ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: 1962 ಹೆಚ್ಚು; 1991 ಕಡಿಮೆ ಅಂತರದ ಗೆಲುವು ದಾಖಲು

Last Updated 26 ಏಪ್ರಿಲ್ 2019, 10:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಒಂದು ಬಾರಿ ಮಾತ್ರ ನಡೆದಿದೆ. ಉಳಿದಂತೆ ಗೆಲುವಿನ ಅಂತರವು 40 ಸಾವಿರದಿಂದ ಒಂದೂವರೆ ಲಕ್ಷವನ್ನೂ ದಾಟಿದ್ದಿದೆ. ಪ್ರಚಾರ ಸಂದರ್ಭದಲ್ಲಿ ತುರುಸಿನ ಸ್ಪರ್ಧೆ ಅನ್ನಿಸಿದರೂ, ಫಲಿತಾಂಶದಲ್ಲಿ ಗೆಲುವು ನಿರಾಯಸವಾಗಿ ದಕ್ಕದ್ದೇ ಹೆಚ್ಚು.

1991ರ ಚುನಾವಣೆ ಹೊರತುಪಡಿಸಿದರೆ, ಉಳಿದೆಲ್ಲ ಚುನಾವಣೆಗಳಲ್ಲಿ ನೇರ ಸ್ಪರ್ಧೆ ನಡೆದಿರುವುದೇ ಹೆಚ್ಚು. ಬಿಜೆಪಿ ಬರುವುದಕ್ಕೆ ಮೊದಲು ಕಾಂಗ್ರೆಸ್‌ ವಿರುದ್ಧ ಕೆಎಂಪಿಪಿ, ಪಕ್ಷೇತರ, ಭಾರತೀಯ ಜನ ಸಂಘ, ಜನತಾ ಪಕ್ಷ, ಜನತಾ ದಳ ಅಭ್ಯರ್ಥಿಗಳು ನೇರ ಸ್ಪರ್ಧೆ ಒಡ್ಡಿದ್ದಾರೆ. 1996ರ ನಂತರದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುತ್ತಿದೆ.

1991ರ ಚುನಾವಣೆಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್‌ನ ಡಿ.ಕೆ. ನಾಯ್ಕರ್, ಜನತಾ ದಳದ ಚಂದ್ರಕಾಂತ ಬೆಲ್ಲದ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಬಿ.ಆರ್‌. ಯಾವಗಲ್ಲ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ನಾಯ್ಕರ್‌ ಅವರು 1,57, 682 ಮತ ಪಡೆದರೆ, ದಳದಿಂದ ಸ್ಪರ್ಧಿಸಿದ್ದ ಬೆಲ್ಲದ ಅವರು 1,53,891 ಮತ ಪಡೆಯುತ್ತಾರೆ. ಕೇವಲ 3,791 ಮತಗಳಿಂದ ನಾಯ್ಕರ್ ಗೆಲುವು ಸಾಧಿಸುತ್ತಾರೆ. ಯಾವಗಲ್‌ ಅವರು 1,34,565 ಮತ ಪಡೆದು ಗಮನ ಸೆಳೆಯುತ್ತಾರೆ. ಇಲ್ಲಿಯವರೆಗೂ ಇದೇ ಈ ಕ್ಷೇತ್ರದ ಕಡಿಮೆ ಮತಗಳ ಅಂತರದ ಗೆಲುವಾಗಿದೆ.

1962 ರಲ್ಲಿ ಸಾಹಿತಿ, ಸಮಾಜ ಸೇವಕಿ, ವಕೀಲೆಯಾಗಿ ಹೆಸರು ಮಾಡಿದ್ದ ಸರೋಜಿನಿ ಮಹಿಷಿ ಅವರು ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಕಣಕ್ಕಿಳಿಯುತ್ತಾರೆ. ಅವರು 1,87 654 ಮತಗಳನ್ನು ಪಡೆದರೆ, ಸ್ವತಂತ್ರ ಅಭ್ಯರ್ಥಿಯಾಗಿದ್ದ ಎ.ಎ. ಶಿವಳ್ಳಿ ಅವರು 34,104 ಮತಗಳನ್ನು ಪಡೆಯುತ್ತಾರೆ. ಅಂದು 1,53,550 ಮತಗಳಿಂದ ಪಡೆದ ಗೆಲುವು ಇಂದಿಗೂ ಈ ಕ್ಷೇತ್ರದ ದೊಡ್ಡ ಮತಗಳ ಅಂತರದ ಗೆಲುವಾಗಿದೆ.

1952, 57ರಲ್ಲಿ ಡಿ.ಪಿ. ಕರಮಕರ ಅವರು 41,871 ಹಾಗೂ 65,363 ಮತಗಳ ಅಂತರದಿಂದ ಸುಲಭ ಗೆಲುವು ಸಾಧಿಸುತ್ತಾರೆ. ಸರೋಜಿನಿ ಮಹಿಷಿ ಅವರು, 1967 ರಲ್ಲಿ ಜಗನ್ನಾಥರಾವ್‌ ಜೋಶಿ ವಿರುದ್ಧ 87,430 ಮತಗಳಿಂದ, 1971ರಲ್ಲಿ ಆರ್‌.ಜಿ. ವಾಲಿ ವಿರುದ್ಧ 98,067 ಹಾಗೂ 1977ರಲ್ಲಿ ಜಗನ್ನಾಥರಾವ್ ಜೋಶಿ ವಿರುದ್ಧ 54,428 ಮತಗಳಿಂದ ಗೆಲುವು ಸಾಧಿಸುತ್ತಾರೆ.

1980ರ ಚುನಾವಣೆ ವೇಳೆಗೆ ಇಂದಿರಾಗಾಂಧಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದ ಮಹಿಷಿ ಅವರ ಬದಲಾಗಿ ಡಿ.ಕೆ. ನಾಯ್ಕರ್‌ ಅವರಿಗೆ ಟಿಕೆಟ್‌ ನೀಡಲಾಗುತ್ತದೆ. ಮಹಿಷಿ ಅವರು ಜನತಾ ಪಕ್ಷದಿಂದ ಸ್ಪರ್ಧಿಸಿ 96,694 ಮತಗಳಿಂದ ಭರ್ಜರಿ ಗೆಲುವು ಸಾಧಿಸುತ್ತಾರೆ. 1984 ರಲ್ಲಿ ಎಸ್‌.ಐ. ಶೆಟ್ಟರ್‌ ವಿರುದ್ಧ 44,842, 1989 ರಲ್ಲಿ ಚಂದ್ರಕಾಂತ ಬೆಲ್ಲದ ವಿರುದ್ಧ 55,548 ಮತಗಳಿಂದ ನಾಯ್ಕರ್‌ ಗೆಲುವು ಸಾಧಿಸುತ್ತಾರೆ.

1996ರ ವೇಳೆಗೆ ಈದ್ಗಾ ಮೈದಾನ ವಿವಾದದಿಂದಾಗಿ ನೆಲೆಕಂಡುಕೊಂಡಿದ್ದ ಬಿಜೆಪಿಯಿಂದ ಸ್ಪರ್ಧಿಸುವ ವಿಜಯ ಸಂಕೇಶ್ವರ ಅವರು, ಜನತಾ ದಳದಿಂದ ಸ್ಪರ್ಧಿಸಿದ್ದ ಎಸ್‌.ಐ. ಮುನವಳ್ಳಿ ವಿರುದ್ಧ 40,351 ಮತಗಳಿಂದ ಗೆಲ್ಲುತ್ತಾರೆ. 1998 ರಲ್ಲಿ ಡಿ.ಕೆ. ನಾಯ್ಕರ್‌ ವಿರುದ್ಧ 1,29,201, 1999ರಲ್ಲಿ ವೀರಣ್ಣ ಮತ್ತಿಕಟ್ಟಿ ವಿರುದ್ಧ 41,580 ಮತಗಳಿಂದ ಸಂಕೇಶ್ವರ ಗೆಲುವು ಪಡೆಯುತ್ತಾರೆ.

ರಾಜಕೀಯದಲ್ಲಾದ ಬೆಳವಣಿಗೆಗಳಿಂದ ಸಂಕೇಶ್ವರ ಬಿಜೆಪಿ ತೊರೆದು ಸ್ವಂತ ಪಕ್ಷ ಕಟ್ಟಿದ್ದರಿಂದ ಬಿಜೆಪಿಯಿಂದ ಸ್ಪರ್ಧಿಸುವ ಪ್ರಹ್ಲಾದ ಜೋಶಿ ಅವರು, ಬಿ.ಎಸ್‌. ಪಾಟೀಲ ವಿರುದ್ಧ 83,038 ಮತಗಳಿಂದ ಗೆಲುವು ಸಾಧಿಸುತ್ತಾರೆ. 2009 ರಲ್ಲಿ ಎಂ.ಸಿ. ಕುನ್ನೂರ ವಿರುದ್ದ 1,37,663 ಹಾಗೂ 2014ರಲ್ಲಿ ವಿನಯ ಕುಲಕರ್ಣಿ ವಿರುದ್ಧ 1,14,197 ಮತಗಳಿಂದ ಜೋಶಿ ಗೆಲುವು ಸಾಧಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT