ಬುಧವಾರ, ಮೇ 18, 2022
27 °C
ಮೊದಲ ಅಮೃತ ಸರೋವರ ನೂತನ ಕೆರೆ ನಿರ್ಮಾಣಕ್ಕೆ ಚಾಲನೆ

ಏಳು ತಿಂಗಳಲ್ಲಿ 75 ಕೆರೆ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಅಮೃತ ಸರೋವರ ಯೋಜನೆಯಡಿ, ಮುಂದಿನ ಏಳು ತಿಂಗಳಲ್ಲಿ ಧಾರವಾಡ ಜಿಲ್ಲೆಯಾದ್ಯಂತ 75 ಕೆರೆಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಈ ಯೋಜನೆ ರೂಪಿಸಲಾಗಿದೆ. ಶರೇವಾಡ ಗ್ರಾಮದ 3 ಎಕರೆ ಪ್ರದೇಶದಲ್ಲಿ ಜಿಲ್ಲೆಯ ಮೊದಲ ಕೆರೆ ನಿರ್ಮಿಸಲಾಗುತ್ತಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಹುಬ್ಬಳ್ಳಿ ತಾಲ್ಲೂಕಿನ ಶರೇವಾಡ ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಶರೇವಾಡ ಕೆರೆ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ದೇಶದಲ್ಲಿ 60 ಕೋಟಿ ಜನ ಶುದ್ಧ ಕುಡಿಯಲು ನೀರು ಸಿಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಇಸ್ರೇಲ್‌ನಲ್ಲಿ ನೀರಿನ ಪ್ರತಿ ಹನಿಯನ್ನು ಸದ್ಬಳಕೆ ಮಾಡಿಕೊಳ್ಳುವ ತಾಂತ್ರಿಕತೆ ಪಾಲಿಸುತ್ತಾರೆ’ ಎಂದರು.

‘ಭಾರತದಲ್ಲೂ ನೀರಿನ ಸದ್ಬಳಕೆಗೆ ಆದ್ಯತೆ ನೀಡಬೇಕಾಗಿದೆ. ನೀರನ್ನು ಮಿತವಾಗಿ ಅಗತ್ಯಕ್ಕೆ ಅನುಗುಣವಾಗಿ ಬಳಕೆ ಮಾಡಿಕೊಳ್ಳಬೇಕು. ಜಿಲ್ಲೆಯ ಕೈಗಾರಿಕೆಗಳು ಕೆರೆ ಅಭಿವೃದ್ಧಿಪಡಿಸಲು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಧನಸಹಾಯ ನೀಡುವಂತೆ ಕೋರಲಾಗುವುದು. ಶರೇವಾಡದ ಕೆರೆಯು ಉಳಿದ ಕೆರೆಗಳಿಗೆ ಮಾದರಿಯಾಗಬೇಕು’ ಎಂದರು. 

ಧಾರವಾಡದ 75 ಅಮೃತ ಕೆರೆಗಳ ಪೈಕಿ, ಶರೇವಾಡ ಕೆರೆಯನ್ನು ಟಾಟಾ ಕಂಪನಿಯು ಸಿಎಸ್‌ಆರ್‌ನಡಿ ನಿರ್ಮಾಣ ಮಾಡಲಿದೆ.

ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಸಿದ್ದನಗೌಡ ಚಿಕ್ಕನಗೌಡ್ರ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ,
ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಸುರೇಶ ಇಟ್ನಾಳ, ತಾಲ್ಲೂಕು ಪಂಚಾಯ್ತಿ ಇಒ ಗಂಗಾಧರ ಕಂದಕೂರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಾನಂದ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಮಹಾದೇವಿ ಅಮಟೂರ, ಟಾಟಾ ಕಂಪನಿಯ ಗೋವಿಂದರಾಜ ಕುಲಕರ್ಣಿ, ಪ್ರಶಾಂತ ದೀಕ್ಷಿತ್, ಬಿಜೆಪಿ ಮುಖಂಡರಾದ ಬಸವರಾಜ ಕುಂದಗೋಳಮಠ, ಸಿ.ಎನ್. ಪಾಟೀಲ, ಎಂ.ಆರ್. ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.