ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕರ್ಮ ಸಮಾಜ ಪುಟ್ಟದಾದರೂ ಕೊಡುಗೆ ದೊಡ್ಡದು

ಆವರಗೊಳ್ಳ ಪುರವರ್ಗದ ಓಂಕಾರ ಶಿವಾಚಾರ್ಯ ಸ್ವಾಮೀಜಿ
Last Updated 2 ಜನವರಿ 2022, 5:09 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ದಾವಣಗೆರೆ: ‘ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲೆಯಲ್ಲಿ ಭಾರತಕ್ಕೆ ಯಾರೂ ನೀಡಲಾಗದ ಕೊಡುಗೆ ನೀಡಿದ್ದಾರೆ. ಭಾರತದ ಶಿಲ್ಪಕಲೆಗಳ ನಾಡು ಎಂದು ಕರೆಸಿಕೊಳ್ಳುತ್ತಿದೆ. ಅಂತಹ ಕಲೆಗಳಿಗೆ, ಶಕ್ತಿ, ಪ್ರಾಣ ನೀಡಿದವರು ಜಕಣಾಚಾರಿ’ ಎಂದು ಆವರಗೊಳ್ಳ ಪುರವರ್ಗದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವಿಶ್ವಕರ್ಮ ಸಮಾಜದಿಂದ ಅಮರಶಿಲ್ಪಿ ಜಕಣಾಚಾರಿ ಸ್ಮರಣೋತ್ಸವ ಹಾಗೂ ಲಿಂಗೈಕ್ಯ ಶಿವಾತ್ಮನಂದ ಸರಸ್ವತಿ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಜಕಣಾಚಾರಿ ಇಲ್ಲದಿದ್ದರೆ ರಾಜ್ಯದಲ್ಲಿ ಯಾವ ಶಿಲ್ಪಗಳನ್ನು ಕಾಣಲು ಆಗುತ್ತಿರಲಿಲ್ಲ. ಅವರು ನಾಡಿನ ಜೀವ, ಜೀವಾಳ. ವಿಶ್ವಕರ್ಮ ಸಮಾಜ ಪುಟ್ಟದಾದರೂ ಅದರ ಕೊಡುಗೆ ದೊಡ್ಡದು. ಎಲ್ಲ ಜಾತಿಯವರನ್ನು ವೃತ್ತಿಯ ಮೂಲಕ ಸಂಬಂಧಗಳನ್ನು ಬೆಸೆದುಕೊಂಡು ಹೋಗುತ್ತಿದೆ’ ಎಂದು ಶ್ಲಾಘಿಸಿದರು.

‘ವಿಶ್ವಕರ್ಮ ಸಮಾಜವನ್ನು ರಾಜಕೀಯ ವ್ಯಕ್ತಿಗಳು ಮೂಲೆಗುಂಪು ಮಾಡುತ್ತಿದ್ದಾರೆ. ನಾಡಿನ ಸಂತರು, ಸಾಹಿತಿಗಳು ಆ ಸಮಾಜವನ್ನು ಎತ್ತರಕ್ಕೆ ಬೆಳೆಸುವ ಸಂಕಲ್ಪ ಮಾಡಬೇಕು. ಸಮಾಜದ ಸಾಧನೆಗಳನ್ನು ಶೋಧನೆ ಮಾಡಿ ಗ್ರಂಥದ ರೂಪದಲ್ಲಿ ತರಬೇಕು’ ಎಂದು ಸಲಹೆ ನೀಡಿದರು.

‘ಲಿಂಗೈಕ್ಯ ಶಿವಾತ್ಮನಂದ ಸರಸ್ವತಿ ಸ್ವಾಮೀಜಿಗಳು ಅಗಾಧ ಶಕ್ತಿ ಬೆಳೆಸಿಕೊಂಡಿದ್ದರು. ಸರಸ್ವತಿ ಪುತ್ರರೇ ಆಗಿದ್ದರು. ಅವರ ಅಗಲಿಕೆ ನೋವು ತಂದಿದೆ’ ಎಂದರು.

ವಡ್ನಾಳ್ ಸಾವಿತ್ರಿ ಪೀಠದ ಶಂಕರಾತ್ಮನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ‘ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆ ನಿರ್ಮಾಣ ಹಾಗೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುತ್ತಿರುವವರು ವಿಶ್ವಕರ್ಮ ಸಮಾಜದವರು. ಪ್ರತಿಯೊಂದು ದೇವಾಲಯಗಳಲ್ಲಿ ದೇವರ ಶಿಲ್ಪಿ ನಿರ್ಮಾಣ ಮಾಡುವವರು ವಿಶ್ವಕರ್ಮರೇ. ಹಿಂದೂ ಸನಾತನ ಧರ್ಮ ಬೆಳವಣಿಗೆಗೆ ವಿಶ್ವಕರ್ಮ ಸಮಾಜದ ಕೊಡುಗೆ ದೊಡ್ಡದು’ ಎಂದು ಶ್ಲಾಘಿಸಿದರು.

‘ವಿದೇಶಿಯರು ಭಾರತಕ್ಕೆ ಭೇಟಿ ನೀಡಲು ಮುಖ್ಯ ಕಾರಣ ಇಲ್ಲಿನ ಶಿಲ್ಪಗಳು. ಪಂಚಶಿಲ್ಪ ಕಲೆಗಳಿಗೆ ಅನುಕೂಲವಾಗುವಂತೆ ವಿಶ್ವಕರ್ಮ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಸರ್ಕಾರ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಈ ಕೌಶಲವನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಸಾಪುರದ ನಾಗೇಂದ್ರಾಚಾರ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT