ವಿ.ವಿ. ಕಾಯ್ದೆ ವಾಪಸ್‌ಗೆ ಎಬಿವಿಪಿ ಆಗ್ರಹ

7

ವಿ.ವಿ. ಕಾಯ್ದೆ ವಾಪಸ್‌ಗೆ ಎಬಿವಿಪಿ ಆಗ್ರಹ

Published:
Updated:
Prajavani

ಹುಬ್ಬಳ್ಳಿ: 2017ರ ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ ಸಾಕಷ್ಟು ಗೊಂದಲಗಳಿಂದ ಕೂಡಿದ್ದು, ಇದನ್ನು ಕೂಡಲೇ ವಾಪಸ್‌ ಪಡೆಯಬೇಕು. ಸಮಗ್ರ ಶಿಕ್ಷಣ ನೀತಿ ರೂಪಿಸಿ ರಾಜ್ಯದಲ್ಲಿ ಉನ್ನತ ಶಿಕ್ಷಣ ಉಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪದಾಧಿಕಾರಿಗಳು ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ವಿದ್ಯಾನಗರದಿಂದ ತಹಶೀಲ್ದಾರ್‌ ಕಾರ್ಯಾಲಯದ ತನಕ ಮೆರವಣಿಗೆ ಮೂಲಕ ಬಂದು ತಹಶೀಲ್ದಾರ್‌ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ಶಿಕ್ಷಣ ತಜ್ಞರೊಂದಿಗೆ ಚರ್ಚಿಸದೇ ತರಾತುರಿಯಲ್ಲಿ ವಿ.ವಿ. ಕಾಯ್ದೆ ಜಾರಿಗೆ ತಂದಿದೆ. ಇದು ಯುಜಿಸಿ ನಿಯಮಾವಳಿಗೆ ವಿರುದ್ಧವಾಗಿದೆ. ಆದ್ದರಿಂದ ಮೊದಲು ಇದನ್ನು ಕೈಬಿಡಬೇಕು. ರಾಜ್ಯಪಾಲರು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರದ ಶಿಫಾರಸು ತಿರಸ್ಕರಿಸಬೇಕು ಎಂದು ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಮುಖಂಡರು ಘೋಷಣೆ ಕೂಗಿದರು.

ಶಿಕ್ಷಣ ಸಚಿವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಉನ್ನತ ಶಿಕ್ಷಣದ ಪರಿಸ್ಥಿತಿ ಡೋಲಾಯಮಾನವಾಗಿದೆ. ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯಗಳಲ್ಲಿ ಖಾಲಿ ಇರುವ ಅಧ್ಯಾಪಕ ಮತ್ತು ಸಿಬ್ಬಂದಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಎಬಿವಿಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮೀಸೆ, ನಗರ ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ಲೋನಾರಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿನಯ ಭರಮಗೌಡ, ನಗರ ಜಂಟಿ ಕಾರ್ಯದರ್ಶಿ ಪ್ರದೀಪ ಗೌಡ್ರ, ಕಾರ್ಯದರ್ಶಿ ಸಚ್ಚಿನ್‌ ರಾಯಬಾಗಕರ್‌ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !