ಶುಕ್ರವಾರ, ಜೂನ್ 25, 2021
29 °C
ಫಲಾನುಭವಿಗಳ ಖಾತೆಗೆ ₹7.19 ಕೋಟಿ ಪಾವತಿ

ವಲಸೆ ಕಾರ್ಮಿಕರಿಗೆ ಆಸರೆಯಾದ ನರೇಗಾ

ಕಲಾವತಿ ಬೈಚಬಾಳ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಲಾಕ್‌ಡೌನ್‌ ಅವಧಿಯಲ್ಲಿ ಕೆಲಸ ಇಲ್ಲದೇ ಪರದಾಡಿದ ಗ್ರಾಮೀಣ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಆಸರೆಯಾಗಿದೆ.

ವಿವಿಧ ನಗರಗಳಿಂದ ಮರಳಿ ಹಳ್ಳಿಗೆ ಬಂದಿರುವ 1,067 ವಲಸೆ ಕಾರ್ಮಿಕರು ನರೇಗಾದಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಜನರ ಮನವೊಲಿಸಿ, ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದರಿಂದ ಕೆಲಸ‌ ಮಾಡುತ್ತಿರುವವರ ಸಂಖ್ಯೆ ಏರಿಕೆಯಾಗಿದೆ.

2020–21ರ ಏಪ್ರಿಲ್‌ನಲ್ಲಿ 54,939 ಮಾನವ ದಿನ ಸೃಜಿಸಲಾಗಿತ್ತು. 2021–22ರ ಏಪ್ರಿಲ್‌ನಲ್ಲಿ 1,67,466 ಮಾನವ ದಿನ ಸೃಜಿಸಲಾಗಿದೆ. ಏಪ್ರಿಲ್‌ನಲ್ಲಿ 1,175 ಹೊಸ ಜಾಬ್‌ ಕಾರ್ಡ್‌ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

‘ಜಲಶಕ್ತಿ’ ಅಭಿಯಾನ’ ಹಾಗೂ ‘ದುಡಿಯೋಣ ಬಾ’ ಅಭಿಯಾನದಡಿ ಜಿಲ್ಲೆಯ 144 ಗ್ರಾಮ ಪಂಚಾಯಿತಿಗಳಲ್ಲೂ ಕಾಮಗಾರಿ ನಡೆಸಲಾಗುತ್ತಿದೆ. ಈಗಾಗಲೇ ಫಲಾನುಭವಿಗಳ ಖಾತೆಗೆ ₹7.19 ಕೋಟಿ ಪಾವತಿ ಮಾಡಲಾಗಿದೆ. ಕಾರ್ಮಿಕರ ವೈಯಕ್ತಿಕ ಬ್ಯಾಂಕ್ ಖಾತೆಗೆ ವಾರಕ್ಕೊಮ್ಮೆ ಕೂಲಿ ಹಣ ಪಾವತಿಯಾಗುತ್ತಿದೆ. ಹಾಗಾಗಿ, ಆರ್ಥಿಕ ಸಂಕಷ್ಟದಲ್ಲಿದ್ದ ಕಾರ್ಮಿಕರು ತೊಂದರೆಯಿಲ್ಲದೆ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

2,47,747 ಮಾವನ‌ ದಿನ: ‘ಏ.1ರಿಂದ ಮೇ 8 ರ ಅವಧಿಯಲ್ಲಿ 2,47,747 ಮಾನವ ದಿನ ಸೃಜಿಸಿ, ಕೂಲಿ ಪಾವತಿಸಲಾಗಿದೆ. ಕೆಲಸ ಮಾಡುವ ಸ್ಥಳಗಳಲ್ಲಿ ಕಾರ್ಮಿಕರಿಗೆ ನೀರು, ನೆರಳಿನ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ರೇಖಾ ಡೊಳ್ಳಿನವರ ‘ಪ್ರಜಾವಾಣಿ’ಗೆ ತಿಳಿಸಿದರು.

ನಡೆಯುತ್ತಿರುವ ಕಾಮಗಾರಿಗಳು: ಯೋಜನೆಯಡಿ ಟ್ರಂಚ್ ಕಂ ಬಂಡ್ ನಿರ್ಮಾಣ, ಬದು, ಕೃಷಿ ಹೊಂಡ ನಿರ್ಮಾಣ, ಕೆರೆ ಹೂಳೆತ್ತುವ ಕಾಮಗಾರಿ, ರಸ್ತೆ ಕಾಮಗಾರಿ, ತೋಟಗಾರಿಕೆ ಕಾಮಗಾರಿಗಳು ನಡೆಯುತ್ತಿವೆ.

ಕೆಲಸ ಮಾಡುವ ಸ್ಥಳದಲ್ಲಿ ಕಡ್ಡಾಯವಾಗಿ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಲು ಸೂಚಿಸಲಾಗಿದೆ. ಕಾರ್ಮಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ತಿಳಿಸಲಾಗಿದೆ
ರೇಖಾ ಡೊಳ್ಳಿನವರ, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ

ದುಡಿಮೆಗೆಂದು ಬೆಂಗಳೂರಿಗೆ ಹೋಗಿದ್ದೆವು. ಕೊರೊನಾ ಕಾರಣದಿಂದ ಊರಿಗೆ ಮರಳಿದ್ದೇವೆ. ದುಡಿಮೆಗೆ ನರೇಗಾ ಆಸರೆಯಾಗಿದೆ. ಇಲ್ಲೇ ಅನ್ನ ಸಿಗುತ್ತಿರುವಾಗ ಇನ್ನೆಂದೂ ಬೆಂಗಳೂರಿನತ್ತ ಹೋಗೆವು
ಶಂಕ್ರಣ್ಣ, ವಲಸೆ ಕಾರ್ಮಿಕ

ಅಂಕಿಅಂಶ

1,47,826

ಒಟ್ಟು ಜಾಬ್ ಕಾರ್ಡ್‌ಗಳ ಸಂಖ್ಯೆ

68,597
ಸಕ್ರಿಯ ಜಾಬ್ ಕಾರ್ಡ್‌ಗಳ ಸಂಖ್ಯೆ

1,91,000

ನರೇಗಾದಡಿ ಕಾರ್ಯನಿರ್ವಹಿಸುತ್ತಿರುವ  ಕುಟುಂಬಗಳ ಸಂಖ್ಯೆ

₹299
ನಿತ್ಯದ ಕೂಲಿಯ‌ ಮೊತ್ತ

ನರೇಗಾ ಯೋಜನೆಯಡಿ ನಡೆದಿರುವ ಕಾಮಗಾರಿಗಳ ತಾಲ್ಲೂಕುವಾರು ಮಾಹಿತಿ

ತಾಲ್ಲೂಕು; ಕಾಮಗಾರಿಗಳ ಸಂಖ್ಯೆ

ಅಳ್ನಾವರ; 116
ಅಣ್ಣಿಗೇರಿ;254
ಧಾರವಾಡ;543
ಹುಬ್ಬಳ್ಳಿ:354
ಕಲಘಟಗಿ;876
ಕುಂದಗೋಳ;543
ನವಲಗುಂದ;654
ಒಟ್ಟು;2,740

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು