ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ನೇತ್ರದಾನಕ್ಕೆ ರಾಯಭಾರಿಯಾಗಿ

ಪುನರ್ಜ್ಯೋತಿ ನೇತ್ರದಾನ ಸಂಘ ಅಸ್ತಿತ್ವಕ್ಕೆ: ಕೃಷ್ಣಪ್ರಸಾದ ಹೇಳಿಕೆ
Last Updated 25 ಆಗಸ್ಟ್ 2019, 11:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಾರ್ನಿಯಾ ಮಾರುಕಟ್ಟೆಯಲ್ಲಿ ಸಿಗುವ ಸರಕಲ್ಲ; ಕೃತಕವಾಗಿ ಸೃಷ್ಟಿಸಲು ಕೂಡ ಸಾಧ್ಯವಾಗುವುದಿಲ್ಲ. ವ್ಯಕ್ತಿಯಿಂದ ತೆಗೆದುಕೊಂಡು ಇನ್ನೊಬ್ಬರಿಗೆ ಅಳವಡಿಸಬಹುದು. ಆದ್ದರಿಂದ ಸ್ವಯಂ ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಹಿರಿಯ ವೈದ್ಯ ಆರ್‌. ಕೃಷ್ಣಪ್ರಸಾದ ಹೇಳಿದರು.

ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಹಾಗೂ ಕಿಮ್ಸ್‌ ಸಹಯೋಗದಲ್ಲಿ ಶನಿವಾರ ಕಾರ್ನಿಯಾ ಅಂಧತ್ವ ನಿವಾರಣೆ ಹಾಗೂ ನೇತ್ರದಾನದ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಆರಂಭವಾದ ಪುನರ್ಜ್ಯೋತಿ ಹುಬ್ಬಳ್ಳಿ–ಧಾರವಾಡ ನೇತ್ರದಾನ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ವ್ಯಕ್ತಿ ಮರಣದ ಬಳಿಕ ಕಣ್ಣುಗಳನ್ನುತೆಗೆದುಕೊಳ್ಳಲು ಐದಾರು ನಿಮಿಷವಷ್ಟೇ ಸಾಕು. ನೇತ್ರದಾನದ ಬಗ್ಗೆ ಮಾಹಿತಿ ನೀಡಿದರೆ ಆಸ್ಪತ್ರೆಯವರೇ ಬಂದು ದಾನ ಪಡೆಯುತ್ತಾರೆ. ನೇತ್ರದಾನ ಮಾಡುತ್ತೇವೆ ಎಂದು ಶಪಥ ಮಾಡುವುದರ ಜೊತೆಗೆ, ಈ ದಾನದ ಮಹತ್ವದ ಅರಿವು ಮೂಡಿಸಬೇಕು. ಪ್ರತಿಯೊಬ್ಬರೂ ರಾಯಭಾರಿಗಳಾಗಿ ಕೆಲಸ ಮಾಡಬೇಕು. ಅಂಧರ ಬಾಳಿಗೆ ಬೆಳಕಾಗಬೇಕು’ ಎಂದು ಮನವಿ ಮಾಡಿದರು.

ಸಚಿವ ಜಗದೀಶ ಶೆಟ್ಟರ್‌ ‘ನೇತ್ರ ಹಾಗೂ ರಕ್ತ ಎರಡನ್ನೂ ಕೃತಕವಾಗಿ ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಎರಡೂ ದಾನಗಳಿಗೆ ಸಾಕಷ್ಟು ಮಹತ್ವವಿದೆ. ನೇತ್ರದಾನ ಮಾಡುವುದಷ್ಟೇ ಮುಖ್ಯವಲ್ಲ. ಇದರ ಬಗ್ಗೆ ನಮ್ಮ ಕುಟುಂಬದವರಿಗೆ ಮಾಹಿತಿ ನೀಡಬೇಕು’ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ‘ಜಗತ್ತಿನಲ್ಲಿರುವ 40 ಕೋಟಿ ಅಂಧರ ಪೈಕಿ ಭಾರತದಲ್ಲಿಯೇ 15 ಕೋಟಿ ಜನ ಇದ್ದಾರೆ. ಪ್ರತಿ ವರ್ಷ 2.5 ಲಕ್ಷ ಜನ ವಿವಿಧ ಕಾರಣಗಳಿಗಾಗಿ ಅಂಧರಾಗುತ್ತಿದ್ದಾರೆ. ಆದ್ದರಿಂದ, ನಾವು ಸತ್ತರೂ ನಮ್ಮ ಕಣ್ಣುಗಳು ಇನ್ನೊಬ್ಬರ ಮೂಲಕ ಜಗತ್ತು ನೋಡುತ್ತಿರುತ್ತವೆ. ಆದ್ದರಿಂದ ನೇತ್ರದಾನಕ್ಕೆ ಪ್ರೇರಣೆ ನೀಡಬೇಕು’ ಎಂದರು.

ಕಿಮ್ಸ್‌ ಸಿಬ್ಬಂದಿಯಿಂದ ಸಂಗ್ರಹಿಸಿದ ಒಂದು ದಿನದ ವೇತನದ ಒಟ್ಟು ₹ 19.40 ಲಕ್ಷ ಹಣದ ಚೆಕ್‌ ಅನ್ನು ಶೆಟ್ಟರ್‌ ಮೂಲಕ ಮುಖ್ಯಮಂತ್ರಿಗಳ ನೆರೆ ಪರಿಹಾರ ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ನೀಡಿದರು.

ಪುನರ್ಜ್ಯೋತಿ ನೇತ್ರದಾನ ಸಂಘದ ಅಧ್ಯಕ್ಷ ಕೆ. ರಮೇಶ ಬಾಬು, ಉಪಾಧ್ಯಕ್ಷ ಜಿತೇಂದ್ರ ಮಜೇಥಿಯಾ, ಕಾರ್ಯದರ್ಶಿ ಸುಭಾಸ ಸಿಂಗ್‌ ಜಮಾದಾರ, ಕಿಮ್ಸ್‌ನ ಇಎನ್‌ಟಿ ವಿಭಾಗದ ಪ್ರಾಧ್ಯಾಪಕಿ ಡಾ. ಸವಿತಾ, ನೇತ್ರ ವೈದ್ಯ ಶ್ರೀನಿವಾಸ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT