ಶನಿವಾರ, ಫೆಬ್ರವರಿ 27, 2021
31 °C
25 ಸಾವಿರ ರೈತರಿಗೆ ವರದಾನ, ಪ್ರತಿಯೊಬ್ಬರಿಗೂ ಗರಿಷ್ಠ ₨ 1.50 ಲಕ್ಷದವರೆಗೆ ಸೌಲಭ್ಯ

ಹೊಸ ರೈತರಿಗೆ ₨ 225 ಕೋಟಿ ಸಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲೆಯ 25 ಸಾವಿರ ಹೊಸ ರೈತರಿಗೆ ₨ 225 ಕೋಟಿ ಸಾಲ ವಿತರಿಸಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ದಿಟ್ಟ ನಿರ್ಧಾರ ಕೈಗೊಂಡಿದೆ.

ಆರ್‌ಟಿಸಿ ದಾಖಲೆ ಹೊಂದಿರುವ ಪ್ರತಿಯೊಬ್ಬ ಹೊಸ ರೈತನಿಗೂ ಹಿಡುವಳಿ ಪ್ರಮಾಣ ಆಧರಿಸಿ ಮಾರ್ಚ್ 31ರ ಒಳಗೆ ಗರಿಷ್ಠ ₨ 1.50 ಲಕ್ಷದವರೆಗೆ ಸಾಲ ನೀಡಲಾಗುವುದು. ಮುಖ್ಯಮಂತ್ರಿ, ಸಹಕಾರ, ಕೃಷಿ ಸಚಿವರ ಆಶಯಕ್ಕೆ ಬ್ಯಾಂಕ್ ಸ್ಪಂದಿಸಿದೆ. ಈಗಾಗಲೇ ಜಿಲ್ಲೆಯ 162 ಪ್ರಾಥಮಿಕ ಸಹಕಾರ ಸಂಘಗಳು ಪ್ರಕ್ರಿಯೆ ಆರಂಭಿಸಿವೆ. ಡಿಸಿಸಿ ಬ್ಯಾಂಕ್ ಎಲ್ಲ ಶಾಖೆಗಳು ಭಾನುವಾರವೂ ಕಾರ್ಯನಿರ್ವಹಿಸಲಿವೆ ಎಂದು ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

₨ 225 ಕೋಟಿಯಲ್ಲಿ ₨ 200 ಕೋಟಿ ಬೆಳೆ ಸಾಲ, ₨ 25ಕೋಟಿ ಮಧ್ಯಮಾವಧಿ ಸಾಲ ನೀಡಲಾಗುವುದು. ಈಗಾಗಲೇ ಜಿಲ್ಲೆಯ 76 ಸಾವಿರ ರೈತರಿಗೆ ಬೆಳೆಸಾಲ, ಮಧ್ಯಮಾವಧಿ ಸಾಲ ನೀಡಲಾಗಿದೆ. ಸಾಲ ವಿತರಣೆಯಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಹೊಸ ರೈತರಿಗೆ ಸಾಲ ನೀಡಲು ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರ ಮಹತ್ವದ ಹೆಜ್ಜೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು 1 ಲಕ್ಷ ರೈತರಿಗೆ ಸಾಲ ನೀಡಿದ ಶ್ರೇಯಕ್ಕೆ ಡಿಸಿಸಿ ಬ್ಯಾಂಕ್‌ ಪಾತ್ರವಾಗಲಿದೆ ಎಂದು ಬಣ್ಣಿಸಿದರು.

ರಾಷ್ಟ್ರೀಕೃತ ಬ್ಯಾಂಕ್‌, ಗ್ರಾಮೀಣ ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಮನ್ನಾ ಸೌಲಭ್ಯ ಪಡೆದ ರೈತರಿಗೂ ಆದ್ಯತೆ ನೀಡಲಾಗುತ್ತಿದೆ. ಆ ಮೂಲಕ ಜಿಲ್ಲೆ ಶೇ 99ರಷ್ಟು ರೈತರಿಗೆ ಸಾಲ ನೀಡುವ ಗುರಿ ಈಡೇರುತ್ತಿದೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ₨ 50 ಸಾವಿರದವರೆಗೆ ಸಾಲಮನ್ನಾ ಮಾಡಲಾಗಿತ್ತು. ಸರ್ಕಾರ ಬಿಡುಗಡೆ ಮಾಡಿದ ₨ 270 ಕೋಟಿ 69,801 ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಯಾವುದೇ ಬಾಕಿ ಉಳಿದಿಲ್ಲ. ಸಮ್ಮಿಶ್ರ ಸರ್ಕಾರ ಘೋಷಿಸಿದ ಸಾಲ ಮನ್ನಾದ ಮೊದಲ ಕಂತು ₨ 15 ಕೋಟಿ ಬಿಡುಗಡೆಯಾಗಿದೆ. ಜಿಲ್ಲೆಯ 33,880 ರೈತರಿಗೆ ಇದರ ಪ್ರಯೋಜನ ದೊರಕಲಿದೆ. ಆಯಾ ರೈತರ ಸಾಲ ಮನ್ನಾ ಅವಧಿ ಮುಗಿದಂತೆ ಕಂತುಗಳ ಮೂಲಕ ಹಣ ನೀಡಲಾಗುತ್ತಿದೆ. ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಜನವರಿ ತಿಂಗಳ ಕಂತು ₨ 30 ಕೋಟಿ ಬಿಡುಗಡೆಯಾಗಬೇಕಿದೆ ಎಂದು ವಿವರ ನೀಡಿದರು.

219 ಬೀದಿ ವ್ಯಾಪಾರಿಗಳಿಗೆ ನೆರವು: ಸಮ್ಮಿಶ್ರ ಸರ್ಕಾರ ಜಾರಿಗೆ ತಂದಿರುವ ‘ಬಡವರ ಬಂಧು‘ ಯೋಜನೆ ಅಡಿ 219 ಬೀದಿ ವ್ಯಾಪಾರಿಗಳಿಗೆ ₨ 10.16 ಲಕ್ಷ ಸಾಲ ವಿತರಿಸಲಾಗಿದೆ. ಮಾರ್ಚ್‌ ಅಂತ್ಯದ ಒಳಗೆ ಒಟ್ಟು 3 ಸಾವಿರ ವ್ಯಾಪಾರಿಗಳಿಗೆ ಸೌಲಭ್ಯ ನೀಡಲಾಗುವುದು ಎಂದರು.

ಸ್ವಸಹಾಯ ಗುಂಪುಗಳಿಗೆ ₨ 76.75 ಲಕ್ಷ ಸಾಲ: ಕಾಯಕ ಯೋಜನೆ ಅಡಿ ಸ್ವ-ಸಹಾಯ ಗುಂಪುಗಳಿಗೆ ₨ 76.16 ಲಕ್ಷ ಸಾಲ ವಿತರಣೆ ಮಾಡಲಾಗಿದೆ. ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡಲು ಪ್ರತಿಯೊಂದು ಗುಂಪುಗಳಿಗೂ ₨ 5ಲಕ್ಷದಿಂದ 10 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ. ₨ 5 ಲಕ್ಷದವರೆಗೆ ಶೂನ್ಯ ಬಡ್ಡಿ, ಮೇಲ್ಪಟ್ಟ ಹಣಕ್ಕೆ ವಾರ್ಷಿಕ ಶೇ 4ರಷ್ಟು ಬಡ್ಡಿ ದರ ವಿಧಿಸಲಾಗುವುದು ಎಂದು ಹೇಳಿದರು.

ಈ ಬಾರಿ ಬಜೆಟ್‌ನಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಮುಖ್ಯಮಂತ್ರಿಗಳಳಿಗೆ ಮನವಿ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ ಸಿಇಒ ರಾಜಣ್ಣ ರೆಡ್ಡಿ, ಎಪಿಎಂಸಿ ಅಧ್ಯಕ್ಷ ದುಗ್ಗಪ್ಪ ಗೌಡ, ಪದವೀಧರ ಸಹಕಾರ ಸಂಘದ ಅಧ್ಯಕ್ಷ ಎಸ್‌.ಪಿ. ದಿನೇಶ್, ನಿರ್ದೇಶಕರಾದ ಪರಮೇಶ್ವರ, ವೆಂಕಟೇಶ್, ಸಹಕಾರ ಇಲಾಖೆ ನಿಬಂಧಕ ರಘುಪತಿ ಉಪಸ್ಥಿತರಿದ್ದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.