ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಸೇತಕೆ ಈ ಬಗೆ.. ಮತದಾರಗೆ

ಮನೆಯಿಂದ ಹೊರಗೆ ಬಾರದ ಪ್ರತಿಷ್ಠಿತ ಬಡಾವಣೆಗಳ ಮತದಾರರು
Last Updated 12 ನವೆಂಬರ್ 2019, 19:47 IST
ಅಕ್ಷರ ಗಾತ್ರ

ದಾವಣಗೆರೆ: ಹಳೇ ದಾವಣಗೆರೆ ವ್ಯಾಪ್ತಿಗಳಲ್ಲಿ ಮತದಾರ ತೋರಿದ ಉತ್ಸಾಹ ಹೊಸ ದಾವಣಗೆರೆಯಲ್ಲಿ ಕಂಡು ಬರಲಿಲ್ಲ. ಬೆಳಗ್ಗಿನಿಂದ ಸಂಜೆವರೆಗೂ ಉದ್ದದ ಸರತಿ ಸಾಲು ಎಂಬುದು ದಕ್ಷಿಣ ಕ್ಷೇತ್ರದ ವಾರ್ಡ್‌ಗಳನ್ನು ಬಿಟ್ಟು ಬೇರೆಡೆಗೆ ಕಂಡು ಬರಲಿಲ್ಲ. ಸುಶಿಕ್ಷಿತ ಜನ ಈ ಚುನಾವಣೆಯ ಬಗೆಗೆ ಹೆಚ್ಚು ಆಸಕ್ತಿ ತೋರದಿರುವುದೇ ಮತದಾನದ ಪ್ರಮಾಣ ಭಾರಿ ಕುಸಿತಕ್ಕೆ ಕಾರಣವಾಗಿದೆ.

‘ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತುಕೊಂಡು ವ್ಯವಸ್ಥೆಯನ್ನು, ಸ್ಥಳೀಯಾಡಳಿತವನ್ನು ಟೀಕಿಸುವುದು ಸುಲಭ. ಆದರೆ, ತಮ್ಮ ಕರ್ತವ್ಯವನ್ನು ಮಾಡದೇ, ಸಾರ್ವಜನಿಕ ಮತದಾನದಲ್ಲಿ ಪಾಲ್ಗೊಳ್ಳದೇ ಮಾಡುವ ಟೀಕೆಗಳಿಗೆ ಮೌಲ್ಯ ಇರುವುದಿಲ್ಲ. ನಗರದ ಪ್ರತಿಷ್ಠಿತ ಬಡಾವಣೆಗಳ ಅರಿಸ್ಟೋಕ್ಲಾಸ್‌ ಜನರ ಈ ನಿರಾಸಕ್ತಿ ನನಗೆ ಅಸಮಾಧಾನ ಉಂಟು ಮಾಡಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬೇಸರ ವ್ಯಕ್ತಪಡಿಸಿದರು.

‘ಮೂಲ ಸೌಲಭ್ಯಗಳಿಲ್ಲ. ಹೀಗಾಗಿ ಮತದಾನಕ್ಕೆ ಬರುವುದಿಲ್ಲ ಎಂದು ಹೇಳಿದ್ದ ಗ್ರಾಮೀಣ ಪ್ರದೇಶವನ್ನು ಒಳಗೊಂಡ ಕರೂರಿಗೆ ಹೋಗಿದ್ದೆ. ಅವರ ಬೇಡಿಕೆಗಳನ್ನು ನಿಯಮ ಮೀರದೇ ಆದ್ಯತೆಯ ಮೇರೆಗೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದೆ. ಅಂದು ಪ್ರತಿಭಟನೆ ಮಾಡಿದವರೇ ಇಂದು ಮನೆಮನೆಗೆ ಭೇಟಿ ನೀಡಿ ಎಲ್ಲರನ್ನೂ ಕರೆದುಕೊಂಡು ಬಂದು ಮತ ಹಾಕಿಸಿದ್ದಾರೆ. ಶೇ 90ಕ್ಕೂ ಅಧಿಕ ಮತದಾನವಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶಗಳಿರುವ, ಸ್ಲಂಗಳಿರುವ, ಪಾಲಿಕೆಯ ಅವಶ್ಯಕತೆ ಇರುವ ಎಲ್ಲ ವಾರ್ಡ್‌ಗಳಲ್ಲಿ ಉತ್ತಮ ಮತದಾನವಾಗಿದೆ. ಬುದ್ಧಿವಂತ ಜನರೇ ಕೈಕೊಟ್ಟಿದ್ದಾರೆ’ ಎಂಬುದು ಅವರ ವಿಶ್ಲೇಷಣೆ.

‘ವಿದ್ಯಾವಂತರು ಇರುವ ಪ್ರದೇಶಗಳಲ್ಲಿ ಮತದಾನ ಯಾವಾಗಲೂ ನಿಧಾನವಾಗುತ್ತದೆ. ಅವರನ್ನು ಮಾತನಾಡಿಸುವುದೇ ಕಷ್ಟ. ಇನ್ನು ಕರೆದುಕೊಂಡು ಬರುವುದು ಎಲ್ಲಿಂದ ಬಂತು’ ಎನ್ನುವುದು ಬಿಜೆಪಿ ಮುಖಂಡ ಜೀವನ್‌ಮೂರ್ತಿ ಅವರ ಪ್ರಶ್ನೆ.

‘ಬಡವರು, ಕಾರ್ಮಿಕರು, ಸಮಾಜದ ಬಗ್ಗೆ ಚಿಂತನೆ ನಡೆಸುವವರು ಬಂದು ಮತ ಚಲಾಯಿಸುತ್ತಾರೆ. ಉತ್ತಮ ವೇತನದ ಉದ್ಯೋಗ ಇರುವವರು, ಶ್ರೀಮಂತ ಜನ ಇರುವಲ್ಲಿ ಮತದಾನ ಕಡಿಮೆಯಾಗುತ್ತದೆ. ಹೀಗಾಗಿ ವಿದ್ಯಾನಗರದಲ್ಲಿ ಮಧ್ಯಾಹ್ನ 1 ಗಂಟೆ ದಾಟಿದರೂ ಶೇ 20ರಷ್ಟು ಮಾತ್ರ ಮತದಾನವಾಗಿತ್ತು’ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡ ಹರೀಶ್‌ ಕೆಂಗಲಹಳ್ಳಿ.

ಕೆಲವು ಕಡೆಗಳಲ್ಲಿ ಹಿರಿಯರಷ್ಟೇ ಮನೆಯಲ್ಲಿದ್ದು, ಮಗ, ಮಗಳು, ಸೊಸೆ, ಅಳಿಯ ಎಲ್ಲ ಬೆಂಗಳೂರು ಇನ್ನಿತರ ನಗರಗಳಲ್ಲಿ ಉದ್ಯೋಗದಲ್ಲಿರುವುದು ಕೂಡ ಚುನಾವಣೆಯಲ್ಲಿ ಭಾಗವಹಿಸದಿರಲು ಕಾರಣವಾಗಿದೆ. ವಿಧಾನಸಭೆ, ಲೋಕಸಭೆ ಚುನಾವಣೆಗಳು ಬಂದಾಗ ಊರಿಗೆ ಬಂದು ಮತ ಚಲಾಯಿಸುವ ಅವರು ಪಾಲಿಕೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಒಟ್ಟಿನಲ್ಲಿ ಈ ಬಾರಿ ಮೇಲ್ಮಧ್ಯಮ ವರ್ಗದ ಜನ ಚುನಾವಣೆಯಿಂದ ದೂರ ಉಳಿದಿರುವುದರಿಂದ ಮತಪ್ರಮಾಣ ಕುಸಿದಿದೆ.

****

62.06 % -2013ರಲ್ಲಿ ನಡೆದಿದ್ದ ಪಾಲಿಕೆ ಚುನಾವಣೆಯ ಮತ ಪ್ರಮಾಣ

56.31% - ಈ ಬಾರಿ ಚಲಾವಣೆಯಾದ ಮತ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT