ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯದ ಅಪರೂಪದ ವಿಮರ್ಶಕ ಡಾ.ಗಿರಡ್ಡಿ: ಗುರುಲಿಂಗ ಕಾಪಸೆ

Last Updated 22 ಸೆಪ್ಟೆಂಬರ್ 2021, 16:27 IST
ಅಕ್ಷರ ಗಾತ್ರ

ಧಾರವಾಡ: ‘ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ಅಪರೂಪದ ವಿಮರ್ಶಕ ಹಾಗೂ ಚಿಂತಕ ಡಾ.ಗಿರಡ್ಡಿ ಗೋವಿಂದರಾಜ’ ಎಂದು ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಬಣ್ಣಿಸಿದರು.

ಇಲ್ಲಿನ ಕಲ್ಯಾಣನಗರದ ಡಾ.ಗಿರಡ್ಡಿ ಗೋವಿಂದರಾಜ ಅವರ ನಿವಾಸದ ಆವರಣದಲ್ಲಿ ಅವರ ಕುಟುಂಬ ಮತ್ತು ಡಾ.ಗಿರಡ್ಡಿ ಗೋವಿಂದರಾಜ್ ಪ್ರತಿಷ್ಠಾನ ಸಹಯೋಗದಲ್ಲಿ ಡಾ.ಗಿರಡ್ಡಿ ಗೋವಿಂದರಾಜ ಅವರ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.

‘ಇಡೀ ಕರ್ನಾಟಕದ ಆಧುನಿಕ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಡಾ.ಗಿರಡ್ಡಿ, ಪ್ರಾಚೀನ ಸಾಹಿತ್ಯ ಕುರಿತು ಡಾ.ಎಂ.ಎಂ.ಕಲಬುರ್ಗಿ ಅತ್ಯಂತ ಮಹತ್ವದ ಹೆಸರುಗಳು. ಈ ಪ್ರಕಾರಗಳಲ್ಲಿ ಅವರು ಮಾಡಿದ ಕೃಷಿ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ’ ಎಂದರು.

‘ಭೌತಿಕವಾಗಿ ಡಾ.ಗಿರಡ್ಡಿ ನಮ್ಮೊಂದಿಗಿರದಿದ್ದರೂ ಅವರ ಪ್ರತಿಮೆ ಮೂಲಕ ಸೂಕ್ಷ್ಮ ದೇಹ ನಮ್ಮೆದುರಿಗಿದೆ. ಪ್ರತಿಮೆಯ ಮೂಲಕ ಅವರು ಮತ್ತೆ, ಮತ್ತೇ ನಮ್ಮ ಸ್ಮರಣೆಗೆ ಬರುತ್ತಾರೆ’ ಎಂದು ಹೇಳಿದರು.

ಡಾ.ಗಿರಡ್ಡಿ ಅವರ ಸ್ನೇಹಿತ, ಕವಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ‘ಮೆದು ಮಾತು, ನಿಷ್ಠುರತೆ, ಅಪ್ಪಟ ವ್ಯವಹಾರಿಕತೆ, ನಿರಂತರ ಜ್ಞಾನದ ಹುಡುಕಾಟ ಗಿರಡ್ಡಿಯವರ ವಿಶೇಷತೆಗಳಾಗಿದ್ದವು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ವೆಂಕಟೇಶ ಮಾಚಕನೂರ, ‘ಡಾ.ವೀರಣ್ಣ ರಾಜೂರ ನೇತೃತ್ವದಲ್ಲಿ ಡಾ.ಎಂ.ಎಂ. ಕಲಬುರ್ಗಿ ಅವರ ಸಮಗ್ರ ಸಾಹಿತ್ಯದ 40 ಸಂಪುಟಗಳು ಸಿದ್ಧವಾಗಿವೆ. ಅದೇ ರೀತಿ ಡಾ.ಗಿರಡ್ಡಿ ಗೋವಿಂದರಾಜರ ಸಮಗ್ರ ಸಾಹಿತ್ಯ ಸಂಪುಟ ರೂಪದಲ್ಲಿ ಹೊರ ಬರಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಾನ ಯೋಜನೆ ರೂಪಿಸುತ್ತಿದೆ’ ಎಂದರು.

ಕಾರ್ಯಕ್ರಮದಲ್ಲಿ ಡಾ.ಬಾಳಣ್ಣ ಶೀಗಿಹಳ್ಳಿ, ಸರೋಜಾ ಗಿರಡ್ಡಿ, ಡಾ.ರಮಾಕಾಂತ ಜೋಶಿ, ಡಾ.ರಾಘವೇಂದ್ರ ಪಾಟೀಲ, ಹ.ವೆಂ.ಕಾಖಂಡಕಿ, ಚಂದ್ರಕಾಂತ ಬೆಲ್ಲದ, ಡಾ.ವೀಣಾ ಶಾಂತೇಶ್ವರಿ, ಡಾ.ಹೇಮಾ ಪಟ್ಟಣಶೆಟ್ಟಿ, ಸುನೀಲ ಗಿರಡ್ಡಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು, ಅಭಿಮಾನಿಗಳು, ಕುಟುಂಬದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT