ಸೋಮವಾರ, ಜೂನ್ 21, 2021
27 °C
ಲಾಕ್‌ಡೌನ್ ಮುಂದುವರಿಕೆ ಭಯ: ನಗರದಲ್ಲಿ ಖರೀದಿಗೆ ಮುಗಿಬಿದ್ದ ಜನರು

ವಾರಾಂತ್ಯ ಕರ್ಫ್ಯೂ: ಎರಡನೇ ದಿನವೂ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವಿಧಿಸಿರುವ ವಾರಾಂತ್ಯದ ಕರ್ಫ್ಯೂಗೆ ಎರಡನೇ ದಿನ ಭಾನುವಾರ ಸಾರ್ವಜನಿಕರಿಂದ ಉತ್ತಮ ಸ್ಪಂದನ ವ್ಯಕ್ತವಾಯಿತು. 

ಭಾನುವಾರ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ರಜೆ ಇದ್ದುದ್ದರಿಂದ ನಗರದ ಜನ ಮನೆಯಲ್ಲಿಯೇ ಕಾಲ ಕಳೆದರು. ಆಸ್ಪತ್ರೆಗೆ ಮತ್ತು ಔಷಧ ಖರೀದಿಸಲು ಬಂದವರು ಮಾತ್ರ ಅಲ್ಲಲ್ಲಿ ಕಂಡುಬಂದರು. ಬಸ್‌ ನಿಲ್ದಾಣಗಳಲ್ಲೂ ಹೆಚ್ಚಿನ ಜನರು ಕಂಡುಬರಲಿಲ್ಲ.

ನಗರದ ಎಲ್ಲಾ ರಸ್ತೆಗಳು ಖಾಲಿಯಾಗಿದ್ದವು. ಜಯದೇವ ವೃತ್ತ, ಅಂಬೇಡ್ಕರ್ ಸರ್ಕಲ್, ಪಿ.ಬಿ. ರಸ್ತೆ, ಗಾಂಧಿ ಸರ್ಕಲ್, ಎಪಿಎಂಸಿ, ಗುಂಡಿ ಸರ್ಕಲ್, ಹಳೇ ದಾವಣಗೆರೆಯ ಬಹುತೇಕ ವೃತ್ತಗಳು, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನು ಪೊಲೀಸರು ಬಂದ್ ಮಾಡಿದ್ದರು. 

ಖರೀದಿಗೆ ಮುಗಿಬಿದ್ದ ಜನ: ಲಾಕ್‌ಡೌನ್ ಮಂದುವರಿಯುತ್ತದೆ ಎಂಬ ವದಂತಿ
ಯಿಂದಾಗಿ ಬೆಳಿಗ್ಗೆ 6ರಿಂದ 10ರವರೆಗೆ ಖರೀದಿ ಜೋರಾಗಿತ್ತು. ನಗರದ ಚಾಮರಾಜಪೇಟೆ, ಕೆ.ಆರ್. ಮಾರುಕಟ್ಟೆ, ಎಪಿಎಂಸಿ, ನಿಜಲಿಂಗಪ್ಪ ಬಡಾವಣೆಯ ಸರ್ಕಲ್‌ಗಳಲ್ಲಿ ತರಕಾರಿ
ಕೊಂಡುಕೊಳ್ಳಲು ಮುಗಿಬಿದ್ದಿದ್ದರು.
ಅಂತರ ಕಾಯ್ದುಕೊಳ್ಳದೇ ಮಾಸ್ಕ್ ಧರಿಸದೇ ವಹಿವಾಟಿನಲ್ಲಿ ತೊಡಗಿದ್ದರು. ಕಿರಾಣಿ ಅಂಗಡಿಗಳಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು.  

ಅಂಗಡಿ ಬಂದ್ ಮಾಡಿಸಿದ ತಹಶೀಲ್ದಾರ್: ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 10ರ ವರೆಗೆ ಅವಕಾಶ ಕಲ್ಪಿಸಿದ್ದರೂ ಕೆಲವರು ಕೆ.ಆರ್. ಮಾರುಕಟ್ಟೆ ಬಳಿ ಅಂಗಡಿ ಮುಚ್ಚಲು ವಿಳಂಬ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಗಿರೀಶ್ ಹಾಗೂ ಪೊಲೀಸರು ಅಂಗಡಿಗಳನ್ನು ಮುಚ್ಚಿ
ಸಿದರು. ಮಾಸ್ಕ್ ಧರಿಸದಿದ್ದವರನ್ನು ತರಾಟೆಗೆ ತೆಗೆದುಕೊಂಡರು.

ನಿಷೇಧವಿದ್ದರೂ ಮಾಂಸ ಮಾರಾಟ: ಮಹಾವೀರ ಜಯಂತಿ ಪ್ರಯುಕ್ತ ಮಾಂಸ ಮಾರಾಟ ನಿಷೇಧವಿದ್ದರೂ ಕೆಲವೆಡೆ ಕದ್ದುಮುಚ್ಚಿ ಮಾಂಸ ಮಾರಾಟ ಮಾಡುತ್ತಿದ್ದುದು ಕಂಡುಬಂತು. ವಿನೋಬನಗರ ಹಾಗೂ ನಿಟುವಳ್ಳಿಯ ನಿಂಚನಾ ಶಾಲೆ ಬಳಿಯ ಕೆಲವು ಚಿಕನ್ ಸೆಂಟರ್‌ಗಳು ಮತ್ತು ರೈಲ್ವೆ ಹಳಿಯ ಬಳಿ ಇರುವ ಮೀನು ಮಾರುಕಟ್ಟೆಗಳಲ್ಲಿ ಮಾರಾಟ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಅಂಗಡಿ
ಗಳನ್ನು ಮುಚ್ಚಿಸಿ, ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಭಾನುವಾರವಾದ್ದರಿಂದ ಜನರು ಮಾಂಸ ಖರೀದಿಗೆ ಮುಗಿಬಿದ್ದಿದ್ದು, ಹೆಚ್ಚಿನ ಹಣ ಕೊಟ್ಟು ಮಾಂಸ ಖರೀದಿ
ಸಿದರು. ಮಾಂಸ ಮಾರಾಟ ಮಾಡದಂತೆ ಮಹಾನಗರಪಾಲಿಕೆ ಕೆಲ ದಿನಗಳ ಹಿಂದೆ ಪ್ರಕಟಣೆ ಹೊರಡಿಸಿದ್ದರೂ ಆದೇಶ ಉಲ್ಲಂಘಿಸಿ ಮಾರಾಟ ಮಾಡಿದರು. 

ಮದುವೆ: ₹ 30 ಸಾವಿರಕ್ಕೂ ಹೆಚ್ಚು ದಂಡ

ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿರುವ ಸಂಬಂಧ ನಗರದ ಹಲವು ಕಲ್ಯಾಣ ಮಂಟಪಗಳಲ್ಲಿ ವಧು–ವರರ ತಂದೆ ತಾಯಂದಿರಿಗೆ ದಂಡ ವಿಧಿಸಲಾಗಿದೆ.

ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರು ಭಾನುವಾರ ಸಾಯಂಕಾಲ ವಿವಿಧ ಕಲ್ಯಾಣ ಮಂಟಪಗಳಿಗೆ ತೆರಳಿ ಮಾಸ್ಕ್ ಧರಿಸದವರಿಗೆ ₹7,000 ದಂಡ ವಿಧಿಸಿದರು. ಮಹಾನಗರ ಪಾಲಿಕೆ ಅಧಿಕಾರಿಗಳು ಮೂರು ತಂಡಗಳಲ್ಲಿ ಸಂಚರಿಸಿ ₹ 30 ಸಾವಿರಕ್ಕೂ ಹೆಚ್ಚು ದಂಡ ವಿಧಿಸಿದ್ದಾರೆ. ನಿಗದಿಗಿಂತ ಹೆಚ್ಚು ಜನ ಸೇರಿರುವುದು, ಅಂತರ ಕಾಯ್ದುಕೊಳ್ಳದಿರುವುದಕ್ಕೆ ದಂಡ ವಿಧಿಸಲಾಗಿದೆ. 

‘ಭಾನುವಾರ ನಗರದಲ್ಲಿ 26 ಮದುವೆಗಳು ನಿಶ್ಚಯವಾಗಿದ್ದು, ಕೋವಿಡ್ ಕಾರಣದಿಂದಾಗಿ ದಂಡ ವಿಧಿಸುತ್ತಾರೆ ಎಂಬ ಭಯದಿಂದಲೇ ಹಲವು ಮದುವೆಗಳು ರದ್ದಾಗಿವೆ’ ಎಂದು ತಹಶೀಲ್ದಾರ್ ಗಿರೀಶ್ ತಿಳಿಸಿದರು.

ಮಾಸ್ಕ್ ಧರಿಸದವರಿಗೆ ₹49 ಸಾವಿರ ದಂಡ

ಜಿಲ್ಲೆಯಲ್ಲಿ ಭಾನುವಾರ ಮಾಸ್ಕ್ ಧರಿಸದ 346 ಪ್ರಕರಣಗಳನ್ನು ದಾಖಲಿಸಿ ₹ 49,300 ದಂಡವನ್ನು ವಿಧಿಸಲಾಗಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಚನ್ನಗಿರಿ ತಾಲ್ಲೂಕು ಹೆಬ್ಬಳಗೆರೆ ಗ್ರಾಮದ ಮಾರಿಕಾಂಬ ದೇವಾಲಯದ ಬಳಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು