ಮಂಗಳವಾರ, ಮಾರ್ಚ್ 28, 2023
31 °C
ಚಿತ್ರನಟ ಸುದೀಪ್, ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿ

ಫೆ.8, 9ರಂದು ವಾಲ್ಮೀಕಿ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಪ್ರಸನ್ನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಫೆ. 8 ಹಾಗೂ 9ರಂದು 3ನೇ ವರ್ಷದ ವಾಲ್ಮೀಕಿ ಜಾತ್ರೆ ನಡೆಯಲಿದೆ.

ಫೆ.8ರಂದು ಬೆಳಿಗ್ಗೆ 8ಕ್ಕೆ ಧ್ವಜಾರೋಹಣ, 8.30ಕ್ಕೆ ರಾಜನಹಳ್ಳಿ ಗ್ರಾಮದಿಂದ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಯ ನಂತರ ಸರ್ವ ಧರ್ಮ ಸಾಮೂಹಿಕ  ವಿವಾಹ ಕಾರ್ಯಕ್ರಮವು ಜರುಗಲಿದೆ. ಮಧ್ಯಾಹ್ನ 12ಕ್ಕೆ ಮಾತೆ ಶಬರಿ ಮಹಿಳಾ ಜಾಗೃತಿ ಸಮಾವೇಶ, ಮಧ್ಯಾಹ್ನ 3ಗಂಟೆಗೆ ವಾಲ್ಮೀಕಿ ನಾಯಕ ನೌಕರರ ಸಮಾವೇಶ ನಡೆಯಲಿವೆ.ವಾಲ್ಮೀಕಿ ಜಾತ್ರಾ ಸಮಿತಿಯ ಜಿಲ್ಲಾ ಸಂಚಾಲಕ  ಹೊದಿಗೆರೆ ರಮೇಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ರಾತ್ರಿ 7ಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ರಾಷ್ಟ್ರಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ 11ಕ್ಕೆ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನಗೊಳ್ಳಲಿದೆ’ ಎಂದರು.

ಫೆ.9ರಂದು ಬೆಳಿಗ್ಗೆ ವಿವಿಧ ಧರ್ಮಗುರುಗಳಿಂದ ಧಾರ್ಮಿಕ ಸಭೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ನಡೆಯುವ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ಸಚಿವ ಶ್ರೀರಾಮುಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಿತ್ರನಟರಾದ ಕಿಚ್ಚ ಸುದೀಪ್, ಶಶಿಕುಮಾರ್ ಪಾಲ್ಗೊಳ್ಳುವರು. ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.

‘ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳೆ, ಮಾಜಿ ಸಚಿವ ಎಂ.ಬಿ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ.ಸಿದ್ದೇಶ್ವರ ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್.ಎ.ರವೀಂದ್ರನಾಥ್, ಎಸ್.ಎಸ್. ಮಲ್ಲಿಕಾರ್ಜುನ, ಎಚ್.ಡಿ. ರೇವಣ್ಣ, ಮಧುಬಂಗಾರಪ್ಪ, ಯತೀಂದ್ರ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘ಹರಿಹರ ರಾಜನಹಳ್ಳಿ ಪೀಠದಲ್ಲಿ ಬುಡಕಟ್ಟು ಸಂಶೋಧನಾ ಕೇಂದ್ರ ಹಾಗೂ ಗ್ರಂಥಾಲಯ ನಿರ್ಮಿಸುವ ಉದ್ದೇಶವಿದೆ. ವಾಲ್ಮೀಕಿ ರಾಮಾಯಣ ಆಧರಿಸಿ ವಿವಿಧ ಭಾಷೆಗಳಲ್ಲಿ ರಚಿಸಲಾಗಿರುವ ಮಹಾಕಾವ್ಯಗಳು, ಖಂಡ ಕಾವ್ಯಗಳು, ನಾಟಕಗಳನ್ನು ಈ ಗ್ರಂಥಾಲಯದಲ್ಲಿ ಸಂಗ್ರಹಿಸಲಾಗುವುದು. ಸಂಶೋಧನಾ ಕೇಂದ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ’ ಎಂದು ‘ವಾಲ್ಮೀಕಿ ವಿಜಯ’ 3ನೇ ಸಂಚಿಕೆಯ ಸಂಪಾದಕ ಪ್ರೊ.ಎ.ಬಿ.ರಾಮಚಂದ್ರಪ್ಪ ತಿಳಿಸಿದರು.

ಕ್ರಿಕೆಟ್ ಟೂರ್ನಿ: ‘ಜಾತ್ರೆಯ ಅಂಗವಾಗಿ ಫೆ.5ರಿಂದ 7ರವರೆಗೆ ನಗರದಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಫೆ.4ರಂದು ಮಲೇಬೆನ್ನೂರಿನಿಂದ ಹರಿಹರ ಮಾರ್ಗವಾಗಿ ರಾಜನಹಳ್ಳಿ ಮಠದವರೆಗೆ ಬೈಕ್ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಜಾತ್ರಾ ಮಹೋತ್ಸವದ ಮಹಾಮಂಟಪಕ್ಕೆ ಪುಣ್ಯಾನಂದಪುರಿ ಶ್ರೀಗಳ ಹೆಸರನ್ನು ನಾಮಕರಣ ಮಾಡಿದ್ದು, ಫೆ.1ರಂದು ಬೆಳಿಗ್ಗೆ 10.30ಕ್ಕೆ ಹಂದರಗಂಬ ಪೂಜೆ ನೆರವೇರಲಿದೆ’ ಎಂದು ಹೊದಿಗೆರೆ ರಮೇಶ್ ಮಾಹಿತಿ ನೀಡಿದರು. ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಲೋಕೇಶ್ವರ,  ಪ್ರಕಾಶ್,  ರಾಘುದೊಡ್ಮನಿ,  ಶ್ರೀನಿವಾಸ್ ದಾಸ ಕರಿಯಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು