ಸೋಮವಾರ, ಜೂನ್ 21, 2021
21 °C
ಇಬ್ಬರೇ ಸದಸ್ಯರು, ಸ್ಮಿತಾ ಜವಳಿ, ಅಕ್ಕವ್ವ ಬಾಂಗಡಿ ಆಯ್ಕೆ ನಿಶ್ಚಿತ

ಧಾರವಾಡ: ಅಳ್ನಾವರ ನೂತನ ತಾಲ್ಲೂಕು ಪಂಚಾಯ್ತಿ ಅಸ್ವಿತ್ವಕ್ಕೆ

ರಾಜಶೇಖರ ಸುಣಗಾರ Updated:

ಅಕ್ಷರ ಗಾತ್ರ : | |

Prajavani

ಅಳ್ನಾವರ: ಸ್ಥಳೀಯ ಜನರ ಬಹುವರ್ಷಗಳ ಬೇಡಿಕೆಯಾದ ನೂತನ ತಾಲ್ಲೂಕಿನ ತಾಲ್ಲೂಕು ಪಂಚಾಯ್ತಿ ಸೋಮವಾರ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಆ. 19ರಂದು ಚುನಾವಣೆ ಜರುಗಲಿದೆ.

ಅಧ್ಯಕ್ಷ ಸ್ಥಾನ ಅನುಸೂಚಿತ ಮಹಿಳೆಗೆ ಮೀಸಲಾಗಿದ್ದು, ಈ ಸ್ಥಾನಕ್ಕೆ ಬಾರಕೊಪ್ಪ ಕ್ಷೇತ್ರದ ಜೆಡಿಎಸ್‌ನ ಸ್ಮಿತಾ ಜವಳಿ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಹೊನ್ನಾಪೂರ ಕ್ಷೇತ್ರದ ಕಾಂಗ್ರೆಸ್‌ನ ಅಕ್ಕವ್ವ ಮಾರುತಿ ಬಾಂಗಡಿ ಅವಿರೋಧವಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ.

ಕೇವಲ ಇಬ್ಬರು ಸದಸ್ಯರ ಬಲಾಬಲ ಹೊಂದಿರುವ ಅಳ್ನಾವರ ತಾಲ್ಲೂಕು ಪಂಚಾಯ್ತಿ ಅತಿ ಕಡಿಮೆ ಸದಸ್ಯರನ್ನು ಹೊಂದಿರುವ ಚಿಕ್ಕ ತಾಲ್ಲೂಕು ಎನ್ನುವ ವಿಶೇಷತೆ ಹೊಂದಿದೆ. ನಾಲ್ಕು ಪಂಚಾಯ್ತಿ ಹಾಗೂ 13 ಗ್ರಾಮಗಳನ್ನು ಒಳಗೊಂಡ ತಾಲ್ಲೂಕು ಇದಾಗಿದೆ.  

ಧಾರವಾಡ ತಾಲ್ಲೂಕು ಪಂಚಾಯ್ತಿಗೆ 2016ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಕುಂಬಾರಕೊಪ್ಪ ಹಾಗೂ ಹೊನ್ನಾಪೂರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಧಾರವಾಡ ತಾಲ್ಲೂಕು ಪಂಚಾಯ್ತಿಯಿಂದ ಬೇರ್ಪಡಿಸಿ ನೂತನ ಅಳ್ನಾವರ ತಾಲ್ಲೂಕು ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿತ್ತು ಎಂದು ಧಾರವಾಡ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಎಸ್.ಎಸ್. ಕಾದ್ರೊಳ್ಳಿ ಪ್ರಜಾವಾಣಿಗೆ ತಿಳಿಸಿದರು. ಮಾರ್ಚ್‌ನಲ್ಲಿ ತಾಲ್ಲೂಕು ಪಂಚಾಯ್ತಿಗಳಿಗೆ ನಡೆಯುವ ಚುನಾವಣೆಯಲ್ಲಿ ಅಳ್ನಾವರಕ್ಕೆ ಕನಿಷ್ಠ ಐದು ಸ್ಥಾನಗಳಾದರೂ ಸಿಗುವ ನಿರೀಕ್ಷೆಯಿದೆ ಎಂದರು.

ರಾಜ್ಯ ಸರ್ಕಾರ 2017ರಲ್ಲಿ ಅಳ್ನಾವರವನ್ನು ಹೊಸ ತಾಲ್ಲೂಕು ಎಂದು ಘೋಷಿಸಿತ್ತು. 2018ರ ಫೆಬ್ರುವರಿಯಲ್ಲಿ ತಹಶೀಲ್ದಾರ್‌ ಕಚೇರಿ ಆರಂಭವಾಗಿತ್ತು.  ಜಿಲ್ಲೆಯ ಹಿರಿಯ ಅಧಿಕಾರಿಗಳು ಕಳೆದ ಎರಡು ತಿಂಗಳಿಂದ ಪಟ್ಟಣಕ್ಕೆ ನಿರಂತರವಾಗಿ ಭೇಟಿ ನೀಡಿ ತಾಲ್ಲೂಕು ಪಂಚಾಯ್ತಿ ಕಚೇರಿಗೆ ಬೇಕಾದ ಕಟ್ಟಡವನ್ನು ಪರಿಶೀಲನೆ ಮಾಡಿದ್ದು, ಇಲ್ಲಿನ ಎಪಿಎಂಸಿ ಆವರಣದಲ್ಲಿ ಹೊಸ ಕಚೇರಿ ಆರಂಭವಾಗುವ ಸಾಧ್ಯತೆಯಿದೆ.

ಅಳ್ನಾವರ ತಾಲ್ಲೂಕು ರಚನೆಗಾಗಿ ನಾಲ್ಕು ದಶಕಗಳಿಂದ ಹೋರಾಟ ನಡೆದಿತ್ತು. ಹೋರಾಟ ಸಮಿತಿಯ ಅಧ್ಯಕ್ಷರಾಗಿದ್ದ ದಿವಂಗತ ಮುಜಾಹಿದ್ ಕಂಟ್ರ್ಯಾಕ್ಟರ್ ಅವರು ಕಂಡ ಹೊಸ ತಾಲ್ಲೂಕು ಪಂಚಾಯ್ತಿಯ ಆಸೆ ಈಗ ನನಸಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.