ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಹೂಡಿಕೆ ಪ್ರದೇಶ ಸ್ಥಾಪನೆಗೆ ಕ್ರಮ: ಬಸವರಾಜ ಬೊಮ್ಮಾಯಿ

ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಅಗತ್ಯ ತಿದ್ದುಪಡಿ
Last Updated 16 ಜುಲೈ 2022, 13:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಗುಜರಾತ್‌ ಮಾದರಿಯಲ್ಲಿ ಧಾರವಾಡ ಮತ್ತು ತುಮಕೂರಿನಲ್ಲಿವಿಶೇಷ ಹೂಡಿಕೆ ಪ್ರದೇಶ ಯೋಜನೆ (ಎಸ್‌ಐಆರ್‌) ಜಾರಿ ಮಾಡಲಾಗುತ್ತಿದೆ. ಇದಕ್ಕೆ ಅಗತ್ಯವಿರುವ ಶಾಸನ ತಿದ್ದುಪಡಿಯನ್ನು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ತರಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ಮೆಟಿರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್‌ನ ನೂತನ ಕಟ್ಟಡ ನಿರ್ಮಾಣ ಕೇಂದ್ರಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಹುಬ್ಬಳ್ಳಿ– ಧಾರವಾಡದಲ್ಲಿ ಎಫ್‌ಎಂಜಿಸಿ ಕ್ಲಸ್ಟರ್ ಸ್ಥಾಪನೆ ಆಗುವುದರಿಂದ ಒಂದು ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ. ಇದು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ. ಭವಿಷ್ಯದಲ್ಲಿ ಈ ಭಾಗದ ನಗರಗಳು ಬೃಹತ್ ಕೈಗಾರಿಕಾ ನಗರಗಳಾಗಿ ಅಭಿವೃದ್ಧಿ ಹೊಂದಲಿವೆ’ ಎಂದರು.

‘ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ನಮ್ಮ ರಾಜ್ಯದ ಸೌಲಭ್ಯಗಳನ್ನು ಹೊರ ರಾಜ್ಯದ ಉದ್ಯಮಿಗಳು ಬಳಸಿಕೊಳ್ಳುತ್ತಿದ್ದಾರೆ. ರಾಜ್ಯದ ಉದ್ಯಮಿಗಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು, ಉದ್ಯಮಗಳನ್ನು ಅಭಿವೃದ್ಧಿಪಡಿಸಬೇಕು. ಕೈಗಾರಿಕಾ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಂಡರೆ ಮಾರುಕಟ್ಟೆ ಸೃಷ್ಟಿ ಸುಲಭವಾಗಲಿದೆ. ನವೆಂಬರ್ 2 ಹಾಗೂ 3ಕ್ಕೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನ ನಡೆಯಲಿದ್ದು, ಸ್ಥಳೀಯ ಕನ್ನಡಿಗ ಉದ್ದಿಮೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು‌’ ಎಂದು ಹೇಳಿದರು.

‘ಕೈಗಾರಿಕಾ ಉತ್ಪನ್ನಗಳ ಗುಣಮಟ್ಟದಲ್ಲಿ ಸ್ವಯಂ ಶಿಸ್ತು ತರುವ ಕರ್ನಾಟಕ ಮೆಟಿರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್‌ಗೆ (ಕೆಎಂಟಿಆರ್‌ಸಿ) ಎನ್‌ಎಬಿಎಲ್ ಮಾನ್ಯತೆ ದೊರೆತಿದೆ. ಕೇಂದ್ರಕ್ಕೆ ಅತ್ಯಾಧುನಿಕ ಉಪಕರಣಗಳ ಪೂರೈಕೆಗಾಗಿ ₹4 ಕೋಟಿ ಮಂಜೂರು ಮಾಡುವಂತೆ ಪ್ರಸ್ತಾವನೆ ಬಂದಿದ್ದು, ಶೀಘ್ರ ಅನುದಾನ ಬಿಡುಗಡೆ ಮಾಡಲಾಗುವುದು ’ ಎಂದರು.

‘ಕೇಂದ್ರದಲ್ಲಿ ಉದ್ದಿಮೆದಾರರು ಉತ್ಪಾದಿಸುವ ವಸ್ತುಗಳ ಗುಣಮಟ್ಟ ಪರೀಕ್ಷೆ ನಡೆಯುತ್ತದೆ. ಅಲ್ಲದೇ ಮಣ್ಣು ಮತ್ತು ನೀರು ಪರೀಕ್ಷೆ ಮಾಡಲಾಗುವುದು. ಈ ಭಾಗದಿಂದ ಹೆಚ್ಚು ಗುಣಮಟ್ಟದ ವಸ್ತುಗಳು ಬರಲಿ’ ಎಂದರು.

ಸಚಿವರಾದ ಮುರುಗೇಶ ನಿರಾಣಿ, ಬಿ.ಸಿ.ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ, ಕೆಎಂಆರ್‌ಟಿಸಿ ಪದಾಧಿಕಾರಿಗಳಾದ ಶಿವರಾಮ ಹೆಗಡೆ, ಮಲ್ಲೇಶ ಜಾಡರ್, ಜಯಪ್ರಕಾಶ ತೆಂಗಿನಕಾಯಿ, ಸಂಸ್ಥೆಯ ಅಧ್ಯಕ್ಷ ಎಂ.ಕೆ.ಪಾಟೀಲ, ಉಪಾಧ್ಯಕ್ಷ ನಿಂಗಣ್ಣ ಬಿರಾದಾರ, ನರೇಂದ್ರ ಕುಲಕರ್ಣಿ, ಮಲ್ಲೇಶ ಜಾಡರ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT