ಭಗ್ನ ಪ್ರೇಮಿಯಿಂದ ಮುಂದುವರಿದ ಕಿರಿಕಿರಿ

ಶನಿವಾರ, ಏಪ್ರಿಲ್ 20, 2019
31 °C
ಹುಬ್ಬಳ್ಳಿ ವಿಮಾನ ನಿಲ್ದಾಣದ ಎಟಿಎಸ್‌ ನಂಬರ್‌ಗೆ ತಪ್ಪದ ಫೋನ್‌ ಕರೆ

ಭಗ್ನ ಪ್ರೇಮಿಯಿಂದ ಮುಂದುವರಿದ ಕಿರಿಕಿರಿ

Published:
Updated:

ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣದ ಎಟಿಎಸ್‌ ದೂರವಾಣಿ ನಂಬರ್‌ಗೆ ಪದೇ ಪದೇ ಕರೆ ಮಾಡಿ ಅಧಿಕಾರಿ ಮತ್ತು ಸಿಬ್ಬಂದಿಯ ತಲೆ ತಿನ್ನುತ್ತಿದ್ದ ಭಗ್ನ ಪ್ರೇಮಿಯೊಬ್ಬ, ಸ್ವಲ್ಪ ದಿನಗಳ ಬಳಿಕ ಇದೀಗ ಮತ್ತೆ ಕರೆ ಮಾಡಿ ಕಿರಿಕಿರಿ ಮುಂದುವರಿಸಿದ್ದಾನೆ.

‘ಆತನ ಕಿರಿಕಿರಿಯಿಂದ ಪಾರಾಗಲು ಮೂರ್ನಾಲ್ಕು ತಿಂಗಳ ಹಿಂದೆ ವಿಮಾನ ನಿಲ್ದಾಣದ ಎಟಿಎಸ್‌ ನಂಬರನ್ನೇ ಬದಲಾಯಿಸಲಾಗಿತ್ತು. ಹೀಗಾಗಿ, ಆತ ಕರೆ ಮಾಡುವುದು ನಿಂತಿತ್ತು. ಸ್ವಲ್ಪ ದಿನಗಳ ಕಾಲ ನಿಲ್ದಾಣದ ಅಧಿಕಾರಿ ಮತ್ತು ಸಿಬ್ಬಂದಿ ನಿರಾಳವಾಗಿದ್ದರು. ಆದರೆ, ಇದೀಗ ಹೊಸ ಎಟಿಎಸ್‌ ನಂಬರಿಗೂ ಕರೆ ಮಾಡತೊಗಿದ್ದಾನೆ’ ಎಂದು ವಿಮಾನ ನಿಲ್ದಾಣದ ಹೆಸರು ಹೇಳಲು ಬಯಸದ ಸಿಬ್ಬಂದಿ ತಿಳಿಸಿದರು.

‘ಗೋವಾ ಮೂಲದ, ಸದ್ಯ ಕುವೈತ್‌ನಲ್ಲಿ ನೆಲೆಸಿರುವ ರಾಯ್‌ ಡಯಾಸ್‌ ಎಂಬಾತ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತನ್ನ ಮಾಜಿ ಪ್ರೇಯಸಿ ಜೊತೆ ಮಾತನಾಡಬೇಕು ಎಂದು ಆಗಾಗ ವಿಮಾನ ನಿಲ್ದಾಣದ ದೂರವಾಣಿ ಸಂಖ್ಯೆಗೆ ಕರೆ ಮಾಡುತ್ತಾನೆ. ಈ ಸಂದರ್ಭದಲ್ಲಿ ಮಾತನಾಡಲು ಅವಕಾಶ ನೀಡದಿದ್ದರೇ ವಿಮಾನ ನಿಲ್ದಾಣಕ್ಕೆ ತೊಂದರೆ ಉಂಟು ಮಾಡುವುದಾಗಿ ಬೆದರಿಸುತ್ತಾನೆ’ ಎಂದು ಆರೋಪಿಸಿ ಈ ಹಿಂದಿನ ನಿರ್ದೇಶಕರು ಗೋಕುಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

‘ವಿಮಾನಗಳ ಹಾರಾಟ ಇರುವಾಗ ಹಾಗೂ ಗಣ್ಯರು ನಗರಕ್ಕೆ ಭೇಟಿ ನೀಡುವ ದಿನಗಳಲ್ಲೇ ಆತ ಇಂಟರ್‌ನೆಟ್‌ ಮೂಲಕ ನಿರಂತರ ಕರೆ ಮಾಡಿ ಕಿರಿಕಿರಿ ಉಂಟು ಮಾಡುತ್ತಿರುವುದರಿಂದ ಕಾರ್ಯ ನಿರ್ವಹಣೆಗೆ ತೀವ್ರ ತೊಂದರೆಯಾಗುತ್ತಿದ್ದು, ಆತನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ದೂರು ನೀಡಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗೋಕುಲ ಠಾಣೆ ಸಬ್‌ ಇನ್‌ಸ್ಪೆಕ್ಟರ್‌, ಭಗ್ನ ಪ್ರೇಮಿ ಈ ಮೊದಲು ಕರೆ ಮಾಡುತ್ತಿರುವ ಬಗ್ಗೆ ದೂರು ಬಂದಿತ್ತು. ಈ ಸಂಬಂಧ ಗೋವಾಕ್ಕೆ ತೆರಳಿ ಆತನ ಕುಟುಂಬದೊಂದಿಗೆ ಮಾತನಾಡಿದ್ದೇವೆ. ಆತ ಕುವೈತ್‌ನಲ್ಲಿ ನೆಲೆಸಿರುವುದರಿಂದ ಏನು ಮಾಡಲು ಸಾಧ್ಯವಾಗಿಲ್ಲ. ಆತ ಗೋವಾಕ್ಕೆ ಬಂದಾಗ ವಶಕ್ಕೆ ಪಡೆಯಲಾಗುವುದು. ಸದ್ಯ ನಿಲ್ದಾಣಕ್ಕೆ ಆತನಿಂದ ಕರೆ ಬರುತ್ತಿರುವ ಬಗ್ಗೆ ಗಮನಕ್ಕೆ ಬಂದಿಲ್ಲ’ ಎಂದರು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವಿಮಾನ ನಿಲ್ದಾಣದ ನೂತನ ನಿರ್ದೇಶಕ ಪ್ರಮೋದ ಠಾಕರೆ, ‘ನಾನು ಇತ್ತೀಚೆಗೆ ಬಂದಿದ್ದೇನೆ. ಈ ಬಗ್ಗೆ ಮಾಹಿತಿ ಇಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !