ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಪ್ರೋತ್ಸಾಹಧನ ಬಿಡುಗಡೆಗೆ ಸರ್ಕಾರಕ್ಕೆ ಒತ್ತಾಯ

Last Updated 4 ಜುಲೈ 2020, 4:53 IST
ಅಕ್ಷರ ಗಾತ್ರ

ವಿಜಯಪುರ: ‘ಹೈನುಗಾರರಿಗೆ 3 ತಿಂಗಳಿನಿಂದ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಇದರ ಪರಿಣಾಮ, ಮೇವು, ಚಕ್ಕೆ, ಬೂಸಾದಂತಹ ಪಶು ಆಹಾರ ಉತ್ಪನ್ನಗಳನ್ನು ಖರೀದಿಸುವುದು ರೈತರಿಗೆ ಕಷ್ಟವಾಗುತ್ತಿದೆ’ ಎಂದು ಮುಖಂಡ ಜಿ.ರಾಜಗೋಪಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ಪಶು ಆಹಾರ ಸರಬರಾಜು ಆಗುತ್ತಿಲ್ಲವೆಂಬ ಕಾರಣ ನೀಡಿ ಅಂಗಡಿಯವರು ಚಕ್ಕೆ, ಬೂಸಾ ದರವನ್ನು ಹೆಚ್ಚಿಸಿದ್ದರು. ಲಾಕ್‌ಡೌನ್‌ ಸಡಿಲಿಕೆಯ ಬಳಿಕ ಹಾಲಿನ ಉತ್ಪಾದನೆ ಪ್ರಮಾಣ ಹೆಚ್ಚಾಗಿರುವುದರಿಂದ ಒಕ್ಕೂಟವೂ ಹಾಲಿನ ದರ ಲೀಟರ್‌ಗೆ ₹ 1.50 ರೂಪಾಯಿ ಕಡಿಮೆಗೊಳಿಸಿದ್ದು, ಲೀಟರ್ ಗೆ 27.50 ಸಿಗುತ್ತಿದ್ದು ಈಗ ರೈತರು ತೊಂದರೆ ಅನುಭವಿಸುವಂತಾಗಿದೆ’ ಎಂದರು.

ತಾಲ್ಲೂಕಿನಲ್ಲಿ 183 ಸಹಕಾರ ಸಂಘಗಳಿದ್ದು, ದಿನಕ್ಕೆ 1,35,000 ಲೀಟರ್ ನಷ್ಟು ಹಾಲು ಉತ್ಪಾದನೆಯಾಗುತ್ತಿದ್ದು, ಪ್ರತಿ ಲೀಟರ್ ಗೆ ಸರ್ಕಾರದಿಂದ ಸಿಗಬೇಕಾಗಿರುವ ಪ್ರೋತ್ಸಾಹಧನ ₹ 5ರಂತೆ ದಿನಕ್ಕೆ ₹ 6.75 ಲಕ್ಷ ಪ್ರೋತ್ಸಾಹಧನ ಬರಬೇಕು.

ಮಾರ್ಚ್, ಏಪ್ರಿಲ್, ಮೇ ತಿಂಗಳು ತಿಂಗಳಿಗೆ 2 ಕೋಟಿ 2 ಲಕ್ಷ 50 ಸಾವಿರದಂತೆ 3 ತಿಂಗಳಿಗೆ 6 ಕೋಟಿ 7 ಲಕ್ಷ 50 ಸಾವಿರ ಪ್ರೋತ್ಸಾಹಧನ ಬಿಡುಗಡೆಯಾಗಬೇಕಾಗಿದ್ದು, ಜೂನ್ ತಿಂಗಳದ್ದು ಸರ್ಕಾರದಿಂದ ಬಿಡುಗಡೆಯಾಗಬೇಕಾಗಿದೆ.

‘2019-20ನೇ ಸಾಲಿನ ಬಜೆಟ್‌ನಲ್ಲಿ ಹಾಲಿನ ಪ್ರೋತ್ಸಾಹ ಧನವನ್ನು ₹ 5 ರಿಂದ 6ಕ್ಕೆ ಹೆಚ್ಚಿಸಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಘೋಷಿಸಿದ್ದರು. ಅದರಂತೆ ₹ 6ಕ್ಕೆ ಹೆಚ್ಚಿಸುವ ಕುರಿತಂತೆ ಪಶುಸಂಗೋಪನೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದೆ. ಆದರೆ, ಸರ್ಕಾರದಿಂದ ಅನುಮೋದನೆ ದೊರೆಯದ ಹಿನ್ನೆಲೆಯಲ್ಲಿ ರೈತರಿಗೆ ₹ 6 ನೀಡಲಾಗುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕೂಡಲೇ ರೈತರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ರೈತ ಮುಖಂಡ ಮಂಡಿಬೆಲೆ ಎಂ.ದೇವರಾಜಪ್ಪ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT