ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾಪಟ್ಟಣ | ಹಿಂದೆಂದೂ ಕಾಣದ ಬಿಸಿಲಿನ ತಾಪ; ಜನ ಸುಸ್ತು

Published 6 ಮೇ 2024, 13:37 IST
Last Updated 6 ಮೇ 2024, 13:37 IST
ಅಕ್ಷರ ಗಾತ್ರ

ಬಸವಾಪಟ್ಟಣ: ಕಳೆದ ವರ್ಷ ಮಳೆಯ ಪ್ರಮಾಣ ತುಂಬಾ ಕಡಿಮೆಯಾಗಿ, ಈ ಭಾಗದ ಕೆರೆ ಕಟ್ಟೆಗಳು ಸಂಪೂರ್ಣ ಒಣಗಿ, ಜನ ಜಾನುವಾರುಗಳಿಗೆ ನೀರಿಲ್ಲದಂತಾಗಿದೆ. 

ಬೇಸಿಗೆ ಹಂಗಾಮಿನ ಬೆಳೆಗಳು ನೀರಿಲ್ಲದೇ ಒಣಗಿವೆ. ಫೆಬ್ರುವರಿಯಿಂದ ಬೇಸಿಗೆಯ ಬಿರು ಬಿಸಿಲು ಜನರನ್ನು  ಹೈರಾಣಾಗಿಸಿದೆ. ಏಪ್ರಿಲ್‌ನಿಂದ ಜಿಲ್ಲೆಯಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. 

ಮುಂಜಾನೆ 10 ಗಂಟೆಯಿಂದ ಸಂಜೆ 6ರ ವರೆಗೆ ಮಕ್ಕಳು ವೃದ್ಧರು, ರೋಗಿಗಳು ಬಿಸಿಲಿನ ತಾಪದಿಂದಾಗಿ ಮನೆಯಿಂದ ಹೊರಬಾರದಂತಾಗಿದೆ. 

ಮಧ್ಯಾಹ್ನದ ವೇಳೆಯಲ್ಲಿ ಬಿಸಿಲಿನ ಹೊಡೆತಕ್ಕೆ ಜನ ಸಂಚಾರ ಕಡಿಮೆಯಾಗಿ ರಸ್ತೆಗಳು ಬಿಕೋ ಎನ್ನುತ್ತಿವೆ. ಈ ವೇಳೆಗೆ ಪ್ರತಿ ವರ್ಷ ಬರುತ್ತಿದ್ದ ಮಳೆರಾಯ ಈ ಬಾರಿ ಇನ್ನೂ ಬಂದಿಲ್ಲ. ಸಾರ್ವಜನಿಕರು ಬಿಸಿಲಿನ ಬೇಗೆಯಿಂದ ಪಾರಾಗಲು ಮಜ್ಜಿಗೆ, ಎಳನೀರು, ಪಾನಕ, ಇತರ ತಂಪಾದ ಪಾನೀಯಗಳು, ಕಲ್ಲಂಗಡಿ ಕರಬೂಜದಂತಹ ಹಣ್ಣುಗಳ ಸೇವನೆಯಲ್ಲಿ ತೊಡಗಿದ್ದಾರೆ. 

ಸಿದ್ಧಪಡಿಸಿದ ತಂಪು ಪಾನೀಯಗಳು ಮತ್ತು ಶುದ್ಧ ನೀರಿನ ಬಾಟಲಿಗಳು ಹೆಚ್ಚು ಖರೀದಿಯಾಗುತ್ತಿವೆ. ಮದ್ಯದ ಅಂಗಡಿಗಳಲ್ಲಿ ಬಿಯರ್‌ ಮಾರಾಟ ಜೋರಾಗಿದೆ. ಬಿಸಿಲಿನ ಪರಿಣಾಮವಾಗಿ ಸಂತೆಗಳು, ಜಾತ್ರೆಗಳು, ರಥೋತ್ಸವಗಳು, ಮದುವೆಯಂತಹ ಶುಭಕಾರ್ಯಗಳಲ್ಲಿಯೂ ಜನ ಹೆಚ್ಚಾಗಿ ಸೇರುತ್ತಿಲ್ಲ.  

ಚುನಾವಣೆಯಲ್ಲಿಯೂ ಅಭ್ಯರ್ಥಿಗಳೊಂದಿಗೆ ಯುವಕರು ಮಾತ್ರವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೇವಿಸಿದ ಆಹಾರ ಪದಾರ್ಥಗಳು ಸರಿಯಾಗಿ ಜೀರ್ಣವಾಗದೇ ಅಶಕ್ತರು ಅಜೀರ್ಣತೆಯಿಂದ ಬಳಲುತ್ತಿದ್ದಾರೆ. ಅನಿವಾರ್ಯ ಸಂದರ್ಭಗಳನ್ನು ಬಿಟ್ಟರೆ ಜನರು ದೂರದ ಊರುಗಳಿಗೆ ಪ್ರಯಾಣ ಮಾಡಲು ಹಿಂಜರಿಯುತ್ತಿದ್ದಾರೆ. 

ವ್ಯಾಪಾರಿಗಳು ಸಂತೆಗೆ ಮಾರಲು ತಂದ ತರಕಾರಿ ಮತ್ತು ಹಣ್ಣು, ಹೂಗಳು ಬಿಸಿಲಿನಿಂದ ಒಣಗುತ್ತಿವೆ. ಕೆಲ ವ್ಯಾಪಾರಿಗಳು ಸಂತೆಗಳಿಗೆ ಬರುವುದನ್ನು ನಿಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT