ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿಯುವುದು ಕಾಯ, ಉಳಿಯುವುದು ಕಾರ್ಯ; ವಚನಾನಂದ ಸ್ವಾಮೀಜಿ

ಸರ್ವಧರ್ಮ ಸಮ್ಮೇಳನದಲ್ಲಿ ಹರಿಹರ ಲಿಂಗಾಯತ ಪೀಠದ ವಚನಾನಂದ ಸ್ವಾಮೀಜಿ
Last Updated 23 ಸೆಪ್ಟೆಂಬರ್ 2021, 3:46 IST
ಅಕ್ಷರ ಗಾತ್ರ

ತ್ಯಾವಣಿಗೆ: ‘ಸಜ್ಜನರ ಸಂಘ ಮಾಡಿದಾಗ ಶರೀರದ ಮನಸ್ಸಿನ ಮೈಲಿಗೆ ಕಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಜನರು ಅರಿತು ಬಾಳಬೇಕು’ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದರು.

ಸಮೀಪದ ಕಾರಿಗನೂರು ಗ್ರಾಮದ ಪಟೇಲ್ ಹಾಲಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಪ್ರಭಾ ವಾಗೀಶ್ ಪಟೇಲ್ ಸ್ಮರಣೆ ಮತ್ತು ಸರ್ವಧರ್ಮ ಸಮ್ಮೇಳನದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಶೀರ್ವಚನ ನೀಡಿದರು.

‘ಸಾವು ಹಳೆಯ ಬಟ್ಟೆ ಕಳಚಿ ಹೊಸ ಬಟ್ಟೆ ತೊಡುವಂತಹದು. ತಾಯಿ ಪ್ರಭಾ ಅವರು ಶರೀರ ತ್ಯಾಗ ಮಾಡಿರಬಹುದು. ಆದರೆ ಅವರು ನಡೆದಿರುವ ದಾರಿ, ಬದುಕು ಶಾಶ್ವತ. ಜೆ.ಎಚ್. ಪಟೇಲ್ ಮನೆತನ ಕರ್ನಾಟಕಕ್ಕೆ ಅತ್ಯಂತ ಮುಕುಟಪ್ರಾಯ. ಸಮಾಜಮುಖಿಯಾಗಿ ಜೀವನ ನಡೆಸಿದ ಅವರು ಅನೇಕ ರಚನಾತ್ಮಕ ಕಾರ್ಯಗಳನ್ನು ಮಾಡಿದ್ದರು’ ಎಂದು ಸ್ಮರಿಸಿದರು.

‘ಅಳಿಯುವುದು ಕಾಯ, ಉಳಿಯುವುದು ಕಾರ್ಯ ಎನ್ನುವಂತೆ ಕೂಡಲಸಂಗಮ ಅಭಿವೃದ್ಧಿ ಮಾಡಿದ್ದಾರೆ. ನಮ್ಮ ಶರೀರ ನಾಶವಾಗದೇ ನಾವು ಮಾಡಿರುವ ಕಾರ್ಯ ಮಾತ್ರ ಶಾಶ್ವತ ಎಂಬಂತೆ ಜೆ.ಎಚ್. ಪಟೇಲ್‌ ಅವರ ಮನೆತನದ ಕುಟುಂಬ ಮತ್ತು ಬದುಕು ನಮ್ಮೊಂದಿಗೆ ಇದೆ’ ಎಂದರು.

ಜೆ.ಎಚ್. ಪಟೇಲ್‌ ಅವರ ಸಹೋದರಿ ಅನಸೂಯಮ್ಮ ಮಾತನಾಡಿ, ‘ನಮ್ಮ ತಂದೆ ಹಾಲಪ್ಪನ ವರಿಗೆ ಧಾರ್ಮಿಕ ಪ್ರಜ್ಞೆ ಸಂಸ್ಕೃತಿ ಮತ್ತು ಸಮಾಜಮುಖಿ ಕಾರ್ಯದ ಬಗ್ಗೆ ವಿಶೇಷ ಆಸಕ್ತಿ ಇತ್ತು. ಅಂದಿನ ಬರಗಾಲದ ಸಂದರ್ಭ ಸರ್ಕಾರಕ್ಕೆ 30 ಸಾವಿರ ಭತ್ತದ ಚೀಲಗಳನ್ನು ಕೊಡುಗೆಯಾಗಿ ನೀಡಿ ದುದಕ್ಕೆ ಸರ್ಕಾರದಿಂದ ಪ್ರಶಸ್ತಿಯೂ ಬಂದಿತ್ತು’ ಎಂದು ತಿಳಿಸಿದರು.

‘ನಮ್ಮ ಅಣ್ಣ ಹೋರಾಟದಿಂದ ಬದುಕಿದವರು. ಹೆಚ್ಚಾಗಿ ಸೆರೆಮನೆಯಲ್ಲೇ ಕಾಲ ಕಳೆದರು. ಅವರು ಮಾಡಿರುವ ಸಮಾಜಮುಖಿ ಕಾರ್ಯ ಜೀವಂತವಾಗಿವೆ’ ಎಂದು ತಿಳಿಸಿದರು.

ಮಾಜಿ ಶಾಸಕ ಮಹಿಮ ಜೆ. ಪಟೇಲ್ ಮಾತನಾಡಿ, ‘ಗ್ರಾಮ ಪಂಚಾಯಿತಿ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಮಠ, ಮಂದಿರಗಳ ಪಾತ್ರ ಬಹುಮುಖ್ಯವಾಗಿದೆ’ ಎಂದು ತಿಳಿಸಿದರು.

ಚನ್ನಗಿರಿಯ ಕ್ಯಾಥೊಲಿಕ್‌ ಕ್ರೈಸ್ತ ದೇವಾಲಯದ ಧರ್ಮಗುರು ಸಂತೋಷ್‌ ‘ಹುಟ್ಟಿದ ಮೇಲೆ ಪ್ರತಿಯೊಬ್ಬರೂ ಸಾಯಲೇಬೇಕು. ಇದು ದೇವರ ಚಿತ್ತ ಹಾಗೂ ಪ್ರಕೃತಿಯ ನಿಯಮ. ಮನುಷ್ಯನ ಜೀವನ ಭೌತಿಕ ಹಾಗೂ ಲೌಕಿಕವಾಗಿ ಶೂನ್ಯವಾದದ್ದು. ಆದ್ದರಿಂದ ನಾವೆಲ್ಲರೂ ಸತ್ಯವನ್ನು ಅರಿತು ನಡೆಯಬೇಕು’ ಎಂದರು.

ಮಂಗಳೂರಿನ ಮುಸ್ಲಿಂ ಧರ್ಮಗುರು ಮೌಲಾನ ಬಿ. ಎ. ಇಬ್ರಾಂ ಸಖಾಫಿ ಮಾತನಾಡಿ, ‘ನಾವು ಯಾವುದೇ ಜಾತಿ, ಭೇದ– ಭಾವ ಮಾಡದೇ ಒಟ್ಟಾಗಿರಬೇಕು. ಇವನಾರವ ಇವನಾರವ ಎನ್ನದೆ. ಇವ ನಮ್ಮವ ನಮ್ಮವ ಎಂಬುದನ್ನು ಅರಿತು ಬಾಳಬೇಕು’ ಎಂದು ಸಲಹೆ ನೀಡಿದರು.

ಯರಗಟ್ಟಿ ಪರಮೇಶ್ವರ ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಆವಗೊಳ್ಳ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ತ್ರಿಶೂಲಪಾಣಿ ಪಟೇಲ್, ಎಚ್.ಎಸ್. ನಾಗರಾಜ್, ಚಿತ್ರದುರ್ಗದ ಮುಸ್ಲಿಂ ಧರ್ಮಗುರುಗಳಾದ ಅನ್ವರ್ ಸಾಹೇಬ್ ಇದ್ದರು. ತೇಜಸ್ವಿ ಪಟೇಲ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ರಮೇಶ್ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT