ಬುಧವಾರ, ಏಪ್ರಿಲ್ 1, 2020
19 °C
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಹಿತಿ

ಅಗತ್ಯ ವಸ್ತುಗಳ ಸೇವೆ ಆಭಾದಿತ, ಸಂಚಾರ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸಿದ್ದರೂ ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಯಾವುದೇ ತಡೆ ಇಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಹೇಳಿದರು.

ಜಿಲ್ಲೆಯಲ್ಲಿ ಮಾರ್ಚ್‌ 31ರವರೆಗೆ ಸಂಪೂರ್ಣ ಲಾಕ್‍ಡೌನ್ ಘೋಷಿಸಲಾಗಿದೆ. ಐದಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಮಾರುಕಟ್ಟೆ ಪ್ರದೇಶಗಳನ್ನು ಮುಚ್ಚಲು ಆದೇಶಿಸಲಾಗಿದೆ. ಹಾಲು, ಔಷಧ, ದಿನಸಿ ಸಾಮಾಗ್ರಿ ಮತ್ತಿತರ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಮುಂಗಟ್ಟುಗಳನ್ನೂ ಸಂಪೂರ್ಣವಾಗಿ ಮುಚ್ಚಲು ಆದೇಶಿಸಲಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ತಳ್ಳು ಗಾಡಿಗಳಿಗೆ ಅವಕಾಶ

ರಸ್ತೆ ಬದಿ ವ್ಯಾಪಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಆದರೆ ತಳ್ಳುಗಾಡಿಗಳಲ್ಲಿ ಮನೆ ಬಾಗಿಲಿಗೆ ತರಕಾರಿ, ಹೂವು, ಹಣ್ಣು ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜನರು ಗುಂಪಾಗಿ ಮನೆಯಿಂದ ಹೊರ ಬರಬಾರದು. ಗಾಬರಿಗೊಳ್ಳಬಾರದು ಎಂದು ಸಲಹೆ ನೀಡಿದರು.

ಪ್ರಯಾಣಿಕರ ವಾಹನಗಳಿಗೆ ನಿರ್ಬಂಧ

ಜಿಲ್ಲೆಯಲ್ಲಿ ಎಲ್ಲ ರೀತಿಯ ಪ್ರಯಾಣಿಕರ ವಾಹನಗಳ ಸಂಚಾರ ಸ್ಥಗಿತೊಳಿಸಲಾಗಿದೆ. ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು ತುರ್ತು ಸಮಯದಲ್ಲಿ ತಮ್ಮ ವಾಹನಗಳನ್ನು ಬಳಸಿಕೊಳ್ಳಬಹುದು ಎಂದರು.

ಮೆಗ್ಗಾನ್ ಆಸ್ಪತ್ರೆ ಸಜ್ಜು

ಮೆಗ್ಗಾನ್ ಆಸ್ಪತ್ರೆ ನೂತನ ಕಟ್ಟಡವನ್ನು ಕೋವಿಡ್‌–19 ಪೀಡಿತರ ಚಿಕಿತ್ಸೆಗಾಗಿ ಮೀಸಲಿಡಲು ನಿರ್ಧರಿಸಲಾಗಿದೆ. ಯಾವುದೇ ತುರ್ತುಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ 45 ವೆಂಟಿಲೇಟರ್‌ಗಳು ಲಭ್ಯವಿವೆ. 15 ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ವೈದ್ಯಕೀಯ ಸಿಬ್ಬಂದಿ ಹಾಗೂ ರೋಗಿಗಳಿಗೆ ಅಗತ್ಯವಿರುವ ಮುಖಗವಸು, ಕೈಗವಸು, ಸ್ಯಾನಿಟೈಸರ್‌ಗಳನ್ನು ಸಂಗ್ರಹಿಸಿಡಲಾಗಿದೆ.  ಔಷಧ ಸಾಮಾಗ್ರಿಗಳ ಕೊರತೆಯಾಗದಂತೆ ಎಚ್ಚರವಹಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಳ್ಳಲಾಗುವುದು ಎಂದರು.

ಹೊರ ರೋಗಿಗಳ ಸೇವೆ ಸ್ಥಗಿತ ಬೇಡ

ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸೇವೆ (ಒಪಿಡಿ) ಮುಂದುವರಿಸಲು   ಸಲಹೆ ನೀಡಲಾಗಿದೆ. ಒಂದಕ್ಕಿಂತ ಹೆಚ್ಚು ರೋಗ ಲಕ್ಷಣ ಇರುವವರನ್ನು ಮೆಗ್ಗಾನ್‍ಗೆ ಕಳುಹಿಸುವಂತೆ ಸೂಚಿಸಲಾಗಿದೆ. ಉಳಿದವರನ್ನು ಖಾಸಗಿ ಆಸ್ಪತ್ರೆಯಲ್ಲಿಯೇ ತಪಾಸಣೆ ನಡೆಸಲು ಕೋರಲಾಗಿದೆ ಎಂದು ವಿವರ ನೀಡಿದರು.

ಕಣ್ಗಾವಲು

ವಿದೇಶದಿಂದ ಬಂದವರ ಮೇಲೆ ನಿರಂತರ ನಿಗಾ ಇರಿಸಲಾಗಿದೆ.  ಮನೆಯಿಂದ ಹೊರಗೆ ಬಾರದಂತೆ ಸೂಚನೆ ನೀಡಲಾಗಿದೆ. ಅಂತವರ ಮನೆಗಳನ್ನು ಗುರುತಿಸಲು ಪೋಸ್ಟರ್‌ಗಳನ್ನು ಹಚ್ಚಲಾಗುವುದು. ಅಗತ್ಯವಿದ್ದರೆ ನಿಗಾ ವಹಿಸಲು ಸಿಬ್ಬಂದಿ ನೇಮಕ ಮಾಡಲಾಗುವುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು