ಸೋಮವಾರ, ಆಗಸ್ಟ್ 8, 2022
24 °C
ಕಾರ್ಯಕರ್ತರೊಂದಿಗೆ ‘ಮನದ ಮಾತು’ ಆಲಿಸಿದ ಸಚಿವ ಜೋಶಿ ಹೇಳಿಕೆ

ಕೃಷ್ಣಾ ಕಾಲೊನಿ ನಿವಾಸಿಗಳಿಗೆ 350 ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಕೃಷ್ಣಾ ಕಾಲೊನಿ ನಿವಾಸಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 350 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದೇ ಯೋಜನೆಯಡಿ, ಮುಂದಿನ ಎರಡ್ಮೂರು ವರ್ಷಗಳಲ್ಲಿ ದೇಶದ ಎಲ್ಲ ಬಡವರಿಗೆ ಮನೆ ನಿರ್ಮಿಸಿ ಕೊಡಲು ಪ್ರಧಾನಿ ಮೋದಿ ಅವರು ಮುಂದಾಗಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಹಳೇ ಹುಬ್ಬಳ್ಳಿಯ ಕೃಷ್ಣಾ ಕಾಲೊನಿ ಉದ್ಯಾನದಲ್ಲಿ ಭಾನುವಾರ ಸ್ಥಳೀಯ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಅವರ ‘ಮನದ ಮಾತು’ ಆಲಿಸಿ ಮಾತನಾಡಿದ ಅವರು, ‘ಮೋದಿ ಅವರು ಬಡವರು, ದಲಿತರು ಹಾಗೂ ಅಸಹಾಯಕರ ಸ್ವಾವಲಂಬನೆಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ’ ಎಂದರು.

‘ಸೌಭಾಗ್ಯ ಯೋಜನೆಯಡಿ ಬಡವರಿಗೆ ಉಚಿತ ವಿದ್ಯುತ್‌ನೊಂದಿಗೆ, ಕಡಿಮೆ ದರದಲ್ಲಿ ಎಲ್‌ಇಡಿ ಬಲ್ಬ್ ಒದಗಿಸಲಾಗಿದೆ. ಕೋವಿಡ್–19  ಹಿನ್ನೆಲೆಯಲ್ಲಿ ಎರಡು ವರ್ಷ ಉಚಿತವಾಗಿ ಪಡಿತರ ನೀಡಲಾಗಿದೆ. ಬೀದಿ ವ್ಯಾಪಾರಸ್ಥರಿಗೆ ಬ್ಯಾಂಕ್ ಮೂಲಕ ಸ್ವನಿಧಿ ಯೋಜನೆಯಡಿ ₹50 ಸಾವಿರ ಸಾಲ ಕೊಡಲಾಗುತ್ತಿದೆ’ ಎಂದರು.

ಶೀಘ್ರ ನಿರಂತರ ನೀರು: ‘ಅವಳಿನಗರದ ಎಲ್ಲ ವಾರ್ಡ್‌ಗಳಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಕೆಯ ವ್ಯವಸ್ಥೆ ಮಾಡಲಾಗುತ್ತಿದೆ. ಆನಂದನಗರದ ಬಳಿ ಹೃದ್ರೋಗ ಆಸ್ಪತ್ರೆ, ರಾಷ್ಟ್ರಮಟ್ಟದ ಕ್ರೀಡಾಗ್ರಾಮ ನಿರ್ಮಿಸಲಾಗುವುದು. ಜೊತೆಗೆ, ಇನ್ನೂ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ‘ಪ್ರಧಾನಿ ಮೋದಿ ಅವರು ಅಸಾಮಾನ್ಯರು. ಅವರ ಮನಸ್ಸು ಸದಾ ಬಡವರು ಮತ್ತು ಸಾಮಾನ್ಯರಿಗಾಗಿ ಮಿಡಿಯುತ್ತದೆ. ತಮ್ಮ ಮನದ ಮಾತಿನ ಮೂಲಕ ಈ ದೇಶದ ಸಂಸ್ಕೃತಿ, ವೈವಿಧ್ಯತೆ, ಜನರ ಸಾಧನೆ ಬಗ್ಗೆ ಹೇಳುವ ಅವರು, ಉಳಿದವರಿಗೂ ಪ್ರೇರಣೆ ನೀಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಮಹಾನಗರ ಪಾಲಿಕೆ ಸದಸ್ಯ ಸತೀಶ ಹಾನಗಲ್ಲ, ಮಹೇಶ ಚಂದರಗಿ, ಮಹೇಶ ಘಾಟಗೆ, ಅಶೋಕ ವಾಲಿಕಾರ, ಬಸವರಾಜ ಶಿರಹಟ್ಟಿ, ಮಂಜುನಾಥ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು