ಬುಧವಾರ, ನವೆಂಬರ್ 20, 2019
26 °C
ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸಭೆ

ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಿಂದ 12.77 ಮಿಲಿಯನ್ ಟನ್ ಸರಕು ಸಾಗಣೆ

Published:
Updated:
Prajavani

ಹುಬ್ಬಳ್ಳಿ: ಪ್ರಸಕ್ತ ಸಾಲಿನ ಆರ್ಥಿಕ ವರ್ಷದಿಂದ ಆಗಸ್ಟ್‌ ತನಕ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು 12.77 ಮಿಲಿಯನ್‌ ಟನ್‌ ಸರಕು ಸಾಗಿಸಿದ್ದು, ₹1115.88 ಕೋಟಿ ಆದಾಯ ಗಳಿಸಿದೆ ಎಂದು ಹುಬ್ಬಳ್ಳಿ ವಿಭಾಗೀಯ ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕ ಮುರಳಿ ಕೃಷ್ಣ ಹೇಳಿದರು.

ಭಾನುವಾರ ನಡೆದ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು ‘ಇದೇ ಅವಧಿಯಲ್ಲಿ 141.9 ಲಕ್ಷ ಪ್ರಯಾಣಿಕರು ರೈಲ್ವೆ ಸೌಲಭ್ಯ ಬಳಸಿಕೊಂಡಿದ್ದು, ಇಲಾಖೆ ₹149.01 ಕೋಟಿ ಆದಾಯ ಗಳಿಸಿದೆ. ಐದು ತಿಂಗಳ ಹಿಂದೆ ಗದಗ–ಹೂಟಗಿ ನಡುವಿನ 26 ಕಿ.ಮೀ. ಜೋಡಿಮಾರ್ಗ ಪೂರ್ಣಗೊಂಡಿದೆ. ಇದರಿಂದ ಈ ಯೋಜನೆ ಒಟ್ಟು 101 ಕಿ.ಮೀ. ಪೂರ್ಣಗೊಂಡಂತಾಗಿದೆ’ ಎಂದು ಮಾಹಿತಿ ನೀಡಿದರು.

ಗೋವಾದ ಲೋಕೋಪಯೋಗಿ ಸಚಿವ ದೀಪಕ್ ಪ್ರಭು ಸಾವಂರ್ಡೆ-ಧಡೇಮ್ ರಸ್ತೆಯಲ್ಲಿ ಸಬ್‍ವೇ ನಿರ್ಮಾಣದ ಬಗ್ಗೆ ಕೇಳಿದ ಪ್ರಶ್ನೆಗೆ ರೈಲ್ವೆ ಅಧಿಕಾರಿಗಳು ‘ಟೆಂಡರ್ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ’ ಎಂದು ಉತ್ತರಿಸಿದರು.

ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಉನ್ನತೀಕರಿಸಬೇಕು, ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಅನುಕೂಲಕ್ಕೆ ಇನ್ನಷ್ಟು ಬ್ಯಾಟರಿ ಚಾಲಿತ ವಾಹನಗಳನ್ನು ಒದಗಿಸಬೇಕು, ನಗರದ ರೈಲ್ವೆ ನಿಲ್ದಾಣದ ಎರಡನೇ ಪ್ರವೇಶದ್ವಾರದ ಕಾರ್ಯ ಶೀಘ್ರವಾಗಿ ಪೂರ್ಣಗೊಳಿಸಬೇಕು, ಪ್ಲಾಟ್‍ಫಾರ್ಮ್‌ ಸಂಖ್ಯೆಗಳನ್ನು ಹೆಚ್ಚಿಸಬೇಕು ಮತ್ತು ಹೊಸಪೇಟೆ-ಕೊಟ್ಟೂರು ನಡುವೆ ಪ್ಯಾಸೆಂಜರ್ ರೈಲು ಬೇಗನೆ ಓಡಿಸಬೇಕು ಎನ್ನುವ ವಿಷಯದ ಬಗ್ಗೆ ಚರ್ಚೆಯಾಯಿತು.

ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ. ಐ. ಸೇಂಥಿಲ್‌ ಕುಮಾರ್‌, ವಾಣಿಜ್ಯೋದ್ಯಮ ಸಂಘದ ಗೌರವ ಕಾರ್ಯದರ್ಶಿ ವಿನಯ್ ಜೆ. ಜವಳಿ, ವಿಮಲ್ ಎನ್. ತಾಳಿಕೋಟಿ; ಧಾರವಾಡದ ಗ್ರಾಹಕ ಭಾರತೀಯ ಪದಾಧಿಕಾರಿ ಮಾಧುರಿ ಕುಲಕರ್ಣಿ, ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ರೋಹನ್ ಆರ್.ಜವಳಿ ಇದ್ದರು. ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮಂಜುನಾಥ ಕನಮಡಿ ಇದ್ದರು.

ಪ್ರತಿಕ್ರಿಯಿಸಿ (+)