12 ವರ್ಷದ ಅಥರ್ವನಿಗೆ 7 ವಿಕೆಟ್‌

ಬುಧವಾರ, ಏಪ್ರಿಲ್ 24, 2019
34 °C
ಕೆಎಸ್‌ಸಿಎ ಅಂತರ ಜಿಲ್ಲಾ ಕ್ರಿಕೆಟ್‌: ಧಾರವಾಡ ನಗರ ತಂಡಕ್ಕೆ ಗೆಲುವು

12 ವರ್ಷದ ಅಥರ್ವನಿಗೆ 7 ವಿಕೆಟ್‌

Published:
Updated:
Prajavani

ಹುಬ್ಬಳ್ಳಿ: ಯುವ ಪ್ರತಿಭಾನ್ವಿತ ಆಟಗಾರ ಅಥರ್ವ ವೈದ್ಯ ಚುರುಕಿನ ಬೌಲಿಂಗ್ ಮಾಡಿ ಏಳು ವಿಕೆಟ್‌ಗಳನ್ನು ಉರುಳಿಸಿದರು. ಇದರಿಂದ ಧಾರವಾಡ ನಗರ ತಂಡ 14 ವರ್ಷದ ಒಳಗಿನವರ ಕೆಎಸ್‌ಸಿಎ ಅಂತರ ಜಿಲ್ಲಾ ಕ್ರಿಕೆಟ್‌ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು.

ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕಾರಾವಾರ ನಗರ ತಂಡ 26.2 ಓವರ್‌ಗಳಲ್ಲಿ 64 ರನ್‌ ಗಳಿಸಿ ಆಲೌಟ್‌ ಆಯಿತು. ಧಾರವಾಡ ತಂಡ 21.1 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ವಸಂತ ಮುರ್ಡೇಶ್ವರ ಕ್ರಿಕೆಟ್‌ ಅಕಾಡೆಮಿಯಲ್ಲಿ (ವಿಎಂಸಿಎ) ತರಬೇತಿ ಪಡೆಯುತ್ತಿರುವ 12 ವರ್ಷದ ಅಥರ್ವ7.2 ಓವರ್ ಬೌಲಿಂಗ್‌ನಲ್ಲಿ ಐದು ಮೇಡನ್‌ ಮಾಡಿ 12 ರನ್‌ ಮಾತ್ರ ನೀಡಿದರು! ವೇದಾಂಗ ಬಿಡ್ಕರ್ ಎರಡು ಮತ್ತು ಶ್ರೀಸಾಯಿ ಕದಮ್‌ ಒಂದು ವಿಕೆಟ್‌ ಉರುಳಿಸಿ ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಆಲೌಟ್‌ ಮಾಡಿದರು.

ಜೀತ್‌, ಉತ್ಕರ್ಷ್ ಶತಕ: ಬೆಳಗಾವಿ ನಗರ ತಂಡದ ಜೀತ್‌ (104) ಮತ್ತು ಉತ್ಕರ್ಷ್‌ ಶಿಂಧೆ (103) ಶತಕಗಳ ನೆರವಿನಿಂದ ಸವಾಲಿನ ಮೊತ್ತ ಗಳಿಸಿದ್ದ ತಂಡ ಗದಗ ನಗರ ತಂಡದ ಎದುರು 264 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ಬೆಳಗಾವಿ ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 315 ರನ್‌ ಗಳಿಸಿತ್ತು. ಗದಗ ತಂಡ 19.5 ಓವರ್‌ಗಳಲ್ಲಿ 55 ರನ್‌ ಗಳಿಸಿ ಆಲೌಟ್‌ ಆಯಿತು. ಬೆಳಗಾವಿ ತಂಡದ ಅಭಿಷೇಕ್‌ ನಿಕಮ್‌, ಸಾಯಿರಾಜ್‌ ದೇಸಾಯಿ ತಲಾ ಎರಡು ವಿಕೆಟ್‌, ಹರ್ಷ ಪಟೇಲ್ ಮೂರು ವಿಕೆಟ್‌ ಉರುಳಿಸಿದರು.

ಮಣಿಕಂಠ ಬ್ಯಾಟಿಂಗ್ ಅಬ್ಬರ: ಮಣಿಕಂಠ ಎಸ್‌. ಬುಕಿಟಿಗಾರ್‌ 93 ಎಸೆತಗಳಲ್ಲಿ 103 ರನ್‌ ಗಳಿಸಿ ಅಬ್ಬರಿಸಿದರು. ಇದರಿಂದ ಹುಬ್ಬಳ್ಳಿ ನಗರ ತಂಡ ಮಂಗಳವಾರ ನಡೆದ ಪಂದ್ಯದಲ್ಲಿ ಕಾರವಾರ ನಗರ ತಂಡವನ್ನು 160 ರನ್‌ಗಳಿಂದ ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ ತಂಡ 42.3 ಓವರ್‌ಗಳಲ್ಲಿ 267 ರನ್‌ ಕಲೆಹಾಕಿತು. 135 ನಿಮಿಷ ಬ್ಯಾಟಿಂಗ್‌ ಮಾಡಿದ ಮಣಿಕಂಠ 16 ಬೌಂಡರಿ ಬಾರಿಸಿದರು. ಕಾರವಾರ ತಂಡ 43 ಓವರ್‌ಗಳನ್ನಾಡಿ 107 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !