ಮಂಗಳವಾರ, ಜನವರಿ 18, 2022
27 °C
ಭಾರತೀಯ ಕಿಸಾನ್ ಸಂಘದ ಪ್ರಾಂತ ಸಮ್ಮೇಳನದ ಸಮಾರೋಪ ಸಮಾರಂಭ

ಹುಬ್ಬಳ್ಳಿ: ‘ಸ್ವಾವಲಂಬನೆಗೆ ಸಂಘಟನೆ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ರೈತರು ಕೃಷಿಯಲ್ಲಿ ಸಾವಲಂಬನೆ ಸಾಧಿಸಬೇಕಾದರೆ, ಸಂಘಟನೆ ಅತಿ ಮುಖ್ಯ. ಅದಕ್ಕಾಗಿ, ಸಂಘವನ್ನು ತಳಮಟ್ಟದಿಂದ ಕಟ್ಟಬೇಕಿದೆ. ಪ್ರತಿ ರೈತರನ್ನು ತಲುಪುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಭಾರತೀಯ ಕಿಸಾನ್ ಸಂಘದ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ದೊಣೂರು ರಾಮು ಹೇಳಿದರು.

ನಗರದ ಹೆಬಸೂರ ಭವನದಲ್ಲಿ ಸಂಘದ ಉತ್ತರ ಪ್ರಾಂತವು ಆಯೋಜಿಸಿದ್ದ ‘ಪ್ರಾಂತ ರೈತ ಸಮ್ಮೇಳನ’ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದ ಅವರು, ‘ಗ್ರಾಮ, ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಂಘಟನೆ ಆಗಬೇಕು’ ಎಂದರು.

‘ರೈತರಿಗೆ ಕೃಷಿಯ ಬಗ್ಗೆ ಅಭಿಮಾನ ಮೂಡಿಸುವಂತಹ ಕೆಲಸಗಳನ್ನು ಸಂಘ ಮಾಡಬೇಕು. ಕೃಷಿಯನ್ನು ಲಾಭದಾಯಕ ಮಾಡುವುದರಿಂದ ಮಾತ್ರ ಸ್ವಾವಲಂಬನೆಯ ಜೀವನ ಸಾಧ್ಯ. ಈ ಕುರಿತು, ಅಗತ್ಯ ಸಲಹೆಗಳನ್ನು ರೈತರಿಗೆ ನೀಡಬೇಕು. ಕಾರ್ಯಕರ್ತರು ಈ ಕೆಲಸವನ್ನು ದೊಡ್ಡ ಮಟ್ಟದಲ್ಲಿ ಮಾಡಿದಾಗ ಬದಲಾವಣೆ ಸಾಧ್ಯ’ ಎಂದು ಹೇಳಿದರು.

ಸಂಘದ ಕರ್ನಾಟಕ ಪ್ರದೇಶ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಭೀಮಸೇನಾ ಕೋಕರೆ ಮಾತನಾಡಿ, ‘ಹಿರಿಯರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಸಂಘದ ಕೆಲಸಗಳನ್ನು ಶ್ರದ್ಧೆಯಿಂದ ನಿಭಾಯಿಸುವೆ’ ಎಂದು ಭರವಸೆ ನೀಡಿದರು.

ಸಮ್ಮೇಳನದ ನಿರ್ಣಯಗಳು: ಕೃಷ್ಣಾ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳನ್ನು ಸರ್ಕಾರ ಶೀಘ್ರ ಪೂರ್ಣಗೊಳಿಸಬೇಕು. ಪ್ರವಾಹ ಹಾಗೂ ಹವಾಮಾನ ವೈಪರೀತ್ಯ ಹಾಗೂ ಕಾಡು ಪ್ರಾಣಿಗಳಿಂದ ಉಂಟಾದ ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಬೇಕು. ಕೆರೆ ತುಂಬಿಸುವ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಮಳೆ ಮತ್ತು ಪ್ರವಾಹದಿಂದ ಹಾನಿಗೊಂಡ ರಸ್ತೆ ಮತ್ತು ಸೇತುವೆಗಳನ್ನು ಬೇಗನೆ ಪುನರ್ ನಿರ್ಮಾಣ ಮಾಡಬೇಕು ಎಂಬ ನಿರ್ಣಯಗಳನ್ನು ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು.

ಉತ್ತರ ಪ್ರಾಂತ ಅಧ್ಯಕ್ಷ ಗುರುನಾಥ ಶಂಕರ ಬಗಲಿ, ರಾಷ್ಟ್ರೀಯ ಅಧ್ಯಕ್ಷ ಐ.ಎನ್. ಬಸವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ವೀಣಾ ಸತೀಶ, ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಾಸರಗಟ್ಟ ಇದ್ದರು. ಸಂಘದ ರಾಜ್ಯ ಹಾಗೂ ಉತ್ತರ ಪ್ರಾಂತ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.