ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಂಗಾಲೇಶ್ವರ ಶ್ರೀ ವಿರುದ್ಧ ಹೋರಾಟದ ಎಚ್ಚರಿಕೆ

ವೈಯಕ್ತಿಕ ಹಿತಾಸಕ್ತಿಗಾಗಿ ಶ್ರೀಗಳಿಂದ ಲಘು ಆರೋಪ: ಉಮೇಶ ಪಾಟೀಲ
Last Updated 16 ಫೆಬ್ರುವರಿ 2021, 13:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮೂರು ಸಾವಿರ ಮಠವು ದಾನ ನೀಡಿದ ಜಾಗದಲ್ಲಿ ಕೆಎಲ್‌ಇ ಸಂಸ್ಥೆಯು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸುವ ಬದಲು, ತಾವೂ ಕೈ ಜೋಡಿಸಬೇಕು. ಇಲ್ಲದಿದ್ದರೆ ಶ್ರೀಗಳ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕೈಗಾರಿಕೆ ಹಾಗೂ ವಾಣಿಜ್ಯ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಉಮೇಶ ಪಾಟೀಲ ಹೇಳಿದರು.

‘ಮಠದ ಪೀಠದ ಮೇಲೆ ಕಣ್ಣಿಟ್ಟಿರುವ ಸ್ವಾಮೀಜಿಗೆ ಸಮುದಾಯಕ್ಕಿಂತ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯವಾಗಿದೆ. ಮಠದ ಉನ್ನತ ಸಮಿತಿಯೊಂದಿಗೆ ಬಗೆಹರಿಸಿಕೊಳ್ಳಬಹುದಾದ ವಿಷಯವನ್ನು ಬೀದಿಗೆ ತಂದಿದ್ದಾರೆ. ಸ್ವಾಮೀಜಿ ಲಘುವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ಮಾನಹಾನಿ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ನಿರ್ಮಾಣ ಮಠದ ಹಿಂದಿನ ಶ್ರೀಗಳ ಕನಸಾಗಿತ್ತು. ಅದಕ್ಕಾಗಿಯೇ, ಸಮುದಾಯದ ಸಂಸ್ಥೆಯಾದ ಕೆಎಲ್‌ಇಗೆ ಭೂಮಿ ದಾನ ಮಾಡಿದ್ದರು. ಸಂಸ್ಥೆಯು ಶ್ರೀಗಳ ಹೆಸರಿನಲ್ಲೇ ಆಸ್ಪತ್ರೆ ಮತ್ತು ಕಾಲೇಜು ನಿರ್ಮಿಸಲು ಮುಂದಾಗಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಉದ್ಯೋಗಾವಕಾಶ, ಉತ್ತಮ ಆರೋಗ್ಯ ಸೇವೆ ಹಾಗೂ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ’ ಎಂದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ರಮೇಶ ಪಾಟೀಲ ಮಾತನಾಡಿ, ‘ಕೆಎಲ್‌ಇ ಸಂಸ್ಥೆಯು ಮಠದ ಜಾಗದಲ್ಲಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ನಿರ್ಮಿಸುವುದಕ್ಕೆ ಪ್ರತಿಯಾಗಿ, ಮಠ ಹಾಗೂ ಸಮುದಾಯಕ್ಕೆ ಕೆಲ ಅನುಕೂಲಗಳನ್ನು ಮಾಡಿಕೊಡುವ ಕುರಿತು ಸಮಿತಿ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಿದೆ’ ಎಂದು ಹೇಳಿದರು.

ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿ ವಿಜಯಕುಮಾರ ಪಾಟೀಲ, ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಎಲಿಗಾರ, ಸದಸ್ಯರಾದ ಶಂಕರ ಕೋಳಿವಾಡ ಹಾಗೂ ಗಿರೀಶ ನಲವಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT