ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಸಾಗಣೆಗೆ ಆಕ್ಷೇಪ: ಕಾಮಗಾರಿ ಸ್ಥಗಿತ

ನಲ್ಕುಂದ ಸಮೀಪ ಅಕ್ವಡಕ್ಟ್‌ ಪುನರ್‌ನಿರ್ಮಾಣ: ₹ 5 ಕೋಟಿ ಬಿಡುಗಡೆ
Last Updated 8 ಅಕ್ಟೋಬರ್ 2022, 7:05 IST
ಅಕ್ಷರ ಗಾತ್ರ

ಶಿವಮೊಗ್ಗ: ದಾವಣಗೆರೆ ತಾಲ್ಲೂಕಿನ ನಲ್ಕುಂದದ ಬಳಿ ಮಳೆಯಿಂದಾಗಿ ಕುಸಿದಿರುವ ಅಕ್ವಡಕ್ಟ್‌ನ ಮರು ನಿರ್ಮಾಣಕ್ಕೆ ಈಗ ಮಣ್ಣಿನ ಕೊರತೆ ಎದುರಾಗಿದೆ. ಹೀಗಾಗಿ ಶುಕ್ರವಾರ ಮಧ್ಯಾಹ್ನದ ನಂತರ ಕಾಮಗಾರಿ ಸ್ಥಗಿತಗೊಂಡಿದೆ.

ದಾವಣಗೆರೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅ. 1 ರಂದು ಸುರಿದ ಭಾರಿ ಮಳೆಯಿಂದಾಗಿ ಭದ್ರಾ ಬಲದಂಡೆ ನಾಲೆಯ ದಾವಣಗೆರೆ ಶಾಖಾ ಕಾಲುವೆ 35.50 ಕಿ.ಮೀ ನಲ್ಲಿ ಬರುವ ನಲ್ಕುಂದ ಗ್ರಾಮದ ಸಮೀಪ ಅಕ್ವಡಕ್ಟ್‍ನ ರಕ್ಷಣಾ ತಡೆಗೋಡೆ ಸೇರಿದಂತೆ ಕಾಲುವೆಯ ಕೊನೆ ಭಾಗದ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ.

ಮಣ್ಣು ಸಾಗಣೆ ಸ್ಥಗಿತ: ನೀರಿನ ಜೊತೆಗೆ ಅಕ್ವಡಕ್ಟ್‌ ಹಾಗೂ ಅದರ ಅಡಿಪಾಯದ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದೆ. ಹೀಗಾಗಿ ಕಾಮಗಾರಿಗೆ ಅಗತ್ಯವಿರುವ ಮಣ್ಣು (ಗ್ರಾವೆಲ್‌) ಸಮೀಪದ ಕ್ಯಾತನಹಳ್ಳಿಯಲ್ಲಿ ರೈತರೊಬ್ಬರ ಹೊಲದಿಂದ ತರಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು.

ಅದರಂತೆ ಲಾರಿಗಳಲ್ಲಿ ಕಾಮಗಾರಿ ಸ್ಥಳಕ್ಕೆ ಮಣ್ಣು ಪೂರೈಕೆ ಕಾರ್ಯ ಕೂಡ ಆರಂಭವಾಗಿತ್ತು. ಟಿಪ್ಪರ್‌ ಓಡಾಟದಿಂದ ರಸ್ತೆಗಳು ಹಾನಿಯಾಗುತ್ತವೆ ಎಂಬ ಕಾರಣದಿಂದ ಮಣ್ಣು ಪೂರೈಸಲು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊನೆಗೆ ಪೊಲೀಸ್‌ ಭದ್ರತೆಯಲ್ಲಿ ಮಣ್ಣು ತರುವ ಪ್ರಯತ್ನ ನಡೆದಿತ್ತು. ಇದು ಪರ–ವಿರೋಧಕ್ಕೆ ಕಾರಣವಾಗಿ ಕೊನೆಗೆ ಮಣ್ಣು ತರುವ ಕಾರ್ಯ ಸದ್ಯ ಸ್ಥಗಿತಗೊಂಡಿದೆ.

‘ಮಣ್ಣಿನ ಪೂರೈಕೆ ಸಮಸ್ಯೆ ಪರಿಹರಿಸುವಂತೆ ಕಾಡಾ ಅಧ್ಯಕ್ಷರಿಗೆ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದೇವೆ. ಶೀಘ್ರ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಮಗಾರಿಗೆ 15 ದಿನಗಳ ಕಾಲಮಿತಿ

ಅಕ್ವಡೆಕ್ಟ್‌ ಕಾಮಗಾರಿ ಪೂರ್ಣಗೊಳಿಸಲು ಸದ್ಯ 15 ದಿನಗಳ ಕಾಲ ಮಿತಿ ನಿಗದಿ ಮಾಡಿಕೊಂಡಿದ್ದೇವೆ ಎಂದು ಕೆಎನ್‌ಎನ್‌ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ್‌ ತಿಳಿಸಿದರು. ಹೀಗಾಗಿ ದಾವಣಗೆರೆ ಶಾಖಾ ಕಾಲುವೆಗೆ ಭದ್ರಾ ಜಲಾಶಯದಿಂದ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಕಾಮಗಾರಿ ಮುಗಿಯುವವರೆಗೆ ರೈತರು ಸಹಕರಿಸುವಂತೆ ಕಾಡಾ ಶುಕ್ರವಾರ ಪ್ರಕಟಣೆ ನೀಡಿದೆ.

‘ಕಾಮಗಾರಿಗೆ ಮಳೆ ಅಡ್ಡಿಪಡಿಸುತ್ತಿದೆ. ಹೀಗಾಗಿ ಎರಡು ವಾರಗಳ ಸಮಯ ಕೇಳಿದ್ದೇವೆ. ಮಲೆಬೆನ್ನೂರು ಭಾಗದ ಶಾಖಾ ಕಾಲುವೆಗೆ ಸೂಳೆಕೆರೆ ಬಳಿಯ ಆರ್‌–2 ರೆಗ್ಯುಲೇಟರ್‌ ಕಡೆಯಿಂದ ನೀರು ಹರಿಸಲಾಗುತ್ತಿದೆ. ಆ ಭಾಗದ ರೈತರಿಗೆ ತೊಂದರೆ ಆಗುವುದಿಲ್ಲ. ಆದರೆ ದಾವಣಗೆರೆ ಹಾಗೂ ಸುತ್ತಲಿನ ಪ್ರದೇಶಕ್ಕೆ ನೀರು ಪೂರೈಕೆ ಸ್ಥಗಿತಗೊಂಡಿದೆ’ ಎಂದು ಮಂಜುನಾಥ್ ತಿಳಿಸಿದರು.

ಹೊಸ ಅಕ್ವಡಕ್ಟ್‌ನ ವಿನ್ಯಾಸವನ್ನು ಬೆಂಗಳೂರಿನಿಂದ ಬಂದಿರುವ ನಿಗಮದ ತಜ್ಞರ ತಂಡ ಸಿದ್ಧಪಡಿಸಿದೆ ಎಂದರು.

ದಾವಣಗೆರೆ ಶಾಖಾ ಕಾಲುವೆಗೆ ನೀರು ಹರಿಸದ ಕಾರಣ ಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸುವ ಪ್ರಮಾಣವನ್ನು 2 ಟಿಎಂಸಿ ಅಡಿಯಿಂದ 1 ಟಿಎಂಸಿ ಅಡಿಗೆ ತಗ್ಗಿಸಲಾಗಿದೆ.

ಕೋಟ್‌...

ಕಾಮಗಾರಿಗೆ ₹ 5 ಕೋಟಿ ಈಗಾಗಲೇ ನೀರಾವರಿ ನಿಗಮ ಬಿಡುಗಡೆ ಮಾಡಿದೆ. ಮಣ್ಣು ತರಲು ಅವಕಾಶ ನೀಡುವಂತೆ ಸ್ಥಳೀಯ ರೈತರ ಮನವೊಲಿಸಲು ಸೋಮವಾರ ಅಲ್ಲಿಗೆ ತೆರಳಲಿದ್ದೇನೆ.
ಪವಿತ್ರಾ ರಾಮಯ್ಯ, ಭದ್ರಾ ಕಾಡಾ ಅಧ್ಯಕ್ಷರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT