ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡದ ಒಮ್ಮತ: ಶಾಸಕ– ಇಇ ನಡುವೆ ವಾಗ್ವಾದ

ಹರಿಹರ: ಬೀರೂರು– ಸಮ್ಮಸಗಿ ಹೆದ್ದಾರಿ ಕಾಮಗಾರಿ ವಿಚಾರ
Published 10 ಡಿಸೆಂಬರ್ 2023, 5:04 IST
Last Updated 10 ಡಿಸೆಂಬರ್ 2023, 5:04 IST
ಅಕ್ಷರ ಗಾತ್ರ

ಹರಿಹರ: ನಗರದ ಬೀರೂರು– ಸಮ್ಮಸಗಿ ಹೆದ್ದಾರಿ ಕಾಮಗಾರಿ ಕೈಗೊಳ್ಳುವ ಕುರಿತು ಶನಿವಾರ ಶಾಸಕ ಬಿ.ಪಿ.ಹರೀಶ್ ಹಾಗೂ ಪಿಡಬ್ಲ್ಯುಡಿ ಅಧಿಕಾರಿಗಳ ನಡುವೆ ಒಮ್ಮತ ಮೂಡದ್ದರಿಂದ ಸಭೆಗಳು ವಿಫಲವಾದವು.

ಮೊದಲು ಮಧ್ಯಾಹ್ನ 2ಕ್ಕೆ ತಾಲ್ಲೂಕು ಕಚೇರಿಯಲ್ಲಿ ಬಿ.ಪಿ.ಹರೀಶ್, ತಹಶೀಲ್ದಾರ್ ಗುರುಬಸವರಾಜ್, ಪಿಡಬ್ಲ್ಯುಡಿ ಇಇ ನರೇಂದ್ರಬಾಬು, ಎಇಇ ಶಿವಮೂರ್ತಿ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಶಾಸಕರ ಮಾತಿಗೆ ಪಿಡಬ್ಲ್ಯುಡಿ ಅಧಿಕಾರಿಗಳು ಸಹಮತ ತೋರದ್ದರಿಂದ ವಾಗ್ವಾದ ನಡೆಯಿತು.

ನಂತರ ಎಲ್ಲರೂ ಸೇರಿ ಕಾಮಗಾರಿ ನಡೆಯಬೇಕಾದ ಸ್ಥಳಕ್ಕೆ ತೆರಳಿದರು. ಈ ವೇಳೆ ಇಇ ನರೇಂದ್ರಬಾಬು ಸಿಬ್ಬಂದಿಗೆ ಹಳೆ ಸೇತುವೆಯನ್ನು ಆಧಾರವಿಟ್ಟುಕೊಂಡು ಆಳತೆ ಮಾಡುವಂತೆ ಸೂಚಿಸಿದರು. ಇದರಿಂದ ಕುಪಿತಗೊಂಡ ಹರೀಶ್‌ ಅವರು ವಾಹನ ಸಂಚಾರ ಇರುವ ಹೊಸ ಸೇತುವೆಯನ್ನು ಆಧಾರವಾಗಿಟ್ಟುಕೊಂಡು ಹೆದ್ದಾರಿ ನಿರ್ಮಿಸಿ ಎಂದರು.

ಆಗ ನರೇಂದ್ರಬಾಬು, ‘ದರ್ಗಾ ಮುಂದೆ ಲೋಕೋಪಯೋಗಿ ಇಲಾಖೆಗೆ ಸೇರಿದ ಸಾಕಷ್ಟು ಜಾಗ ಇದೆ. ಅದನ್ನು ಬಳಸಿಕೊಂಡು ಕಾಮಗಾರಿ ಕೈಗೊಳ್ಳುವುದು ಸೂಕ್ತ’ ಎಂದಾಗ, ‘ದಾಖಲೆಯಲ್ಲಿರುವಂತೆ ಕಾಮಗಾರಿ ಕೈಗೊಳ್ಳುವ ಬದಲು ಪಿಡಬ್ಲ್ಯುಡಿಗೆ ಸೇರಿದ ಇನ್ನೊಂದು ಜಾಗ ಏಕೆ ಬಳಸುತ್ತೀರಿ. ನೀವು ಯಾರದ್ದೋ ಅಣತಿಯಂತೆ ಕೆಲಸ ಮಾಡಬೇಡಿ. ಕಾಮಗಾರಿ ನಡೆಸುವ ಇರಾದೆ ನಿಮಗಿಲ್ಲ’ ಎಂದು ಹರೀಶ್ ರೇಗಿದರು.

‘ನಾನು ಅಧಿವೇಶನಕ್ಕೆ ತೆರಳಿದಾಗ ಅಳತೆ ಮಾಡಿಸಿ ಕಾಮಗಾರಿ ನಡೆಸುತ್ತೀರಿ. ಹೀಗೆ ಮಾಡಿದರೆ ನಿಮ್ಮ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ. ಜನರನ್ನು ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತೀದ್ದೀರಿ, ದರ್ಗಾ ಕಟ್ಟಡ ತೆರವುಗೊಳಿಸುವ ಇರಾದೆ ನಮ್ಮದಿಲ್ಲ. ದಾಖಲೆಯಂತೆ ಕಾಮಗಾರಿ ಮಾಡಿದರೆ ಸುಗಮ ಸಂಚಾರಕ್ಕೆ ಅನುಕೂಲ’ ಎಂದು ಹೇಳಿದರು.

ನಂತರ ಪ್ರವಾಸಿ ಮಂದಿರಕ್ಕೆ ತೆರಳಿ ಅಲ್ಲಿಯೂ ಸಭೆ ನಡೆಸಲಾಯಿತು. ಅಲ್ಲಿ ಹರೀಶ್‌ ಅವರು, ಜಿಲ್ಲಾಧಿಕಾರಿಗೆ ಕರೆ ಮಾಡಿ ಸ್ಥಿತಿ ವಿವರಿಸಿದಾಗ ಒಪ್ಪಿದ ಅವರು, ‘ಶಾಸಕರ ಸಲಹೆಯಂತೆ ರಸ್ತೆ ನಿರ್ಮಿಸಿ’ ಎಂದು ಇಇ ನರೇಂದ್ರಬಾಬು ಅವರಿಗೆ ಸೂಚಿಸಿದರು. ನಂತರ ನರೇಂದ್ರ ಬಾಬು ಮಾತನಾಡಿ, ‘ನಾನೆ ಖುದ್ದಾಗಿ ನಿಮ್ಮ ಬಳಿ ಮಾತನಾಡುತ್ತೇನೆ ನಂತರ ಕಾಮಗಾರಿ ಕೈಗೊಳ್ಳೋಣ’ ಎಂದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಹರೀಶ್‌ ಅವರು, ‘ಹೊಸ ಸೇತುವೆಗೆ ನೇರ ರಸ್ತೆ ನಿರ್ಮಿಸಿದರೆ ಒಳ್ಳೆಯದು ಎಂದು ಸಲಹೆ ನೀಡಿದ್ದೇನೆ.  ಇದಕ್ಕೆ ದರ್ಗಾದವರು, ಅಧಿಕಾರಿಗಳು ಒಪ್ಪದೆ ಇದ್ದರೆ ನಗರಸಭೆ ದಾಖಲೆಗಳನ್ನು ಪರೀಶಿಲಿಸಿ ರಾಷ್ಟ್ರೀಯ ಹೆದ್ದಾರಿ ಅಳತೆಯಂತೆ 150 ಅಡಿ ರಸ್ತೆ ನಿರ್ಮಾಣ ಮಾಡಬೇಕಾಗುತ್ತದೆ. ನಗರಸಭೆಯಲ್ಲಿರುವ ಮೂಲ ದಾಖಲೆಗಳ ಪ್ರಕಾರ ದರ್ಗಾಕ್ಕೆ ಸೇರಿದ್ದು ಶೇ 25ರಷ್ಟು ಮಾತ್ರ. ಉಳಿದ ಶೇ 75ರಷ್ಟು ಜಾಗಕ್ಕೆ ದಾಖಾಲೆಗಳೇ ಲಭ್ಯವಿಲ್ಲ. ಇದನ್ನು ಅರ್ಥ ಮಾಡಿಕೊಂಡು ಸಹಕಾರ ನೀಡಬೇಕು’ ಎಂದು ತಿಳಿಸಿದರು.

ತಹಶೀಲ್ದಾರ್ ಗುರು ಬಸವರಾಜ್, ಪೌರಾಯುಕ್ತ ಐಗೂರು ಬಸವರಾಜ್, ಸಿಪಿಐ ದೇವಾನಂದ, ನಗರಸಭೆ, ಸರ್ವೆ ಇಲಾಖೆಯ ಅಧಿಕಾರಿಗಳು ಮತ್ತು ನಗರಸಭೆಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT