ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಬೆಲೆ ಗಗನಕ್ಕೆ: ಜೇಬಿಗೆ ಕತ್ತರಿ

ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದ ತರಕಾರಿ ಆಮದು
Last Updated 29 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಹರಪನಹಳ್ಳಿ: ತಾಲ್ಲೂಕಿನಲ್ಲಿ ಬಿಸಿಲಿನಷ್ಟೇ ಸುದ್ದಿಯಾಗುತ್ತಿದೆ ತರಕಾರಿ ದರ. ವಾರದಿಂದ ವಾರಕ್ಕೆ ಹರಪನಹಳ್ಳಿ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರುತ್ತಿದ್ದು ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ.

ಬರ ಪೀಡಿತ ಪ್ರದೇಶವೆಂದು ಘೋಷಣೆ ಆಗಿರುವ ತಾಲ್ಲೂಕಿನಲ್ಲಿ ಸದ್ಯ ಜನರು-ಜಾನುವಾರುಗಳಿಗೆ ಕುಡಿಯುವ ನೀರು ಸಮಸ್ಯೆ ತಲೆದೋರಿದೆ. ಬರ ಆವರಿಸಿ ರೈತರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಿರುವಾಗ ನಿತ್ಯದ ಆಹಾರಕ್ಕೆ ಅವಶ್ಯವಾಗಿರುವ ತರಕಾರಿ ಬೆಲೆ ಏರಿಕೆ ಆಗಿರುವುದು ಜನರನ್ನು ಮತ್ತಷ್ಟು ಕಂಗಾಲಾಗಿಸಿದೆ.

ಹರಪನಹಳ್ಳಿಗೆ ಅತೀ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯಿದೆ. ಇಲ್ಲಿ ಸಮೃದ್ಧ ಮಳೆಯೇ ಜನರ ಬದುಕಿಗೆ ಆಧಾರ. ಈ ವರ್ಷ ಮಳೆ ಕೈಕೊಟ್ಟು ತಾಲ್ಲೂಕಿನ ರೈತರ ಪಾಡು ಹೇಳತೀರದಾಗಿತ್ತು.

ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ರೈತರ ಕೃಷಿ ಚಟುವಟಿಕೆಗೆ ನೀರಿನ ಕೊರತೆ ಉಂಟಾಗಿರುವುದು ತರಕಾರಿಗಳ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ನೀರಿನ ಕೊರತೆಯಿಂದ ಸಾಕಷ್ಟು ತರಕಾರಿ ಬೆಳೆ ಬರುತ್ತಿಲ್ಲ. ಹೀಗಾಗಿ ಬೇರೆ ಜಿಲ್ಲೆ, ಹೊರ ರಾಜ್ಯಗಳಿಂದ ತರಕಾರಿ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ವ್ಯಾಪಾರಿಗಳದ್ದು.

ಸದ್ಯ ಮಾರುಕಟ್ಟೆಯಲ್ಲಿಗ ಈರುಳ್ಳಿ, ಬದನೆಕಾಯಿ ಹೊರತುಪಡಿಸಿದರೆ ಉಳಿದೆಲ್ಲ ತರಕಾರಿಗಳ ಬೆಲೆ ಏರಿಕೆ ಕಂಡಿವೆ.

ತರಕಾರಿ ಬೆಲೆ ವಾರದ ಸಂತೆಯಲ್ಲಿ ಹೆಚ್ಚಿದ್ದರೆ, ಇನ್ನುಳಿದ ದಿನಗಳಲ್ಲಿ ಬೆಲೆ ಅದಕ್ಕಿಂತಲೂ ಹೆಚ್ಚು. ಸಂತೆ ದಿನದಂದು ಮಾರಾಟ ಆಗುವ ಬೆಲೆಕ್ಕಿಂತಲೂ ಉಳಿದ ದಿನ ₹10-20 ಅಧಿಕ ಇರುತ್ತದೆ‌.

ತಾಲ್ಲೂಕಿನಲ್ಲಿ ನೀರಾವರಿ ಪ್ರದೇಶ ಬಹಳಷ್ಟು ಕಡಿಮೆ ಇದೆ. ನೀರಿನ ಸೌಲಭ್ಯವಿದ್ದರೂ ರೈತರು ಬೇರೆ ಬೆಳೆಗಳತ್ತ ಮುಖಮಾಡಿದ್ದಾರೆ. ಹೀಗಾಗಿ ಸ್ಥಳೀಯವಾಗಿ ತರಕಾರಿ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದೆ. ಪ್ರತಿ ವರ್ಷದ ಬೇಸಿಗೆ ಸಂದರ್ಭದಲ್ಲಿ ಇಂತಹ ಪರಿಸ್ಥಿತಿ ಸರ್ವೇ ಸಾಮಾನ್ಯ. ಅಲ್ಲದೇ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದ ಹರಪನಹಳ್ಳಿ ಮಾರುಕಟ್ಟೆಗೆ ತರಕಾರಿ ಬರುತ್ತಿರುವುದರಿಂದ ದರ ಹೆಚ್ಚಳವಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಎಚ್.ಅಶೋಕ.

‘ಮಳೆ ಪ್ರಮಾಣ ಕುಂಠಿತಗೊಂಡು ಕೊಳವೆಬಾವಿಗಳಲ್ಲಿ ಸಮರ್ಪಕ ನೀರು ಬರುತ್ತಿಲ್ಲ. ಲಭ್ಯವಿರುವ ನೀರಿನಲ್ಲೇ ಅಲ್ವಸ್ವಲ್ಪ ಬೆಳೆ ಬೆಳೆಯುತ್ತಿದ್ದೇವೆ. ಮನೆ ಉಪಜೀವನಕ್ಕೆ ಸಹಕಾರಿ ಆಗಿದೆ’ ಎನ್ನುತ್ತಾರೆ ಪಟ್ಟಣದ ವಾಲ್ಮೀಕಿ ನಗರದ ರೈತ ಕಳ್ಳಿ ಅಂಜಿನಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT