ಶುಕ್ರವಾರ, ಅಕ್ಟೋಬರ್ 22, 2021
29 °C
ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿ ಸಿದ್ಧವಾಗಿದೆ ಕಸ ನಿರ್ವಹಣೆಯ ಮಾದರಿ

ದಾವಣಗೆರೆ: ಕಸದಿಂದ ಹುಟ್ಟಿದ ‘ವರ್ಟಿಕಲ್‌ ಗಾರ್ಡನ್‌’

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿ ಫುಡ್ ಮಾರ್ಟ್ ಹತ್ತಿರ ತಲೆ ಎತ್ತಿರುವ ವರ್ಟಿಕಲ್‌ ಗಾರ್ಡನ್‌ ಕಣ್ಮನ ಸೆಳೆಯುತ್ತಿದೆ. ಇದೇ ಬಡಾವಣೆಯಲ್ಲಿ ಸಂಗ್ರಹವಾಗುವ ಕಸದಿಂದಲೇ ಈ ಗಿಡಗಳ ವಿನ್ಯಾಸ ಮಾಡಿರುವುದು ವಿಶೇಷ.

ಬಳಸಿ ಬಿಸಾಡಿದ ಪ್ಲಾಸ್ಟಿಕ್‌ ಬಾಟಲ್‌ಗಳನ್ನು ಅರ್ಧಕ್ಕೆ ಕತ್ತರಿಸಿ ಅವುಗಳಲ್ಲಿ ಮಣ್ಣು ತುಂಬಿ ಗೋಡೆಗೆ ಅಳವಡಿಸಲಾಗಿದೆ. ಇದರಲ್ಲಿ ಬೆಳೆಸಲಾದ ಚಿಕ್ಕ ಚಿಕ್ಕ ಆಲಂಕಾರಿಕ ಗಿಡಗಳು, ಹೂಗಳು ಕಸ ನಿರ್ವಹಣಾ ಜಾಗದಲ್ಲೂ ಆಹ್ಲಾದ ಮೂಡಿಸುವಂತಿವೆ.

ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕ ಮಹಾಂತೇಶ್‌ ಕೆ.ಆರ್‌. ಅವರ ನೇತೃತ್ವದಲ್ಲಿ ಕಸ ನಿರ್ವಹಣೆಯ ಮಾದರಿಯೊಂದನ್ನು ಇಲ್ಲಿ ಸಿದ್ಧಪಡಿಸಲಾಗಿದೆ. ಬಡಾವಣೆಯ ಪಾಲಿಕೆಯ ಕಾಂಗ್ರೆಸ್‌ ಸದಸ್ಯ ಮಂಜುನಾಥ್‌ ಗಡಿಗುಡಾಳ್ ಅವರ ಸಹಕಾರದೊಂದಿಗೆ ಎಲ್ಲ ರೀತಿಯ ಕಸವನ್ನೂ ಇಲ್ಲಿ ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ.

‘ಮೊದಲು ಒಣಗಿದ ಎಲೆಗಳನ್ನು ಒಟ್ಟುಗೂಡಿಸಿ ಬೆಂಕಿ ಇಡುತ್ತಿದ್ದರು. ಇದನ್ನು ತಪ್ಪಿಸಲು ಬಡಾವಣೆಯ 2ನೇ ಮುಖ್ಯ ಹಂತದಿಂದ 7ನೇ ಮುಖ್ಯ ಹಂತದವರೆಗಿನ ಪ್ರದೇಶದಲ್ಲಿ ನನ್ನದೇ ಖರ್ಚಿನಲ್ಲಿ ಬಿದಿರಿನ ಬುಟ್ಟಿಗಳನ್ನು ಖರೀದಿಸಿ ಅಲ್ಲಲ್ಲಿ ಮರಗಳಿಗೆ ಕಟ್ಟಿಸಿದೆ. ಒಣ ಎಲೆಗಳು ಹಾಗೂ ಪೂಜೆ ಮಾಡಿದ ಹೂಗಳನ್ನು ಅದರಲ್ಲಿ ಹಾಕುವಂತೆ ಜನರ ಮನ ಒಲಿಸಲಾಯಿತು. ಇಲ್ಲಿ ಸಂಗ್ರಹವಾದ ಒಣ ಎಲೆಗಳನ್ನು ತಂದು ಗೊಬ್ಬರ ಮಾಡಲಾಗುತ್ತಿದೆ’ ಎಂದು ಮಂಜುನಾಥ್‌ ಗಡಿಗುಡಾಳ್ ತಿಳಿಸಿದರು.

ರಸ್ತೆ ಬದಿ ಬಿದ್ದ ಒಣ ಎಲೆಗಳನ್ನು ಪೌರಕಾರ್ಮಿಕರು ಒಟ್ಟುಗೂಡಿಸಿ ಸಂಗ್ರಹಿಸುತ್ತಾರೆ. ವಾರ್ಡ್‌ನ ನಿಗದಿತ ಜಾಗದಲ್ಲಿ ನಿರ್ಮಿಸಿರುವ 3 ಗೊಬ್ಬರದ ಗುಂಡಿಗಳಿಗೆ ಈ ಒಣ ಎಲೆ ಕಸವನ್ನು ತಂದು ಸುರಿಯಲಾಗುತ್ತಿದೆ. ಅಲ್ಲಿ ಕಾಂಪೋಸ್ಟ್‌ ಸಿದ್ಧವಾಗುತ್ತಿದೆ. ಈ ಬಡಾವಣೆಯಲ್ಲಿ ಜನ ಒಣ ಕಸ ಹಾಗೂ ಹಸಿ ಕಸವನ್ನು ಪ್ರತ್ಯೇಕವಾಗಿಯೇ ನೀಡುವಂತೆ ಕಡ್ಡಾಯವಾಗಿ ವ್ಯವಸ್ಥೆ ಮಾಡಲಾಗಿದೆ. ಒಟ್ಟುಗೂಡಿಸಿ ಕೊಟ್ಟರೆ ಅದನ್ನು ಒಯ್ಯುವುದಿಲ್ಲ ಎಂದು ಪೌರಕಾರ್ಮಿಕರು ನಿಷ್ಠುರವಾಗಿ ಹೇಳುತ್ತಾರೆ. ಹಸಿ ಕಸವನ್ನು ಸಂಗ್ರಹಿಸಿ ತಂದು ಗೊಬ್ಬರದ ಗುಂಡಿಗೆ ಹಾಕುತ್ತಾರೆ. ಅದನ್ನು ತಿನ್ನಲು ಹಸುಗಳಿಗೆ ಅವಕಾಶ ನೀಡಲಾಗಿದೆ. ಅವುಗಳ ಹಸಿವು ನೀಗಿದ ನಂತರ ಉಳಿದದ್ದು ಗೊಬ್ಬರಕ್ಕೆ ಸೇರುತ್ತದೆ.

‘ಪ್ಲಾಸ್ಟಿಕ್‌ ಅನ್ನು ಬೇರ್ಪಡಿಸಿ ಪೌರಕಾರ್ಮಿಕರೇ ಮರುಬಳಕೆಗೆ ಕಳುಹಿಸುತ್ತಾರೆ. ಪ್ಯಾಕಿಂಗ್‌ನಲ್ಲಿ ಬರುವ ಥರ್ಮಕೋಲ್‌ ಅನ್ನು ಪ್ರತ್ಯೇಕಗೊಳಿಸಿ ಮರುಬಳಕೆ ಮಾಡಲಾಗುತ್ತಿದೆ. ವಾರ್ಡ್‌ನಲ್ಲಿ 200ಕ್ಕೂ ಹೆಚ್ಚು ತೆಂಗಿನ ಮರಗಳಿದ್ದು, ಅದರ ಗರಿಗಳು, ತೆಂಗಿನ ಮಟ್ಟೆಗಳನ್ನೂ ಪ್ರತ್ಯೇಕ ಸಂಗ್ರಹಿಸಿ ಪುಡಿ ಮಾಡಿ ಗೊಬ್ಬರಕ್ಕೆ ಬಳಸುತ್ತಿದ್ದಾರೆ. ಫ್ಲೆಕ್ಸ್‌ಗಳಲ್ಲಿ ಬಳಸಿದ ಕಟ್ಟಿಗೆಗಳನ್ನೂ ಬೇಲಿಯ ರೀತಿಯಲ್ಲಿ ಕಟ್ಟಿ ತರಕಾರಿ ಬಳ್ಳಿ ಬೆಳೆಸುತ್ತಿದ್ದೇವೆ. ಬೀದಿಯಲ್ಲಿ ಎಸೆಯಲಾದ ಹೂದಾನಿಗಳನ್ನೂ ತಂದು ಗಿಡಗಳನ್ನು ಬೆಳೆಸಿದ್ದೇವೆ. ಗಾಜಿನ ಬಾಟಲ್‌ಗಳಲ್ಲಿ ಇರುವ ಸಿಲಿಕಾ ಅಂಶದಿಂದ ಇಟ್ಟಿಗೆ ತಯಾರಿಸಬಹುದು. ಹೀಗಾಗಿ ಬೀದಿಗೆ ಎಸೆದ ಗಾಜಿನ ಸೀಸೆಗಳನ್ನೂ ಒಟ್ಟುಗೂಡಿಸಿ ತಂದು ರಾಶಿ ಹಾಕಿದ್ದೇವೆ. ತರಳಬಾಳು ಕೃಷಿ ವಿಜ್ಞಾನ ಕೇಂದ್ರದವರು ಈ ಮಾದರಿ ಸಿದ್ಧಪಡಿಸಲು ಮಾರ್ಗದರ್ಶನ ನೀಡಿದ್ದಾರೆ’ ಎಂದು ಆರೋಗ್ಯ ನಿರೀಕ್ಷಕ ಮಹಾಂತೇಶ್‌ ಕೆ.ಆರ್‌. ವಿವರಿಸಿದರು.

ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಈ ಬಡಾವಣೆಯಲ್ಲಿ ಯಶಸ್ವಿಯಾಗಲು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಗೋಡೆ ಚಿತ್ರ–ಬರಹಗಳು, ಸೈಕಲ್‌ ಜಾಥಾ, ಮನೆಮನೆಗೆ ಹೋಗಿ ಮನ ಒಲಿಸುವ ಕಾರ್ಯಗಳು ನಡೆದಿವೆ. ಹೀಗಾಗಿ ಜನಸ್ಪಂದನ ಉತ್ತಮವಾಗಿದೆ. ವಿವಿಧ ಶಾಲಾ–ಕಾಲೇಜು ವಿದ್ಯಾರ್ಥಿಗಳು ಕಸ ನಿರ್ವಹಣೆಯ ಯಶಸ್ವಿ ಮಾದರಿಯನ್ನು ನೋಡಲು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

....

ಬಿದಿರಿನ ಬುಟ್ಟಿಗಳ ವೆಚ್ಚ ಬಿಟ್ಟರೆ ಇದು ಒಟ್ಟಾರೆ ಶೂನ್ಯ ಬಂಡವಾಳ ತೊಡಗಿಸಿ ಮಾಡಲಾದ ಯೋಜನೆ. ಇಲ್ಲಿಯ ಜನತೆ, ಪಾಲಿಕೆ ಆಯುಕ್ತರು, ಮೇಯರ್‌, ಕಸ ಸಂಗ್ರಹಿಸುವವರು, ಪೌರಕಾರ್ಮಿಕರು ಈ ಕಾರ್ಯದಲ್ಲಿ ಪೂರ್ಣ ಸಹಕಾರ ನೀಡಿದ್ದಾರೆ.

-ಮಹಾಂತೇಶ್‌ ಕೆ.ಆರ್‌., ಆರೋಗ್ಯ ನಿರೀಕ್ಷಕ

....

ರಾಜ್ಯ ಸರ್ಕಾರ ಎಂಸಿಸಿ ‘ಬಿ’ ಬ್ಲಾಕ್‌ನ ಕಸ ನಿರ್ವಹಣೆಯ ಮಾದರಿಯನ್ನು ರಾಜ್ಯದ 30 ಉತ್ತಮ ತ್ಯಾಜ್ಯ ನಿರ್ವಹಣೆಯ ಮಾದರಿಗಳಲ್ಲಿ ಒಂದು ಎಂದು ಆಯ್ಕೆ ಮಾಡಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಹಾಂತೇಶ್‌ ಅವರು ಪ್ರಾತ್ಯಕ್ಷಿಕೆ ನೀಡಿದ್ದಾರೆ.

-ವಿಶ್ವನಾಥ ಮುದಜ್ಜಿ, ಆಯುಕ್ತರು, ಮಹಾನಗರ ಪಾಲಿಕೆ

....

ನಮ್ಮ ಬಡಾವಣೆಯಲ್ಲಿ ಜನಸ್ಪಂದನ ಉತ್ತಮವಾಗಿದೆ. ಕಿಚನ್‌ ವೇಸ್ಟ್‌ ಪ್ರತ್ಯೇಕವಾಗಿ ಸಂಗ್ರಹಿಸಿ ಅದರಿಂದ ಬಯೊಗ್ಯಾಸ್‌ ತಯಾರಿಸಬಹುದು. ಇದನ್ನೂ ಜಾರಿಗೆ ತರುವ ಆಲೋಚನೆ ಇದೆ.

-ಮಂಜುನಾಥ್‌ ಗಡಿಗುಡಾಳ್‌, ಪಾಲಿಕೆ ಸದಸ್ಯ, ಎಂಸಿಸಿ ‘ಬಿ’ ಬ್ಲಾಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು