ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮಹನೀಯರ ತತ್ವ ಅಳವಡಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು'

ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಸಲಹೆ
Published 29 ಅಕ್ಟೋಬರ್ 2023, 5:28 IST
Last Updated 29 ಅಕ್ಟೋಬರ್ 2023, 5:28 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯ ಸರ್ಕಾರ ಪ್ರತಿವರ್ಷ ವಾಲ್ಮೀಕಿ, ಅಂಬೇಡ್ಕರ್, ಬಸವೇಶ್ವರ ಜಯಂತ್ಯುತ್ಸವಗಳನ್ನು ಆಚರಿಸಿಕೊಂಡು ಬರುತ್ತಿದ್ದು, ಮಹನೀಯರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ‘ಮಹರ್ಷಿ ವಾಲ್ಮೀಕಿ ಅವರು ರಾಮಾಯಣದಂತಹ ಮೇರು ಗ್ರಂಥ ರಚಿಸುವ ಮೂಲಕ ಬದುಕುವ ರೀತಿಯನ್ನು ತಿಳಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.

‘ವಾಲ್ಮೀಕಿ ರಾಮಾಯಣ ರಚಿಸದೇ ಇದ್ದರೆ ರಾಮ ಬೆಳಕಿಗೆ ಬರುತ್ತಿರಲಿಲ್ಲ. ಹೀಗಾಗಿ, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಪಕ್ಕದಲ್ಲಿಯೇ ಕೇಂದ್ರ ಸರ್ಕಾರ ವಾಲ್ಮೀಕಿ ಮಂದಿರವನ್ನು ನಿರ್ಮಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು’ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಆಗ್ರಹಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಆಡಳಿತ ಅವಧಿಯಲ್ಲಿ ಬೆಂಗಳೂರಿನ ವಿಧಾನಸೌಧದ ಬಳಿ ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಪರಿಶಿಷ್ಟ ಕಲ್ಯಾಣಕ್ಕಾಗಿ ಎಸ್‌ಸಿಪಿ, ಟಿಎಸ್‌ಪಿ ಕಾಯಿದೆಯನ್ನು ಅನುಷ್ಠಾನಗೊಳಿಸಿ, ಬಜೆಟ್‌ನಲ್ಲಿ ವಿಶೇಷ ಅನುದಾನ ತೆಗೆದಿಡಲಾಗಿತ್ತು. ಮನಮೋಹನ್ ಸಿಂಗ್ ಸರ್ಕಾರ ಎಸ್ಟಿಗೆ ಶೇ 7.5ರಷ್ಟು ರಾಜಕೀಯ ಮೀಸಲಾತಿ ನೀಡಿದ್ದರಿಂದ ಈಗ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ 15 ಜನ ಶಾಸಕರು ಇದ್ದಾರೆ’ ಎಂದರು.

‘ಹಿಂದಿನ ಸರ್ಕಾರದ ಅವಧಿಯಲ್ಲಿ ಒಬ್ಬ ನಾಯಕರು ಸಮುದಾಯಕ್ಕೆ ಸೌಲಭ್ಯ ಕೊಡಿಸುತ್ತೇನೆ ಎಂದು ಫೋಜು ಕೊಟ್ಟುಕೊಂಡು ಓಡಾಡಿದರು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಅವರಿಗೂ ಪ್ರಮುಖ ಸ್ಥಾನ ಸಿಗಲಿಲ್ಲ’ ಎಂದು ಆರೋಪಿಸಿದರು.

‘ವಾಲ್ಮೀಕಿ ಜಯಂತಿ ಕೇವಲ ಸಂಭ್ರಮಕ್ಕೆ ಸೀಮಿತವಾಗಿರದೆ, ಆ ಸಮುದಾಯದ ಸಮಸ್ಯೆಗಳ ಬಗ್ಗೆ ಹಕ್ಕೋತ್ತಾಯ ಮಾಡುವ ಹಾಗೂ ವೈಚಾರಿಕವಾಗಿ ಚಿಂತನೆಗೆ ಹಚ್ಚುವ ವೇದಿಕೆಯಾಗಬೇಕು’ ಎಂದು ಸಂಶೋಧಕ ಅರುಣ್ ಜೋಳದ ಕೂಡ್ಲಗಿ ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.

‘ವಾಲ್ಮೀಕಿ ದರೋಡೆಕೋರನಾಗಿದ್ದು, ನಾರದರ ಮಾರ್ಗದರ್ಶನದಲ್ಲಿ ರಾಮಾಯಣ ರಚಿಸಿದ ಎನ್ನುವುದು ಕಟ್ಟುಕತೆ. ಇದಕ್ಕೆ ವಾಲ್ಮೀಕಿ ಜೀವಿಸಿದ್ದ ಕ್ರಿ.ಪೂ. 3ನೇ ಶತಮಾನದಿಂದ 9ನೆಯ ಶತಮಾನದ ವರೆಗೆ ಎಲ್ಲೂ ಪುರಾವೆಗಳಿಲ್ಲ. ಬಳಿಕ ಪುರಾಣಗಳಲ್ಲಿ ವಾಲ್ಮೀಕಿ ದರೋಡೆಕೋರ ಎಂಬುದನ್ನು ಸೇರಿಸುತ್ತಾರೆ. ವಾಲ್ಮೀಕಿ ಬರೆದ ರಾಮಾಯಣ ಸಾಕಷ್ಟು ತಿದ್ದುಪಡಿಗೆ ಒಳಗಾಗಿ ಈಗ ಕಲ್ಪಿತ ರಾಮಾಯಣವಾಗಿದೆ. ಆದ್ದರಿಂದ ತಳ ಸಮುದಾಯದವರು ಎಚ್ಚರದಿಂದ ವಾಲ್ಮೀಕಿ ಅವರ ಬಗ್ಗೆ ಚರ್ಚೆಯನ್ನು ಮುನ್ನೆಲೆಗೆ ತರಬೇಕಾಗಿದೆ" ಎಂದು ಹೇಳಿದರು.

ವಾಲ್ಮೀಕಿ ಜಯಂತಿ ಮೆರವಣಿಗೆಯಲ್ಲಿ ಕಂಡ ಗೊಂಬೆಗಳು
ವಾಲ್ಮೀಕಿ ಜಯಂತಿ ಮೆರವಣಿಗೆಯಲ್ಲಿ ಕಂಡ ಗೊಂಬೆಗಳು

ಮಹಾನಗರ ಪಾಲಿಕೆ ಮೇಯರ್ ಬಿ.ಎಚ್. ವಿನಾಯಕ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಶೀಲ್ದಾರ್ ಎಂ.ಬಿ.ಅಶ್ವತ್ಥ್, ಸಮುದಾಯದ ಮುಖಂಡರಾದ ಬಿ. ವೀರಣ್ಣ, ಎಂ.ಬಿ. ಹಾಲಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ್, ಶ್ರೀನಿವಾಸ ದಾಸಕರಿಯಪ್ಪ, ಮಂಜುನಾಥ್ ಚಿಕ್ಕಿ, ಎನ್.ಎಂ. ಆಂಜನೇಯ ಗುರೂಜಿ, ತಿಪ್ಪೇಸ್ವಾಮಿ, ಗಣೇಶ್ ಹುಲ್ಮನಿ, ಪಾಮೇನಹಳ್ಳಿ ನಾಗರಾಜ್, ತಿಪ್ಪೇಸ್ವಾಮಿ ಮತ್ತಿತರರಿದ್ದರು. ಎಡಿಸಿ ಪಿ.ಎನ್. ಲೋಕೇಶ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT