ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru - Dharwad ವಂದೇ ಭಾರತ್‌ ರೈಲು 19ಕ್ಕೆ ಪ್ರಾಯೋಗಿಕ ಸಂಚಾರ

26ಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ
Published 17 ಜೂನ್ 2023, 0:00 IST
Last Updated 17 ಜೂನ್ 2023, 0:00 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು–ಧಾರವಾಡ ಮಧ್ಯೆ ಸಂಚರಿಸಲು ‘ವಂದೇ ಭಾರತ್‌‘ ಇಂಟರ್‌ಸಿಟಿ ಸೆಮಿ ಹೈಸ್ಪೀಡ್‌ ರೈಲು ಸಜ್ಜಾಗಿದೆ. ಜೂನ್‌ 19ರಂದು ಪ್ರಾಯೋಗಿಕವಾಗಿ ಸಂಚರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಜೂನ್‌ 26ರಂದು ಚಾಲನೆ ನೀಡಿದ ಬಳಿಕ ಅಧಿಕೃತವಾಗಿ ಓಡಾಟ ಆರಂಭಿಸಲಿದೆ.

ಪೆರಂಬೂರಿನಲ್ಲಿರುವ ಚೆನ್ನೈ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲು ನಿರ್ಮಾಣಗೊಂಡಿದೆ. ಬೆಂಗಳೂರು–ಧಾರವಾಡದ ಅಂತರ 487 ಕಿಲೋಮೀಟರ್‌ ಇದ್ದು, ಸುಮಾರು ಏಳು ಗಂಟೆಗಳಲ್ಲಿ ಕ್ರಮಿಸಲಿದೆ. ಗಂಟೆಗೆ 160 ಕಿಲೋ ಮೀಟರ್‌ ವೇಗದ ಸಾಮರ್ಥ್ಯ ಇದ್ದರೂ ಈ ಮಾರ್ಗದಲ್ಲಿ ಗಂಟೆಗೆ 120 ಕಿಲೋ ಮೀಟರ್‌ ವೇಗದಲ್ಲಿ ಚಲಿಸಲಿದೆ. ತಿರುವುಗಳು ಹೆಚ್ಚಿರುವುದು ವೇಗ ಕಡಿಮೆಯಾಗಲು ಕಾರಣ. 

ವಾರಕ್ಕೆ ಆರುದಿನ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ 8ನೇ ಫ್ಲಾಟ್‌ಫಾರ್ಮ್‌ನಿಂದ ಹೊರಡುವ ‘ವಂದೇ ಭಾರತ್‌’ ರೈಲು ಧಾರವಾಡ ತಲುಪುವ ಮಧ್ಯೆ ಯಶವಂತಪುರ, ದಾವಣಗೆರೆ, ಹುಬ್ಬಳ್ಳಿಯಲ್ಲಿ ನಿಲ್ಲಲಿದೆ ಎಂದು ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕವಚ್‌: 

ರೈಲು ಅಪಘಾತಗಳನ್ನು ತಪ್ಪಿಸುವ ತಂತ್ರಜ್ಞಾನವನ್ನು (Train Collision Avoidance System) 2022ರಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ‘ಕವಚ್‌’ ಎಂಬ ಈ ತಂತ್ರಜ್ಞಾನವು ಎದುರಿನಿಂದ ರೈಲು ಬರುತ್ತಿದ್ದರೆ ಅದರ ಮುನ್ಸೂಚನೆಯನ್ನು ಮೊದಲೇ ನೀಡುತ್ತದೆ. ಇದರಿಂದ ಮುಂದಾಗುವ ಅನಾಹುತ ತಪ್ಪಲಿದೆ. ಈ ತಂತ್ರಜ್ಞಾನವನ್ನು ‘ವಂದೇ ಮಾತರಂ’ನಲ್ಲಿ ಅಳವಡಿಸಲಾಗಿದೆ.

ಆಧುನಿಕ ತಂತ್ರಜ್ಞಾನ:

ಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇರುವ ಈ ಸೆಮಿ ಎಕ್ಸ್‌ಪ್ರೆಸ್‌ ವಿಶೇಷ ರೈಲಿನಲ್ಲಿ 8 ಕೋಚ್‌ಗಳು, ಎರಡು ಮೋಟರ್ ಕಾರುಗಳಿವೆ. ಜಿಪಿಎಸ್ ವ್ಯವಸ್ಥೆ ಇರುವುದರಿಂದ ರೈಲು ಎಲ್ಲಿದೆ ಎಂಬುದನ್ನು ನೋಡಲು ಸಾಧ್ಯ. ಮೆಟ್ರೋದಲ್ಲಿ ಇರುವಂತೆ ಈ ರೈಲಿನಲ್ಲಿ ಯಾವ ನಿಲ್ದಾಣಕ್ಕೆ ತಲುಪುತ್ತಿದೆ ಎಂಬ ಮಾಹಿತಿ ಪ್ರದರ್ಶನಗೊಳ್ಳಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ವೈಫೈ, ಇನ್ಫೋಟೆಕ್‌ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ ಎಂದು ಕುಸುಮಾ  ಮಾಹಿತಿ ನೀಡಿದರು.

ನೈರುತ್ಯ ರೈಲ್ವೆಯಲ್ಲಿ ಇದೇ ಪ್ರಥಮ ಬಾರಿಗೆ ‘ವಂದೇ ಭಾರತ್‌’ ಇಂಟರ್‌ಸಿಟಿ ರೈಲು ಸಂಚರಿಸಲಿದೆ. ದರ ನಿಗದಿ ಕಾರ್ಯ ಕೆಲವೇ ದಿನಗಳಲ್ಲಿ ಆಗಲಿದೆ.

-ಕುಸುಮಾ ಹರಿಪ್ರಸಾದ್‌ ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕಿ (ಆಡಳಿತ)

ವಂದೇ ಭಾರತ್‌ ವೇಳಾಪಟ್ಟಿ

ವಂದೇ ಭಾರತ್‌ ಇಂಟರ್‌ಸಿಟಿ ರೈಲು ಮಂಗಳವಾರ ಬಿಟ್ಟು ವಾರದಲ್ಲಿ ಆರು ದಿನ ಸಂಚರಿಸಲಿದೆ. ಪ್ರತಿದಿನ ಬೆಂಗಳೂರಿನಿಂದ ಬೆಳಿಗ್ಗೆ 5.45ಕ್ಕೆ ಹೊರಡಲಿದೆ.  ಬೆಳಿಗ್ಗೆ 5.55ಕ್ಕೆ ಯಶವಂತಪುರ ಬೆಳಿಗ್ಗೆ 9.55ಕ್ಕೆ ದಾವಣಗೆರೆ ಮಧ್ಯಾಹ್ನ 12.10ಕ್ಕೆ ಹುಬ್ಬಳ್ಳಿ ಜಂಕ್ಷನ್‌ಗೆ ಬಂದು ಮಧ್ಯಾಹ್ನ 12.40ಕ್ಕೆ ಧಾರವಾಡಕ್ಕೆ ತಲುಪಲಿದೆ. ಧಾರವಾಡದಿಂದ ಮಧ್ಯಾಹ್ನ 1.15ಕ್ಕೆ ಹೊರಡುವ ಈ ರೈಲು. ಮಧ್ಯಾಹ್ನ 1.35ಕ್ಕೆ ಹುಬ್ಬಳ್ಳಿ ಜಂಕ್ಷನ್ ಮಧ್ಯಾಹ್ನ 3.48ಕ್ಕೆ ದಾವಣಗೆರೆ ರಾತ್ರಿ 7.45ಕ್ಕೆ ಯಶವಂತಪುರ ತಲುಪಲಿದ್ದು ರಾತ್ರಿ 8.10ಕ್ಕೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ತಲುಪಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT