ಹೆಬ್ಬೆಟ್ಟು ನಂಬಿದವರು ಶೇ 20ರಷ್ಟು ಮಂದಿ!

7

ಹೆಬ್ಬೆಟ್ಟು ನಂಬಿದವರು ಶೇ 20ರಷ್ಟು ಮಂದಿ!

Published:
Updated:
Deccan Herald

ಬೆರಳಚ್ಚು ಇಂದು ಡಿಜಿಟಲ್ ಕ್ರಾಂತಿಯನ್ನೇ ಮಾಡಿದೆ’ ಎನ್ನುತ್ತಾರೆ ಪ್ರಧಾನಿ ನರೇಂದ್ರ ಮೋದಿ. ಆದರೆ ಧಾರವಾಡ ಜಿಲ್ಲೆಯಲ್ಲಿ ಶೇ 20ರಷ್ಟು ಮಂದಿ ಅಕ್ಷರಜ್ಞಾನವಿಲ್ಲದೆ ಹೆಬ್ಬೆಟ್ಟನ್ನೇ ಇಂದಿಗೂ ನೆಚ್ಚಿಕೊಂಡಿದ್ದಾರೆ...

ಜಿಲ್ಲೆಯಲ್ಲಿ ಸಾಕ್ಷರ ಪ್ರಮಾಣ 18 ವಯೋಮಾನಕ್ಕಿಂತ ಕಡಿಮೆ ಇರುವವರು ಸಾಮಾನ್ಯ ಶಿಕ್ಷಣದ ಅಡಿಯಲ್ಲೇ ಬರುವುದರಿಂದ ಜಿಲ್ಲಾ ಸಾಕ್ಷರತೆ  ಶಿಕ್ಷಣ ಇಲಾಖೆ ಅತ್ತ ಗಮನ ಹರಿಸಿಲ್ಲ. ಆದರೆ 18 ವಯೋಮಾನ ಮೀರಿದವರಲ್ಲಿ ಅಕ್ಷರಸ್ಥ ಮಹಿಳೆಯರ ಸಂಖ್ಯೆ (ಶೇ 73.5) , ಪುರುಷರಿಗೆ (ಶೇ 86.4) ಹೋಲಿಸಿದಲ್ಲಿ ತುಸು ಕಡಿಮೆ ಇದೆ. 

ಜಿಲ್ಲೆಯಲ್ಲಿ ಒಟ್ಟು ಶೇ 8ರ ದರದಲ್ಲಿ ಸಾಕ್ಷರತೆ ಬೆಳೆಯುತ್ತಿದೆ. ಇದರಲ್ಲಿ ಪುರುಷರ ಸಾಕ್ಷರತೆ ಏರಿಕೆ ಪ್ರಮಾಣ ಶೇ 5ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ 11ರಷ್ಟಿದೆ. ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಇಲಾಖೆಗೆ ಸಿಬ್ಬಂದಿ ಮತ್ತು ಅನುದಾನದ ಕೊರತೆ ಇರುವುದೇ ದೊಡ್ಡ ತಡೆಗೋಡೆಯಾಗಿದೆ ಎನ್ನುವುದು ಅಧಿಕಾರಿಗಳ ಅನಿಸಿಕೆ.

2001ರ ಜನಗಣತಿಗೆ ಹೋಲಿಸಿದಲ್ಲಿ ಜಿಲ್ಲೆಯ ಸಾಕ್ಷರತೆಯ ಪ್ರಮಾಣ ಶೇ 8.4ರಷ್ಟು ಹೆಚ್ಚಾಗಿದೆ. ಪುರುಷರ ಸಾಕ್ಷರತಾ ಪ್ರಮಾಣಕ್ಕೆ ಹೋಲಿಸಿದಲ್ಲಿ ಮಹಿಳೆಯರು ಸಾಕ್ಷರರಾಗುತ್ತಿರುವ ಪ್ರಮಾಣ ದ್ವಿಗುಣ ದರದಲ್ಲಿ ಏರಿಕೆಯಾಗುತ್ತಿದೆ.

ಹಾಗೆಯೇ ನಗರ ಪ್ರದೇಶಕ್ಕೆ ಹೋಲಿಸಿದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಸಾಕ್ಷರರಾಗಬೇಕಾದವರ ಸಂಖ್ಯೆಯು ಹೆಚ್ಚಿದೆ. ಈ ಹಿಂದೆ ಸಾಕ್ಷರತೆ ಹೆಚ್ಚಿಸಲು ಸರ್ಕಾರ ಕಾರ್ಯಕ್ರಮ ಕೈಗೊಂಡಿದ್ದರೂ, ಅದು ಒಂದು ತಾಲ್ಲೂಕಿನ ಒಂದು ಗ್ರಾಮ ಪಂಚಾಯ್ತಿಗಷ್ಟೇ ಸೀಮಿತವಾಗಿತ್ತು. ಇದು ಆ ಒಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಪ್ರಯೋಜನವಾಯಿತೇ ಹೊರತು, ಇಡೀ ಜಿಲ್ಲೆಗೆ ಆಗಲೇ ಇಲ್ಲ.

ಅಕ್ಷರ ಜ್ಞಾನ ನೀಡುವ ಕಡೆ ಗಮನ
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಸಾಕ್ಷರತಾ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ‘ಜಿಲ್ಲೆಯಲ್ಲಿ ಸಾಕ್ಷರತೆಗಾಗಿ ಒಟ್ಟು 5 ಸಿಬ್ಬಂದಿ ಇದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ನಾನು ಈ ಹುದ್ದೆಗೆ ಹೆಚ್ಚುವರಿಯಾಗಿ ನಿಯುಕ್ತಿಯಾಗಿದ್ದೇನೆ. 2017ರಲ್ಲಿ ಜಿಲ್ಲೆಗೆ ಬಂದ ಒಟ್ಟು ಅನುದಾನ ₹7ಲಕ್ಷ. 2018ರಲ್ಲಿ ₹14ಲಕ್ಷ ಬಂದಿದೆ. ಆದರೆ ಇದರಲ್ಲಿ ಎಲ್ಲವನ್ನೂ ನಿರ್ವಹಿಸಬೇಕು’ ಎಂದರು.

ಈ ಮೊದಲು ಅಕ್ಷರದೊಂದಿಗೆ ವೃತ್ತಿ ಕೌಶಲ ತರಬೇತಿ ನೀಡುತ್ತಿದ್ದೆವು. ಅನಕ್ಷರಸ್ಥರಿಗೆ ಓದಲು ಹಾಗೂ ಬರೆಯಲು ಮತ್ತು ಸರಳ ಲೆಕ್ಕ ಮಾಡಲು ಬರುವಂತೆ ಮಾಡುವುದು ಇಲಾಖೆಯ ಜವಾಬ್ದಾರಿ. ಇದರೊಂದಿಗೆ ಕೌಶಲ್ಯಾಭಿವೃದ್ಧಿಯನ್ನು ಮಾಡಲಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರ ಈಗ ಕೌಶಲ ತರಬೇತಿ ನೀಡುವುದಾಗಿ ಘೋಷಿಸಿದ ನಂತರ, ನಾವು ಕೇವಲ ಅಕ್ಷರ ಜ್ಞಾನ ನೀಡುವ ಕಡೆ ಗಮನ ಹರಿಸುತ್ತಿದ್ದೇವೆ’ ಎಂದರು.

‘ಸದ್ಯ ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಚುನಾಯಿತರಲ್ಲಿ ಯಾರೂ ಅನಕ್ಷರಸ್ಥರು ಇಲ್ಲ. ಇದು ಈವರೆಗಿನ ಜಿಲ್ಲೆಯ ಕ್ರಾಂತಿ. ಆದರೆ ಕೊಳಚೆ ಪ್ರದೇಶ ಮತ್ತು ಅಲೆಮಾರಿ ಕುಟುಂಬಗಳಲ್ಲಿ ಅನಕ್ಷರಸ್ಥರು ಇದ್ದಾರೆ. ಸದ್ಯ ನಮ್ಮ ಬಳಿ ಇರುವುದು 2011ರ ಜನಗಣತಿ ಆಧಾರದ ಮೇಲಿನ ದಾಖಲೆ. ಆದರೆ ಈಗ ಮತ್ತೊಮ್ಮೆ ಸಮೀಕ್ಷೆ ಕೈಗೊಳ್ಳಬೇಕಾದ ಅಗತ್ಯವಿದೆ’ ಎಂದರು.

‘ರಾಜ್ಯದಲ್ಲಿನ ಸಾಕ್ಷರತೆಯ ಪ್ರಮಾಣ ಹೆಚ್ಚಿಸಲು ಹೊಸ ಮಾರ್ಗಸೂಚಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ. ಈ ಕುರಿತು ಸರ್ಕಾರ ಮಟ್ಟದಲ್ಲಿ ಸಭೆ ನಡೆಯುತ್ತಿದೆ. ಅದು ಬಂದ ನಂತರ ಸಮೀಕ್ಷೆ ಕೈಗೊಳ್ಳು ವತ್ತ ಯೋಚಿಸಬೇಕಿದೆ. ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯೂ ಇರುವುದರಿಂದ ಈ ಕಾರ್ಯವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಮೇಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಬೇಕು’ ಎಂದು ಶ್ರೀಶೈಲ ಕರಿಕಟ್ಟಿ ತಿಳಿಸಿದರು.

ಡಿಜಿಟಲ್ ಕ್ರಾಂತಿಯಿಂದಾಗಿ ಪ್ರತಿಯೊಬ್ಬರ ಕೈಗೆ ಮೊಬೈಲ್ ಮತ್ತು ಎಟಿಎಂ ಕಾರ್ಡ್‌ಗಳು ಬಂದಿವೆ. ಆದರೆ ಓದಲು ಮತ್ತು ಬರೆಯಲು ಬಾರದವರ ಸಂಖ್ಯೆ ಇಂದಿಗೂ ದೊಡ್ಡದಿರುವುದು ವಿಪರ್ಯಾಸ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !