ಜಗತ್ತಿನ ಔಷಧಾಲಯ ಭಾರತ

7
ದಾವಣಗೆರೆ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ಕಲಿಕಾ ಕಾರ್ಯಾಗಾರದಲ್ಲಿ ಬಿ.ಎಂ. ಕುಮಾರಸ್ವಾಮಿ

ಜಗತ್ತಿನ ಔಷಧಾಲಯ ಭಾರತ

Published:
Updated:
ದಾವಣಗೆರೆಯಲ್ಲಿ ಭಾನುವಾರ ನಡೆದ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘವನ್ನು ಹಾಗೂ ನಿರಂತರ ಕಲಿಕಾ ಕಾರ್ಯಾಗಾರವನ್ನು ಉಪ ಔಷಧ ನಿಯಂತ್ರಕ ಬಿ.ಪಿ. ಅರುಣ್‌ ಕುಮಾರ್‌ ಉದ್ಘಾಟಿಸಿದರು

ದಾವಣಗೆರೆ: ಸಾಫ್ಟ್‌ವೇರ್‌ ಕಂಪನಿಗಳು 25 ವರ್ಷಗಳ ಈಚೆಗೆ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದರೆ, ಔಷಧ ತಯಾರಿಯಲ್ಲಿ 50 ವರ್ಷಗಳ ಹಿಂದೆಯೇ ಇಂಥ ಹೆಸರು ಬಂದಿತ್ತು. ಜಗತ್ತಿನ ಔಷಧಾಲಯ ಭಾರತ ಎಂದು ಈಗಲೂ ಗುರುತಿಸಲಾಗುತ್ತಿದೆ ಎಂದು ಸ್ವದೇಶಿ ಜಾಗರಣ ಮಂಚ್‌ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಂ. ಕುಮಾರಸ್ವಾಮಿ ಹೇಳಿದರು.

ಸದ್ಯೋಜಾತ ಸ್ವಾಮೀಜಿ ಹಿರೇಮಠ ಸಭಾಂಗಣದಲ್ಲಿ ಭಾನುವಾರ ನಡೆದ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ಉದ್ಘಾಟನೆ ಹಾಗೂ ನಿರಂತರ ಕಲಿಕಾ ಕಾರ್ಯಾಗಾರದಲ್ಲಿ ಅವರು ‘ಜಾಗತಿಕ ಮಾರುಕಟ್ಟೆಯಿಂದ ಸಣ್ಣ ವ್ಯಾಪಾರಿಗಳ ಮೇಲಾಗುವ ಪರಿಣಾಮಗಳು’ ಕುರಿತು ‌ಉಪನ್ಯಾಸ ನೀಡಿದರು.

 ಔಷಧಕ್ಕೆ ಸಂಬಂಧಿಸಿದಂತೆ 1970ರ ವರೆಗೆ ಭಾರತದಲ್ಲಿ ಬ್ರಿಟಿಷರು ಮಾಡಿದ ಕಾಯ್ದೆಯೇ ಜಾರಿಯಲ್ಲಿತ್ತು. ಅವರಿಗೆ ಅವಶ್ಯ ಇರುವ ಔಷಧವನ್ನು ಮಾತ್ರ ತಯಾರಿ ಮಾಡಬೇಕಿತ್ತು. ಜಗತ್ತಿನ ವಿವಿಧ ದೇಶಗಳ ವಿರೋಧದ ನಡುವೆಯೂ ಇಂಡಿಯನ್‌ ಪೇಟೆಂಟ್‌ ಆ್ಯಕ್ಟ್‌ –1970 ಅನ್ನು ಜಾರಿಗೊಳಿಸುವ ಮೂಲಕ ‌ಭಾರತೀಯ ಔಷಧಗಳ ಉತ್ಪಾದನೆಗೆ ಮನ್ನಣೆ ನೀಡಿದವರು ಇಂದಿರಾಗಾಂಧಿ. ಅಲ್ಲಿಂದ ಔಷಧದ ಕ್ರಾಂತಿಯೇ ಭಾರತದಲ್ಲಿ ನಡೆಯಿತು ಎಂದು ಹೇಳಿದರು.

ಯುರೋಪ್‌, ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳು ಸಾವಿರ ರೂಪಾಯಿ ಮೌಲ್ಯ ಇಟ್ಟು ಮಾರುತ್ತಿದ್ದ ಔಷಧಗಗಳು ಭಾರತದಲ್ಲಿ ₹ 5, 10ಕ್ಕೆ ಸಿಗುವಂತಾಯಿತು. ಇದನ್ನು ವಿದೇಶಿ ಕಂಪನಿಗಳು ಸಹಿಸಿಕೊಳ್ಳುತ್ತಿಲ್ಲ. ಅದಕ್ಕಾಗಿ ವಿವಿಧ ದೇಶಗಳು ನಿರಂತರ ಒತ್ತಡ ಹೇರುತ್ತಾ ಬಂದಿವೆ. ಇದರ ಪರಿಣಾಮವಾಗಿ 2004ರಲ್ಲಿ ಗ್ಯಾಟ್‌ ಒಪ್ಪಂದದಲ್ಲಿ ಔಷಧ ಪೇಟೆಂಟ್‌ ವಿಚಾರವನ್ನೂ ಸೇರಿಸಲಾಗಿತ್ತು ಎಂದು ವಿವರಿಸಿದರು.

ಪೇಟೆಂಟ್‌ ಆ್ಯಂಡ್‌ ಪೇಷೆಂಟ್‌:

ವಿದೇಶಿ ಕಂಪನಿಗಳು ಪೇಟೆಂಟ್‌ಗೆ ಪ್ರಾಮುಖ್ಯವನ್ನು ಕೊಡುತ್ತವೆ. ಭಾರತದಲ್ಲಿ ಪೇಷೆಂಟ್ ಅಂದರೆ ರೋಗಿಗಳಿಗೆ ಪ್ರಾಮುಖ್ಯ ನೀಡಲಾಗುತ್ತದೆ. ವಿವಿಧ ದೇಶಗಳ ಒತ್ತಡಕ್ಕೆ ಮಣಿದು ಆಗಿನ ಮನಮೋಹನ್‌ ಸಿಂಗ್‌ ಸರ್ಕಾರ ಇಂಡಿಯನ್‌ ಪೇಟೆಂಟ್‌ ಆ್ಯಕ್ಟ್‌– 2005 ತರಲಾಯಿತು. 1970ರ ಕಾಯ್ದೆ ಜನರಿಗೆ ಉಪಯೋಗವಾಗಿದ್ದರೆ, 2005ರ ಕಾಯ್ದೆ ಬಹುರಾಷ್ಟ್ರೀಯ ಔಷಧ ಕಂಪನಿಗಳಿಗೆ ಉಪಯೋಗ ಆಗುವಂಥದ್ದು. ಆದರೂ ಹಲವು ಸಂಘಟನೆಗಳ ಹೋರಾಟದ ಬಳಿಕ ಕೆಲವು ರಕ್ಷಣಾತ್ಮಕ ಕ್ರಮಗಳನ್ನು ಈ ಕಾಯ್ದೆಯೊಳಗೆ ಸೇರಿಸಲಾಗಿದೆ ಎಂದರು.

ಹೊಸ ಕಾಯ್ದೆ ಪ್ರಕಾರ ಈಗಾಗಲೇ ಇರುವ ಔಷಧವನ್ನು ಸಣ್ಣಪುಟ್ಟ ಬದಲಾವಣೆ ಮಾಡಿ ಪೇಟೆಂಟ್‌ ಕೇಳುವಂತಿಲ್ಲ. ಅಲ್ಲದೇ ಪೇಟೆಂಟ್‌ ಇದ್ದರೂ ಶೇ 6ರಷ್ಟು ರಾಜಸ್ವಧನ ಕಟ್ಟಿ ಔಷಧ ಉತ್ಪಾದನೆ ಮಾಡಬಹುದು. ಇದನ್ನು ಕೂಡಾ ಜಾಗತಿಕ ಮಟ್ಟದಲ್ಲಿ ವಿರೋಧಿಸಲಾಗುತ್ತಿದೆ. ಇದು ಭಾರತೀಯರಿಗೆ ಒಳ್ಳೆಯದೇ ಆದರೂ ಅವರ ಮಾರುಕಟ್ಟೆಗೆ ಹೊಡೆತ ಎಂಬುದು ಈ ವಿರೋಧಕ್ಕೆ ಕಾರಣ ಎಂದು ವಿಶ್ಲೇಷಿಸಿದರು.

ಭಾರತದಲ್ಲಿ ಔಷಧ ತಯಾರಿ ಮತ್ತು ವ್ಯಾಪಾರವನ್ನು ಕೋಟ್ಯಂತರ ಮಂದಿ ಮಾಡುತ್ತಾರೆ. ಅದು ವಿಕೇಂದ್ರೀಕರಣ ಅಭಿವೃದ್ಧಿ ವ್ಯವಸ್ಥೆ. ಇದರ ಲಾಭ ಕೂಡಾ ಅದೇ ರೀತಿ ಹಂಚಿ ಹೋಗುತ್ತದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳು ಔಷಧ ಉತ್ಪಾದನೆಯನ್ನು ತಮ್ಮ ಕೈಗೆ ಎತ್ತಿಕೊಂಡರೆ ಒಂದೇ ಕಡೆ ಅವರ ಲಾಭ ಹೋಗುತ್ತದೆ. ಅವರು ನೀಡಿದ ಔಷಧವನ್ನಷ್ಟೇ ಬಳಸಬೇಕು. ಅಷ್ಟೇ ಅಲ್ಲದೇ ಉದ್ಯೋಗ ಅವಕಾಶಕ್ಕೂ ಇದು ಕತ್ತರಿ ಹಾಕುತ್ತದೆ ಎಂದು ತಿಳಿಸಿದರು.

ಉಪ ಔಷಧ ನಿಯಂತ್ರಕ ಬಿ.ಪಿ. ಅರುಣ್‌ ಕುಮಾರ್‌ ಉದ್ಘಾಟಿಸಿದರು. ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಒ. ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು.

ಭಾರತದಲ್ಲಿ ಸಮುದಾಯದ ಔಷಧಾಲಯದ ಸವಾಲು ಮತ್ತು ಅವಕಾಶಗಳು ಬಗ್ಗೆ ಬೆಂಗಳೂರು ಶಾಶ್ವತ್‌ ಗ್ರೂಪ್‌ ಎಜಿಎಂ ಇಂದುಶೇಖರ್‌, ಕ್ಷಯರೋಗ ನಿಯಂತ್ರಣದಲ್ಲಿ ಔಷಧ ವ್ಯಾಪಾರಿಗಳ ಪಾತ್ರ ಕುರಿತು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಜಿ.ಡಿ. ರಾಘವನ್‌್ ಉಪನ್ಯಾಸ ನೀಡಿದರು.

ಚೇತನ ಫಾರ್ಮದ ಕೆ.ಇ. ಪ್ರಕಾಶ್‌, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಮಾಜಿ ಅಧ್ಯಕ್ಷ ಬಾಲಚಂದ್ರ ರೆಡ್ಡಿ, ಸಹಾಯಕ ಔಷಧ ನಿಯಂತ್ರಕರಾದ ಸಿ. ಕುಮಾರ್‌, ಆರ್‌. ಪರಶುರಾಮ್‌, ಔಷಧ ಪರಿವೀಕ್ಷಕಿ ಎಂ.ಎಸ್‌. ಗೀತಾ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ವಿರೂಪಾಕ್ಷಪ್ಪ ಕಡ್ಲಿ, ಕೋಶಾಧಿಕಾರಿ ವಿ.ಎ. ಸುನೀಲ್‌ ಉಪಸ್ಥಿತರಿದ್ದರು.

ಟಿ.ಎಂ. ವೀರೇಂದ್ರ ಸ್ವಾಗತಿಸಿದರು. ವಿಠಲ್‌ರಾಜ್‌ ವಂದಿಸಿದರು. ಪ್ರಭುಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !