ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಪೂರ್ತಿ ಸ್ತಬ್ಧ; ಸಂಜೆಗೆ ಶಬ್ದ!

ಜನತಾ ಕರ್ಫ್ಯೂಗೆ ವಾಣಿಜ್ಯ ನಗರಿಯಲ್ಲಿ ಐತಿಹಾಸಿಕ ಬೆಂಬಲ
Last Updated 24 ಮಾರ್ಚ್ 2020, 10:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಯಾನಕ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಭಾನುವಾರ ವಾಣಿಜ್ಯ ನಗರದ ಜನ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.

ಇದುವರೆಗೆ ಹತ್ತು, ಹಲವು ಬಂದ್‌, ಕರ್ಫ್ಯೂಗಳಿಗೆ ಸಾಕ್ಷಿಯಾಗಿದ್ದ ಹುಬ್ಬಳ್ಳಿ ನಗರ ಪ್ರಥಮ ಬಾರಿಗೆ ಸಂಪೂರ್ಣ ಸ್ವಯಂ ಪ್ರೇರಿತವಾಗಿ ನಿಶಬ್ಧವಾಗುವ ಮೂಲಕ ಹಿಂದೆಂದೂ ಕಂಡು, ಕೇಳರಿಯದ ಜನತಾ ಕರ್ಫ್ಯೂಗೆ ಸಾಕ್ಷಿಯಾಯಿತು.

ಸದಾ ಸದ್ದು–ಗದ್ದಲ, ವಾಹನಗಳ ದಟ್ಟಣೆಯಿಂದ ತುಂಬಿರುತ್ತಿದ್ದ ನಗರ ಬೆಳಿಗ್ಗೆಯಿಂದಲೇ ಮೌನಕ್ಕೆ ಶರಣಾಗಿತ್ತು. ದುರ್ಗದ ಬೈಲ್‌, ಜನತಾ ಬಜಾರ್‌, ಚನ್ನಮ್ಮ ವೃತ್ತ, ಹಳೇ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಗೋಕುಲ ರಸ್ತೆ, ವಿದ್ಯಾನಗರ, ಶಿರೂರು ಪಾರ್ಕ್‌, ಉಣಕಲ್‌, ಕೇಶ್ವಾಪುರ ವ್ಯಾಪ್ತಿಯಲ್ಲಿ ನೀರವ ಮೌನ ಆವರಿಸಿತ್ತು. ಜನ, ವಾಹನಗಳ ಸಂಚಾರವಿಲ್ಲದೆ ನಗರದ ಎಲ್ಲ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು.

ಹಾಲು, ದಿನಪತ್ರಿಕೆ ಹಾಕುವವರು ಬೆಳಿಗ್ಗೆ 6 ಗಂಟೆ ಒಳಗಾಗಿ ಮನೆ, ಮನೆಗೆ ತಲುಪಿಸಿದ್ದರು. ಪೌರಕಾರ್ಮಿಕರು ಎಂದಿನಂತೆ ಕಾರ್ಯನಿರ್ವಹಿಸಿದರು. ಆಟೋ ಟಿಪ್ಪರ್‌ಗಳ ಮೂಲಕ ಪೌರಕಾರ್ಮಿಕರು ಮನೆ, ಮನೆಗೆ ತೆರಳಿ ಕಸ ಸಂಗ್ರಹಿಸಿದರು. ಆದರೆ, ಪೌರಕಾರ್ಮಿಕರು ಮಾಸ್ಕ್‌, ಕೈಗವಸು ಸೇರಿದಂತೆ ಸುರಕ್ಷಾ ಸಾಧನಗಳನ್ನು ಬಳಸದೇ ಇರುವುದು ಕಂಡುಬಂದಿತು.

ವಾಣಿಜ್ಯ ಮಳಿಗೆಗಳು, ಅಂಗಡಿ–ಮುಂಗಟ್ಟುಗಳು, ಹೋಟೆಲ್‌, ರೆಸ್ಟೋರೆಂಟ್‌, ತರಕಾರಿ ಮಾರುಕಟ್ಟೆಗಳು ಬಂದ್‌ ಆಗಿದ್ದವು. ಭಾನುವಾರದ ರಜೆ ಇದ್ದ ಕಾರಣ ಸರ್ಕಾರಿ ಕಚೇರಿಗಳು, ಖಾಸಗಿ ಕಂಪನಿಗಳ ಕಚೇರಿಗಳು ಬಂದ್‌ ಆಗಿದ್ದವು. ಕರ್ನಾಟಕ ವಾಣಿಜ್ಯೋದ್ಯಮ ಮಂಡಳಿ, ಆಟೊ ಚಾಲಕರ ಸಂಘ, ಸಾರಿಗೆ ಸಂಸ್ಥೆ, ಜವಳಿ ವ್ಯಾಪಾರಸ್ಥರು, ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ಹಲವು ಸಂಘ, ಸಂಸ್ಥೆಗಳು ಜನತಾ ಕರ್ಫ್ಯೂಗೆ ಕೈ ಜೋಡಿಸಿದ್ದವು.

ಜನರು ಮನೆಯಿಂದ ಹೊರಗೆ ಬಾರದೆ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದರು. ತುರ್ತು ಅಗತ್ಯವಿದ್ದವರು ಸಹ ಹೊರಗೆ ಬಾರದೆ, ಜವಾಬ್ದಾರಿ ಪ್ರದರ್ಶಿಸಿದರು. ಹಗಲಿಡಿ ಟಿವಿ ನೋಡುತ್ತಾ ಕಾಲ ಕಳೆದರು. ಪಾಲಕರು ತಮ್ಮ ಮಕ್ಕಳನ್ನು ಹೊರಗಡೆ ಹೋಗದಂತೆ ಎಚ್ಚರ ವಹಿಸಿದ್ದರು.

ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸಬೇಕಿದ್ದ ಐದು ವಿಮಾನಗಳ ಹಾರಾಟವನ್ನು ರದ್ದು ಪಡಿಸಲಾಗಿತ್ತು.

ಶನಿವಾರ ಹೊರಟಿದ್ದ ಐದಾರು ಎಕ್ಸ್‌ಪ್ರೆಸ್‌ ರೈಲುಗಳು ಮಾತ್ರ ನಗರದ ರೈಲು ನಿಲ್ದಾಣಕ್ಕೆ ಬಂದಿದ್ದವು. ಉಳಿದಂತೆ ರೈಲು ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಅದರಿಂದ, ರೈಲು ನಿಲ್ದಾಣ ಪ್ರಯಾಣಿಕರಿಲ್ಲದೆ ಸ್ತಬ್ಧವಾಗಿತ್ತು. ನಿಲ್ದಾಣದಲ್ಲಿದ್ದ ಕೆಲವು ಪ್ರಯಾಣಿಕರನ್ನು ಹೊರಗೆ ಕಳುಹಿಸಿ, ಪ್ರವೇಶ ದ್ವಾರವನ್ನು ಬ್ಯಾರಿಕೇಡ್‌ ಮೂಲಕ ಬಂದ್‌ ಮಾಡಲಾಗಿತ್ತು. ಯಾರನ್ನೂ ಒಳಗೆ ಬಿಡದಂತೆ ಆರ್‌ಪಿಎಫ್‌ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು.

ಜನ ಸಂಚಾರವಿಲ್ಲದ ಕಾರಣ ನಗರದ ಬಹುತೇಕ ಔಷಧ ಅಂಗಡಿಗಳು ಮತ್ತು ಎಟಿಎಂಗಳು ಬಾಗಿಲು ಮುಚ್ಚಿದ್ದವು. ಚನ್ನಮ್ಮ ವೃತ್ತ, ಕೇಶ್ವಾಪುರ ರಸ್ತೆಯಲ್ಲಿರುವ ಕೆಲವು ಔಷಧ ಅಂಗಡಿಗಳು ಮಧ್ಯಾಹ್ನದವರೆಗೆ ತೆರದಿದ್ದು, ಸಂಜೆಯಾಗುತ್ತಿದ್ದಂತೆ ಬಾಗಿಲು ಮುಚ್ಚಿದ್ದವು.

ರಸ್ತೆಯಲ್ಲಿ ವಾಹನ ಸಂಚಾರವಿಲ್ಲದ ಕಾರಣ ಕೇಶ್ವಾಪುರ, ದೇಶಪಾಂಡೆ ನಗರ, ಮಂಜುನಾಥ ನಗರ, ಮಂಟೂರ ರಸ್ತೆಗಳಲ್ಲಿ ಮಕ್ಕಳು, ಕ್ರಿಕೆಟ್‌, ಬ್ಯಾಡ್ಮಿಂಟನ್‌, ವಾಲಿಬಾಲ್‌ ಆಡಿ ಸಂಭ್ರಮಿಸಿದರು.

ರೈಲು ನಿಲ್ದಾಣ ಹಾಗೂ ಹಳೇ ಬಸ್‌ ನಿಲ್ದಾಣಗಳಲ್ಲಿ, ದೂರದ ಊರುಗಳಿಂದ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಆರು ನಗರ ಸಾರಿಗೆ ಬಸ್‌ಗಳನ್ನು ನಿಲ್ಲಿಸಲಾಗಿತ್ತು.

ಗ್ರಾಮೀಣ ಪ್ರದೇಶದಿಂದ ಪ್ರತಿದಿನ ಕೂಲಿ ಅರಸಿ ನಗರದ ರೈಲು ನಿಲ್ದಾಣದ ಬಳಿ ಸೇರುತ್ತಿದ್ದ ಸಾವಿರಾರು ಕೂಲಿಕಾರ್ಮಿಕರು ಸಹ ಭಾನುವಾರ ಕಂಡುಬರಲಿಲ್ಲ.

ಹೆದ್ದಾರಿಗಳು ಭಣಭಣ:

ನಗರದ ಮೂಲಕ ಹಾದುಹೋಗುವ ಬೆಂಗಳೂರು–ಪುಣೆ, ಹುಬ್ಬಳ್ಳಿ–ವಿಜಯಪುರ, ಹುಬ್ಬಳ್ಳಿ–ಕಾರವಾರ, ಹುಬ್ಬಳ್ಳಿ– ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಗಳಲ್ಲೂ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.

ಚನ್ನಮ್ಮ ವೃತ್ತದಲ್ಲಿ ಮದ್ಯಪಾನ:

ಚನ್ನಮ್ಮ ವೃತ್ತದಲ್ಲಿ ಮಧ್ಯಾಹ್ನದ ವೇಳೆ ಮದ್ಯಪಾನ ಮಾಡಿದ ಕೆಲವು ಕಿಡಿಗೇಡಿ ಯುವಕರು ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡು ಬಂತು. ಚನ್ನಮ್ಮ ಮೂರ್ತಿಯ ಕೆಳಗೆ ಕುಳಿತು, ಅವಾಚ್ಯ ಶಬ್ಧಗಳಿಂದ ಬೈದಾಡುತ್ತ ಕೂಗಾಡುತ್ತಿದ್ದರು. ಕೆಲವರು ಅಲ್ಲಿಯೇ ಸೆಲ್ಫಿ ತೆಗೆದುಕೊಂಡು ಮಸ್ತಿ ಮಾಡಿದರು. ಬೈಕ್‌ ಮೇಲೆ ಕಿರುಚಾಡುತ್ತ ನಗರ ಪ್ರದಕ್ಷಿಣೆ ಹಾಕಿದರು.

ಯುವಕರ ಮಾನವೀಯತೆ:

ರೈಲ್ವೆ ನಿಲ್ದಾಣದ ಎದುರಿನ ಕೆಳಭಾಗದ ಪಾರ್ಕಿಂಗ್‌ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಪ್ರಯಾಣಿಕರು ಕುಡಿಯುವ ನೀರು ಮತ್ತು ಊಟಕ್ಕೆ ಪರದಾಡುತ್ತಿದ್ದರು. ಇದನ್ನು ತಿಳಿದ ನಗರದ ಯುವಕರು ಅವರಿಗೆ ಪಲಾವ್‌ ಮತ್ತು ನೀರಿನ ವ್ಯವಸ್ಥೆ ಮಾಡಿದರು.

ಹಳೇ ಬಸ್‌ ನಿಲ್ದಾಣದಲ್ಲಿಯೂ ಊಟ, ಉಪಹಾರ ಸಿಗದೆ ಪರದಾಡುತ್ತಿದ್ದವರಿಗೆ ಸಾರಿಗೆ ಸಿಬ್ಬಂದಿ ಹುಸೇನ್‌ ನದಾಫ್‌ ಪಲಾವ್‌ ನೀಡಿ ಮಾನವೀಯತೆ ಮೆರೆದರು.

ಚಪ್ಪಾಳೆ ತಟ್ಟಿ ಗೌರವ ಸಮರ್ಪಣೆ:

ಜನತಾ ಕರ್ಫ್ಯೂ ನಡುವೆ ಕೊರೊನಾ ಸೋಂಕು ತಡೆಗೆ ಶ್ರಮಿಸುತ್ತಿರುವ ವೈದ್ಯರು, ಪೊಲೀಸರು ಹಾಗೂ ಸುದ್ದಿ ಮಾಧ್ಯಮದವರಿಗೆ ಸಾರ್ವಜನಿಕರು ಸಂಜೆ 5ಕ್ಕೆ ತಮ್ಮ ಮನೆಗಳ ಎದುರು ಜಾಗಟೆ ಬಾರಿಸಿ, ಶಂಖ ಊದಿ ಗೌರವ ಸಮರ್ಪಿಸಿದರು. ಅಪಾರ್ಟ್‌ಮೆಂಟ್‌ಗಳಲ್ಲಿ, ಮನೆಗಳಲ್ಲಿ ಅಬಾಲ ವೃದ್ಧರಾದಿಯಾಗಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಹೊಸೂರು ಬಸ್‌ ನಿಲ್ದಾಣದಲ್ಲಿ ಸಾರಿಗೆ ಸಿಬ್ಬಂದಿ ಸಹ 10 ನಿಮಿಷ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದರು.

ಉಲ್ಲಂಘನೆ:

ಹೆಚ್ಚಿನ ಜನರು ಒಂದೆಡೆ ಸೇರದಂತೆ ತಡೆಯಲು ನಿರ್ಬಂಧ ವಿಧಿಸಲಾಗಿದ್ದರೂ ಸಹ, ವೈದ್ಯರು, ಪೊಲೀಸರಿಗೆ ಕೃತಜ್ಞತೆ ಸಲ್ಲಿಸುವ ನೆಪದಲ್ಲಿ ಹತ್ತಾರು ಜನರು ಒಂದೆಡೆ ಗುಂಪುಗೂಡಿ, ಡೋಲು ಬಾರಿಸುವುದು, ಪೀಪಿ ಊದುವುದು, ಚಪ್ಪಾಳೆ ತಟ್ಟುವ ಮೂಲಕ ಜನತಾ ಕರ್ಫ್ಯೂ ಉದ್ದೇಶವನ್ನೇ ಮರೆತಂತೆ ಕಂಡುಬಂದಿತು.

ಕಿಮ್ಸ್‌ ಆವರಣ ಭಣಭಣ:

ಹುಬ್ಬಳ್ಳಿ: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಭಾನುವಾರ ನಗರದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಹೊರ ರೋಗಿ ವಿಭಾಗ ಸಂಪೂರ್ಣ ಬಂದ್‌ ಆಗಿದ್ದವು. ಆದರೆ, ಒಳ ರೋಗಿ ವಿಭಾಗಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದವು.

ಪ್ರತಿನಿತ್ಯ ಕಿಮ್ಸ್‌ನ ಹೊರರೋಗಿ ವಿಭಾಗದಲ್ಲಿ 1,500ಕ್ಕಿಂತಲೂ ಹೆಚ್ಚು ಮಂದಿ ನೋಂದಣಿ ಮಾಡಿಕೊಳ್ಳುತ್ತಿದ್ದರು. ಆದರೆ, ಭಾನುವಾರ ಅಲ್ಲಿಯೂ ಸಂಪೂರ್ಣ ಬಂದ್‌ ಆಗಿದ್ದರಿಂದ ಯಾರೊಬ್ಬರೂ ಅತ್ತ ಸುಳಿದಿರಲಿಲ್ಲ. ಅಲ್ಲದೆ, ಜನ ಜಂಗುಳಿಯಿಂದ ಕೂಡಿರುತ್ತಿದ್ದ ಕಿಮ್ಸ್‌ ಆವರಣ ಮೌನಕ್ಕೆ ಜಾರಿತ್ತು.

ಪಾಲಿಕೆಯಿಂದ ಔಷಧ ಸಿಂಪಡಣೆ:

ಹುಬ್ಬಳ್ಳಿ ನಗರದ ಸಿಬಿಟಿ, ಮೀನು ಮಾರುಕಟ್ಟೆ, ಹಳೇ ಬಸ್‌ ನಿಲ್ದಾಣ, ಹೊಸ ಬಸ್‌ ನಿಲ್ದಾಣ, ಎಂ.ಜಿ.ಮಾರುಕಟ್ಟೆ, ಜನತಾ ಬಜಾರ್‌ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ಸೋಂಕು ನಿರೋಧಕ (ಸೋಡಿಯಂ ಹೈಪೋಕ್ಲೊರೈಡ್‌)ರಾಸಾಯನಿಕವನ್ನು ಸಿಂಪಡಿಸಿದರು.

‘ನಗರದ ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ಔಷಧ ಸಿಂಪಡಿಸಲಾಗುವುದು’ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT