ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರ್ತಿ ತೆಗೆದು ಹಾಕಿದ್ದಕ್ಕೆ ಆಕ್ರೋಶ, ಸ್ಥಳದಲ್ಲಿ ಪೊಲೀಸರ ಮೊಕ್ಕಾಂ

ಅಂಬೇಡ್ಕರ್‌ ಮೂರ್ತಿ ತೆರವು; ಬಿಗುವಿನ ವಾತಾವರಣ
Last Updated 6 ಫೆಬ್ರುವರಿ 2022, 14:07 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಹಳೇ ಹುಬ್ಬಳ್ಳಿಯ ಸಿದ್ದಾರ್ಥ ಕಾಲೊನಿ ಸಮೀಪದ ಮೇದಾರ ಓಣಿಯ ಖಾಲಿ ಜಾಗದಲ್ಲಿ ಅಂಬೇಡ್ಕರ್‌ ಮೂರ್ತಿ ಹಾಗೂ ಕಟ್ಟೆಯನ್ನು ತೆರವು ಮಾಡಿದ್ದರಿಂದ ಭಾನುವಾರ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಖಾಲಿ ಜಾಗದಲ್ಲಿ ಶನಿವಾರ ರಾತ್ರಿ ಕೆಲವರು ಕಟ್ಟೆ ಕಟ್ಟಿ ಅಂಬೇಡ್ಕರ್‌ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದರು. ಇದನ್ನು ಅದೇ ಓಣಿಯ ಕೆಲವರು ಭಾನುವಾರ ಬೆಳಿಗ್ಗೆ ಒಡೆದುಹಾಕಿ ಮೂರ್ತಿಯನ್ನು ತೆರವು ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ.

ಕಟ್ಟೆ ಒಡೆದು, ಅಂಬೇಡ್ಕರ್‌ ಮೂರ್ತಿ ತೆರವು ಮಾಡಿದ ವಿಷಯ ಗೊತ್ತಾಗುತ್ತಿದ್ದಂತೆ ವಿವಿಧ ಪರಿಶಿಷ್ಟ ಸಂಘಟನೆಗಳ ಮುಖಂಡರು ಸ್ಥಳಕ್ಕೆ ಬಂದು ಮೂರ್ತಿ ಒಡೆದು ಹಾಕಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದ ಕಾರಣ ಸ್ಥಳಕ್ಕೆ ಬಂದ ಪೊಲೀಸರು ಸೇರಿದ್ದ ಜನರನ್ನು ಚದುರಿಸಿದರು.

ಮೇದಾರ ಓಣಿಯ ಹಲವರು ‘ಖಾಲಿ ಜಾಗ ನಮ್ಮ ಹೆಸರಿನಲ್ಲಿದೆ’ ಎಂದು ಹೇಳಿದರೆ, ಇನ್ನೂ ಕೆಲವರು ‘ಜಾಗದ ದಾಖಲೆ ನಮ್ಮ ಹೆಸರಿನಲ್ಲಿವೆ’ ಎಂದರು. ಹೀಗಾಗಿ ಕೆಲಹೊತ್ತು ಜಾಗ ಯಾರದ್ದು ಎನ್ನುವ ಗೊಂದಲ ಆರಂಭವಾಯಿತು. ಬಳಿಕ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದು ದಾಖಲಾತಿ ಪರಿಶೀಲಿಸಿ ’ಪಾಲಿಕೆಯ ಜಾಗ’ ಎಂದರು.

ಕ್ರಮಕ್ಕೆ ಆಗ್ರಹ: ಪ್ರತಿಷ್ಠಾಪಿಸಿದ್ದ ಅಂಬೇಡ್ಕರ್‌ ಮೂರ್ತಿಯನ್ನು ತೆರವು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಪರಿಶಿಷ್ಟ ಸಂಘಟನೆಗಳು ಕಸಬಾಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ಗೆ ದೂರು ಸಲ್ಲಿಸಿವೆ.

ವಿಶ್ವರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ ಸೇವಾಸಂಘ, ಸಮತಾ ಸೈನಿಕ ದಳ, ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಯುವಜನ ಸುಧಾರಣಾ ಸಮಿತಿ ಹಾಗೂ ಸಿದ್ಧಾರ್ಥ ಸೇವಾ ಸಂಘ ಪೊಲೀಸರಿಗೆ ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದಾರೆ.

’ಮಹಾನಗರ ಪಾಲಿಕೆಯ ಜಾಗದಲ್ಲಿ ಸ್ಥಾಪನೆಯಾಗಿದ್ದ ಅಂಬೇಡ್ಕರ್‌ ಮೂರ್ತಿಯನ್ನು ಕೆಲವು ದುಷ್ಕರ್ಮಿಗಳು ತೆಗೆದುಹಾಕಿದ್ದಾರೆ. ಇದು ಸಂವಿಧಾನ ವಿರೋಧ ಕೃತ್ಯವಾಗಿದ್ದು, ಅಂಬೇಡ್ಕರ್‌ ಅವರಿಗೆ ಮಾಡಿದ ಅವಮಾನ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ಗಡಿಪಾರು ಮಾಡಬೇಕು’ ಎಂದು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

ಅಧಿಕಾರಿಗಳೊಂದಿಗೆ ಸೋಮವಾರ ಸಭೆ

ಖಾಲಿ ಜಾಗದಲ್ಲಿ ಅಂಬೇಡ್ಕರ್‌ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದರಿಂದ ಸ್ಥಳಕ್ಕೆ ನಮ್ಮ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆ ಸ್ಥಳ ಪಾಲಿಕೆಯ ಒಡೆತನಕ್ಕೆ ಸೇರಿದ್ದು. ವಿವಿಧ ಸಂಘಟನೆಗಳ ಮುಖಂಡರ ಜೊತೆ ಸೋಮವಾರ ಸಭೆ ನಡೆಸಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ತಿಳಿಸಿದರು.

’ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ’ಸುಪ್ರೀಂ ಕೋರ್ಟ್‌ ನಿರ್ದೇಶನದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ. ಈ ಕೆಲಸ ಮಾಡಿದವರಿಗೆ ನೋಟಿಸ್‌ ನೀಡಲಾಗುವುದು. ಮೂರ್ತಿ ತೆರವು ಮಾಡುವಂತೆ ಸೂಚಿಸಲಾಗುವುದು. ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT