ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24x7 ನೀರು: ಉಳಿತಾಯ ಜೋರು

Last Updated 2 ಏಪ್ರಿಲ್ 2011, 8:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹನಿ ಹನಿಗೂಡಿ ಹಳ್ಳವಾಗುವ ಕಾಲ ಇದಲ್ಲ. ಆದ್ದರಿಂದಲೇ ಈಗ ನೀರು ಉಳಿತಾಯಕ್ಕೆ ಸಂಬಂಧಿಸಿ ಪರಿಸರವಾದಿಗಳು, ಪರಿಸರ ಪ್ರಿಯರು ಹಾಗೂ ನೀರು ಉಳಿತಾಯದ ಬಗ್ಗೆ ಕಾಳಜಿ ಇರುವವರ ಎದೆಬಡಿತ ಹೆಚ್ಚಾಗಿದೆ. ‘ಒಂದೊಂದು ಹನಿ ನೀರು ಪೋಲಾದರೆ ದಿನದಲ್ಲಿ ಐದು ಲೀಟರ್ ನೀರು ಪೋಲಾದಂತೆ’ ಎಂದು ಬರೆದು ನಗರದ ಗಾಜಿನ ಮನೆಯಲ್ಲಿರುವ ಹುಬ್ಬಳ್ಳಿ-ಧಾರವಾಡ ನೀರು ಸರಬರಾಜು ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯ ಮುಂದೆ ಅಳವಡಿಸಲಾಗಿರುವ ಫಲಕದ್ದು ಕೂಡ ಇದೇ  ಕಾಳಜಿ.

ಹೀಗೆ ಬರೆದಿರುವ ನಗರಪಾಲಿಕೆಯೇ ದಿನದಲ್ಲಿ 24 ತಾಸು ನೀರು ಬಿಡುವ ಆಲೋಚನೆ ಮಾಡಿರುವುದು, ಅದನ್ನು ಈಗಾಗಲೇ ಎಂಟು ವಾರ್ಡ್‌ಗಳಲ್ಲಿ ಕಾರ್ಯಗತ ಮಾಡಿರುವುದು, ಎಲ್ಲ ವಾರ್ಡ್‌ಗಳಲ್ಲಿ ಸದ್ಯದಲ್ಲೇ ಈ ಸೌಲಭ್ಯವನ್ನು ವಿಸ್ತರಿಸಲು ಮುಂದಾಗಿರುವುದು ಎಷ್ಟು ಸಮಂಜಸ ಎಂದು ಕೇಳುವವರು ಸಾಕಷ್ಟು ಮಂದಿ ಇದ್ದಾರೆ.

ಬಿಟ್ಟಿ ನೀರನ್ನೇ ಬೇಕಾಬಿಟ್ಟಿ ಬಳಸುವ, ಬಳಸಿದ್ದಕ್ಕಿಂತ ಹೆಚ್ಚು ಪೋಲು ಮಾಡುವವರು 24 ತಾಸು ನೀರು ಬಿಟ್ಟರೆ ಏನು ಮಾಡಲಿಕ್ಕಿಲ್ಲ? ಎಂಬುದು ಇನ್ನೊಂದು ಪ್ರಶ್ನೆ.
ಆದರೆ 24 ತಾಸು ನೀರು ಬಿಡುವ ಯೋಜನೆಯಿಂದ ನೀರು ಪೋಲಾಗುವುದಿಲ್ಲ, ಮಾತ್ರವಲ್ಲ ನಿರೀಕ್ಷೆಗೂ ಮೀರಿ ನೀರು ಉಳಿತಾಯವಾಗುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ. 24 ತಾಸು ನೀರು ಬಿಡುವುದರಿಂದ ನೀರು ಉಳಿತಾಯದ ಪ್ರಮಾಣ ಹೆಚ್ಚಾಗುತ್ತದೆ ಎಂಬುದಕ್ಕೆ ಅಧಿಕಾರಿಗಳು ನೀಡುವ ಮಾಹಿತಿ ಕುತೂಹಲಕಾರಿ.

ನಿಗದಿತ ದಿನ ಹಾಗೂ ವೇಳೆಯಲ್ಲಿ ನೀರು ಬಿಟ್ಟರೆ ಹೀಗಾಗುತ್ತದೆ: ನೀರು ಬರುವುದಕ್ಕಾಗಿ ಕಾಯುವವರು ನಲ್ಲಿ ತೆರೆದಿಡುತ್ತಾರೆ. ಹಾಗೆ ತೆರೆದಿಟ್ಟು ಹೊರಗೆ ಹೋಗುವವರೂ ಇದ್ದಾರೆ. ನೀರು ಸುರಿದು ಪಾತ್ರೆ ಅಥವಾ ಟ್ಯಾಂಕು ತುಂಬಿ ಹರಿಯುತ್ತದೆ. ಅನೇಕರು ಶೇಖರಿಸಿಟ್ಟ ನೀರನ್ನು ಮತ್ತೆ ನೀರು ಬಂದಾಗ ಹೊರ ಚೆಲ್ಲುತ್ತಾರೆ.

ಹೀಗೆ ಪೋಲಾಗುವ ನೀರಿಗೆ ಲೆಕ್ಕವಿಲ್ಲ. ಎಂದಾದರೂ ಬರುವ ನೀರಿನ ವಿಷಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳದ ಅನೇಕರು ಪೈಪಿನ ಲೀಕೇಜ್ ಮತ್ತಿತರ ವಿಷಯಗಳ ಕಡೆಗೆ ಗಮನ ಕೊಡುವುದಿಲ್ಲ. ಹೀಗೆಯೂ ಅಪಾರ ಪ್ರಮಾಣದ ನೀರು ‘ಹರಿದು’ ಹೋಗುಗುವುದಿದೆ.

24 ತಾಸು ನೀರು ಸರಬರಾಜು ಆಗುತ್ತಿದ್ದರೆ  ಇಂಥ ಸಮಸ್ಯೆಗಳಿಲ್ಲ. ಸದ್ಯ ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ಧಾರವಾಡ ಹಾಗೂ ಹುಬ್ಬಳ್ಳಿಯ ತಲಾ ನಾಲ್ಕು ವಾರ್ಡ್‌ಗಳ ಮನೆಗಳಲ್ಲಿ ಈಗ ನೀರು ಸಂಗ್ರಹ ಮಾಡಿ ಇಡುವ ಅಗತ್ಯವೇ ಇಲ್ಲ. ಹಿಂದೆ ಈ ಪ್ರದೇಶಗಳ ಮನೆಗಳ ಟ್ಯಾಂಕ್ ತುಂಬಿರುತ್ತಿದ್ದರೆ ಈಗ ಈ ಮನೆಗಳ ಪರವಾಗಿ ಪಾಲಿಕೆ ಟ್ಯಾಂಕ್ ತುಂಬಿರುತ್ತದೆ. ಈ ಟ್ಯಾಂಕ್‌ಗಳು ಸದಾ ತುಂಬಿರುವುದರಿಂದ ಎರಡನೇ ಮಹಡಿಗೂ ಸರಾಗವಾಗಿ ನೀರು ‘ಏರಿಸಲು’ ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ, ಪಾಲಿಕೆ ನೀರು ಸರಬರಾಜು ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಪಿ. ಜಯರಾಮು.

ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ) 2002ರಲ್ಲಿ ಮಾಡಿರುವ ಶಿಫಾರಸಿನಂತೆ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಮಾರ್ಗಸೂಚಿಯಲ್ಲಿ ಪ್ರತಿ ವ್ಯಕ್ತಿಗೆ ಪ್ರತಿ ದಿನ 130 ಲೀಟರ್ ನೀರು ಸರಬರಾಜು ಮಾಡಬೇಕು. ಇದರ ಹಿನ್ನೆಲೆಯಲ್ಲಿ ವಿತರಣಾ ವ್ಯವಸ್ಥೆಯನ್ನು ಸಿದ್ಧ ಮಾಡುವಾಗ ಪ್ರತಿ ತಲೆಗೆ ಹದಿನೈದು ಲೀಟರ್ ನೀರು ಪೋಲಾಗುತ್ತದೆ ಎಂದು ಲೆಕ್ಕ ಹಾಕಲಾಗುತ್ತದೆ.

24 ತಾಸು ನೀರು ಸರಬರಾಜು ವ್ಯವಸ್ಥೆಯಲ್ಲಿ ಈ ಲೆಕ್ಕಾಚಾರದ ಪ್ರಕಾರ ನೀರು ಬಿಟ್ಟರೆ ಹುಬ್ಬಳ್ಳಿ ನಗರದಲ್ಲಿ ಪ್ರತಿದಿನ ಒಂದು ಮಿಲಿಯ ಲೀಟರ್ ನೀರು ಉಳಿತಾಯವಾಗುತ್ತದೆ. ಧಾರವಾಡ ನಗರದಲ್ಲಿ 1.3 ಮಿಲಿಯ ಲೀಟರ್ ನೀರು ಉಳಿತಾಯವಾಗುತ್ತದೆ ಎಂದು ಹೇಳುತ್ತಾರೆ, 24 ತಾಸು ನೀರು ಸರಬರಾಜು ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಚೇರಿಯ ಉಪ ಯೋಜನಾ ವ್ಯವಸ್ಥಾಪಕ ಪ್ರಕಾಶ ಅಳಗವಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT