್ನು 15 ದಿನ ಒಣಗಿಸಿ ಸಂಸ್ಕರಣೆ ಮಾಡಿದಾಗ 30 ಕ್ವಿಂಟಲ್‌ ಶುದ್ಧ ಅರಿಸಿಣ ದೊರೆತಿದೆ. ಆದರೆ ಕೇವಲ ಅರಿಸಿಣವನ್ನೇ ಬೆಳೆದರೆ ಎಕರೆಗೆ 30 ರಿಂದ 35 ಕ್ವಿಂಟಲ್‌ ಇಳುವರಿ ದೊರೆಯುತ್ತದೆ. ಕರ್ನಾಟಕದಲ್ಲಿ ಇದರ ಮಾರುಕಟ್ಟೆ ಚಾಮರಾಜನಗರ ಮಾತ್ರ. ಮಹಾರಾಷ್ಟ್ರದಲ್ಲಿ ಸಾಂಗ್ಲಿ ಮತ್ತು ತಮಿಳುನಾಡಿನಲ್ಲಿ ಹಲವು ಕಡೆ ಮಾರುಕಟ್ಟೆಗಳಿವೆ’ ಎಂದು ಅವರು ತಿಳಿಸಿದರು.

‘ಈಗ ಕ್ವಿಂಟಲ್‌ಗೆ ಸುಮಾರು ₹ 9,000 ದರ ಇದೆ. ಅರಿಸಿಣದ ಉಪ ಬೆಳೆಗೆ ನನಗೆ ₹ 40 ಸಾವಿರ ಖರ್ಚು ಬಂದಿದೆ. ಸಾಕಷ್ಟು ಲಾಭವಾಗಿದೆ. ಮೈಸೂರಿನ ನೈಸರ್ಗಿಕ ಕೃಷಿಕ ತಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ನಾನು ಈ ಸಾಧನೆ ಮಾಡಲು ಸಾಧ್ಯವಾಗಿದೆ. ನಮ್ಮ ಈ ಬೆಳೆಯನ್ನು ನೋಡಿ ಈ ಭಾಗದ ಅನೇಕ ರೈತರು ಅರಿಸಿಣ ಬೆಳೆಯಲು ಆಸಕ್ತಿ ತೋರಿದ್ದಾರೆ. ಅವರಿಗೆ ಈ ಬಗ್ಗೆ ನೆರವಾಗಲು ಸಂಪೂರ್ಣ ಮಾಹಿತಿ ನೀಡಿದ್ದೇನೆ. ಮುಂದಿನ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಬಿತ್ತನೆ ಮಾಡಲು ಅರಿಸಿಣ ಕೊಂಬುಗಳನ್ನು ನಿಗದಿತ ದರದಲ್ಲಿ ಒದಗಿಸುವುದರೊಂದಿಗೆ ಮುಂದೆ ಅವರು ಬೆಳೆಯನ್ನು ಒಕ್ಕಲು ಮಾಡಿದಾಗ ಅವರು ನನ್ನೊಂದಿಗೆ ಮಾಡಿಕೊಂಡ ಪೂರ್ವ ನಿರ್ಧರಿತ ಬೆಲೆಗೆ ನಾನೇ ಖರೀದಿಸಲು ಟ್ರೇಡಿಂಗ್‌ ಲೈಸೆನ್ಸ್‌ ಸಹ ಪಡೆದುಕೊಂಡಿದ್ದೇನೆ. ಅರಿಸಿಣ ಬೆಳೆಯಲು ಯಾವುದೇ ಭಾಗದ ರೈತರು ಇಚ್ಛಿಸಿದರೆ ಮಾರ್ಗದರ್ಶನ ನೀಡಲು ಸದಾ ಸಿದ್ಧ’ ಎನ್ನುತ್ತಾರೆ ರಕ್ಷಿತ್‌ಕುಮಾರ್‌ (9538432357).

ಲಾಭದಾಯಕ ಬೆಳೆ ಬೆಳೆಯಿರಿ

‘ರೈತರು ಕೇವಲ ಸಾಂಪ್ರದಾಯಿಕ ಫಸಲನ್ನೇ ಬೆಳೆಯುವ ಬದಲು ಇಂತಹ ಲಾಭದಾಯಕ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು.
ಈಗ ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಅದರ ಮಧ್ಯದಲ್ಲಿ ರಕ್ಷಿತ್‌ ಅವರಂತೆ ಅರಿಸಿಣವನ್ನು ಬೆಳೆದು ಸಾಕಷ್ಟು ಲಾಭಗಳಿಸಬಹುದು’ ಎನ್ನುತ್ತಾರೆ ತಾಲ್ಲೂಕು ತೋಟಗಾರಿಕೆ ಅಧಿಕಾರಿ ರೋಹಿತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT