ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ತಿಂಗಳಾದರೂ ಬಳಕೆಯಾಗದ ಘಟಕ

80 ಲಕ್ಷ ವೆಚ್ಚದ ಜಿಲ್ಲೆಯ ಮೊದಲ ಆಮ್ಲಜನಕ ಘಟಕ
Last Updated 22 ಜುಲೈ 2021, 4:40 IST
ಅಕ್ಷರ ಗಾತ್ರ

ಜಗಳೂರು: ವಿವಿಧ ಕಂಪನಿಗಳ ನೆರವಿನಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ₹ 80 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಜಿಲ್ಲೆಯ ಮೊದಲ ಆಮ್ಲಜನಕ ಘಟಕ ಇದುವರೆಗೂ ಕಾರ್ಯಾರಂಭ ಮಾಡಿಲ್ಲ.

ಕೋವಿಡ್ ಸೇರಿ ಇತರೆ ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವಗಳನ್ನು ರಕ್ಷಿಸುವ ಆಮ್ಲಜನಕದ ಸ್ವಾವಲಂಬನೆ ದೃಷ್ಟಿಯಿಂದ ಜಿಲ್ಲೆಯಲ್ಲೇ ಮೊದಲ ಆಮ್ಲಜನಕ ಘಟಕವನ್ನು ಎರಡು ತಿಂಗಳ ಹಿಂದೆ ನಿರ್ಮಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ವಿ. ರಾಮಚಂದ್ರ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಘಟಕಕ್ಕೆ ಚಾಲನೆ ನೀಡಿದ್ದರು.

ನೆಪಮಾತ್ರಕ್ಕೆ ಘಟಕಕ್ಕೆ ಚಾಲನೆ ನೀಡಿದ್ದು, ಇದುವರೆಗೂ ಇಲ್ಲಿ ಆಮ್ಲಜನಕ ಉತ್ಪಾದನೆಯಾಗಿಲ್ಲ. ಈಗಲೂ ಹರಿಹರ ತಾಲ್ಲೂಕಿನ ಸದರ್ನ್ ಗ್ಯಾಸ್ ಏಜೆನ್ಸಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆಮ್ಲಜನಕ ಸಿಲಿಂಡರ್‌ಗಳು ಸರಬರಾಜಾಗುತ್ತಿವೆ. ಕೋವಿಡ್ ಸೋಂಕಿತರಿಗೆ ತುರ್ತು ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ದೇಶಿಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ದೇಣಿಗೆಯ ಹಣದಲ್ಲಿ ₹ 80 ಲಕ್ಷ ವೆಚ್ಚದಲ್ಲಿ ಘಟಕ ನಿರ್ಮಾಣ ಮಾಡಲಾಗಿತ್ತು.

ಕೋವಿಡ್ ಎರಡನೇ ಅಲೆ ಮುಗಿದು ಮೂರನೇ ಅಲೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ. ಆದರೂ ದುಬಾರಿ ವೆಚ್ಚದಲ್ಲಿ ನಿರ್ಮಾಣವಾದ ಘಟಕ ಇನ್ನೂ ಕಾರ್ಯಾರಂಭ ಆಗದಿರುವುದು ಹಾಗೂ ಆಸ್ಪತ್ರೆಗೆ ಹಸ್ತಾಂತರ ಆಗದಿರುದಕ್ಕೆ ಕಾರಣ ಏನು ಎಂಬುದು ಜನರ ಪ್ರಶ್ನೆ.

‘ಜಿಲ್ಲೆಯ ಮೊದಲ ಆಮ್ಲಜನಕ ಘಟಕ ನಮ್ಮ ತಾಲ್ಲೂಕಿನಲ್ಲಿ ಪ್ರಾರಂಭವಾಗುತ್ತಿದೆ ಎಂಬುದು ಕೇಳಿ ಸಂತಸವಾಗಿತ್ತು. ಸಚಿವರು ಉದ್ಘಾಟಿಸಿ ಹೋಗಿ 2 ತಿಂಗಳು ಕಳೆದರೂ ಇದುವರೆಗೂ ಆಮ್ಲಜನಕ ಉತ್ಪಾದನೆಯಾಗಿಲ್ಲ. ಅಮೂಲ್ಯ ಜೀವಗಳನ್ನು ಕಾಪಾಡುವ ಈ ವಿಷಯದಲ್ಲಿ ಗೊಂದಲಕಾರಿ ಧೋರಣೆ ಕೈಬಿಟ್ಟು ಕೂಡಲೇ ಘಟಕ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಮರೇನಹಳ್ಳಿ ಬಸವರಾಜ್ ಒತ್ತಾಯಿಸಿದ್ದಾರೆ.

‘ಆಮ್ಲಜನಕ ಘಟಕ ನಿರ್ಮಾಣ ಕಾರ್ಯ ಪೂರ್ಣವಾಗಿದೆ. ಸಣ್ಣಪುಟ್ಟ ತಾಂತ್ರಿಕ ದುರಸ್ತಿ ಇದೆ. ದುರಸ್ತಿ ಮಾಡುವಂತೆ ಕ್ಲೀನ್ ಮ್ಯಾಕ್ಸ್ ಕಂಪನಿಗೆ ಪತ್ರ ಬರೆದಿದ್ದೇನೆ. ಇನ್ನೂ ನಮ್ಮ ಆಸ್ಪತ್ರೆಗೆ ವಿಧ್ಯುಕ್ತವಾಗಿ ಘಟಕ ಹಸ್ತಾಂತರವಾಗಿಲ್ಲ’ ಎಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಮಲ್ಲಪ್ಪ ಮಾಹಿತಿ ನೀಡಿದರು.

‘ಬಳಕೆಗೆ ಘಟಕ ಸಿದ್ಧವಾಗಿದೆ. ನಿತ್ಯ ಒಂದು ತಾಸು ಪರೀಕ್ಷಾರ್ಥ ಚಾಲನೆ ಮಾಡುತ್ತೇವೆ. ಜಿಲ್ಲಾಧಿಕಾರಿ ಅನುಮತಿಗಾಗಿ ಕಾಯುತ್ತಿದ್ದೇವೆ’ ಎಂದು ಕ್ಲೀನ್ ಮ್ಯಾಕ್ಸ್ ಕಂಪನಿಯ ಪ್ರತಿನಿಧಿ ಸುಭಾಷ್ ಹೇಳುತ್ತಾರೆ.

‘ಆಮ್ಲಜನಕ ಘಟಕ ಕುರಿತು ಏನೂ ಸಮಸ್ಯೆ ಇಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ಅನುಮತಿ ಸಿಕ್ಕಿಲ್ಲ ಅನ್ನುವುದು ಸರಿಯಲ್ಲ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ‌ ‘ಪ್ರಜಾವಾಣಿ’ ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT