ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲೆ ಆರೋಪಿಗಳ ಎನ್‌ಕೌಂಟರ್‌ಗೆ ಆಗ್ರಹ

ನೇಹಾ, ಅಂಜಲಿ ಕೊಲೆ ಖಂಡಿಸಿ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ
Published 18 ಮೇ 2024, 18:49 IST
Last Updated 18 ಮೇ 2024, 18:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಂಜಲಿ ಅಂಬಿಗೇರ, ನೇಹಾ ಹಿರೇಮಠ ಕೊಲೆ ಖಂಡಿಸಿ ಹಾವೇರಿ ಜಿಲ್ಲೆಯ ನರಸಿಪುರ ನಿಜಶರಣ ಅಂಬಿಗರ ಚೌಡಯ್ಯ ಗುರು ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮಿಜಿ ನೇತೃತ್ವದಲ್ಲಿ ವಿವಿಧ ಸಮುದಾಯದವರು ಇಲ್ಲಿ ಶನಿವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನ ಸಂಚಾರ ತಡೆದರು. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರಿಗೆ ಮನವಿಪತ್ರ ಸಲ್ಲಿಸಿದ ಪ್ರತಿಭಟನಾಕಾರರು, ‘ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರ ಕೊಡುವುದರ ಜೊತೆಗೆ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಮನೆ ಮಂಜೂರು ಮಾಡಿ, ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಧಾರವಾಡ ಜಿಲ್ಲೆಯ ಮನಸೂರ ರೇವಣ ಸಿದ್ದೇಶ್ವರ ಮಠದ ಬಸವರಾಜ ದೇವರು ಅವರು, ‘ಆರೋಪಿಗಳಿಗೆ ಉತ್ತರ ಪ್ರದೇಶದ ಮಾದರಿಯಲ್ಲಿ ಅವರನ್ನು ಎನ್‌ಕೌಂಟರ್ ಮಾಡಬೇಕು. ಯಾವುದೇ ಕಾರಣಕ್ಕೂ ರಕ್ಷಣೆ ಮಾಡಬಾರದು’ ಎಂದರು.

ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಶಾಂತಭೀಷ್ಮ ಚೌಡಯ್ಯ ಸ್ವಾಮಿಜಿ, ಕುಂದಗೋಳದ ಅಭಿನವ ಬಸವಣ್ಣಜ್ಜನವರು ಸೇರಿದಂತೆ ವಿವಿಧ ಮಠಾಧೀಶರು ಇದ್ದರು.

ಸಚಿವ ಸಂತೋಷ್ ಲಾಡ್ ಭೇಟಿ–ಸಾಂತ್ವನ: ಅಂಜಲಿ ಅಂಬಿಗೇರ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ತಮ್ಮ ಸಂತೋಷ್‌ ಲಾಡ್ ಫೌಂಡೇಷನ್‌ನಿಂದ ₹2 ಲಕ್ಷ ನೆರವು ನೀಡಿದರು.

ಅಂಜಲಿ ಅಂಬಿಗೇರ ನೇಹಾ ಹಿರೇಮಠ ಕೊಲೆ ಖಂಡಿಸಿ ಗಂಗಾಮತ ಸೇರಿ ವಿವಿಧ ಸಮುದಾಯದವರು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ಶನಿವಾರ ಹುಬ್ಬಳ್ಳಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು
–ಪ್ರಜಾವಾಣಿ ಚಿತ್ರ
ಅಂಜಲಿ ಅಂಬಿಗೇರ ನೇಹಾ ಹಿರೇಮಠ ಕೊಲೆ ಖಂಡಿಸಿ ಗಂಗಾಮತ ಸೇರಿ ವಿವಿಧ ಸಮುದಾಯದವರು ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ಶನಿವಾರ ಹುಬ್ಬಳ್ಳಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು –ಪ್ರಜಾವಾಣಿ ಚಿತ್ರ

ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹುಬ್ಬಳ್ಳಿ ಮತ್ತೊಂದು ಬಿಹಾರ ಎಂಬ ಅಪಕೀರ್ತಿ ಬಂದಿದೆ. ಯುವತಿಯರು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ

–ಬಸವಜಯಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಪೀಠ ಕೂಡಲಸಂಗಮ

ಅಂಜಲಿ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು. ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು

–ಸಂತೋಷ್ ಲಾಡ್‌ ಜಿಲ್ಲಾ ಉಸ್ತುವಾರಿ ಸಚಿವ

ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಿರೀಶ ಆರೋಗ್ಯ ಕೊಂಚ ಸುಧಾರಿಸಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗುವುದು.

–ರೇಣುಕಾ ಸುಕುಮಾರ್ ಪೊಲೀಸ್ ಕಮಿಷನರ್‌ ಹುಬ್ಬಳ್ಳಿ–ಧಾರವಾಡ

‘ನ್ಯಾಯಾಲಯ ಕೊಡುವ ಶಿಕ್ಷೆ ಅನುಭವಿಸಲಿ’

ಹುಬ್ಬಳ್ಳಿ: ‘ನ್ಯಾಯಾಲಯ ಕೊಡುವ ಶಿಕ್ಷೆಯನ್ನು ನನ್ನ ಮಗ ಅನುಭವಿಸಲಿ. ಆಂಥ ಮಗನಿಗೆ ಜಾಮೀನು ಕೊಟ್ಟು ಬಿಡಿಸಲು ಪ್ರಯತ್ನಿಸಲ್ಲ’ ಎಂದು ಗಿರೀಶನ ತಾಯಿ ಸವಿತಾ ಸಾವಂತ ಹೇಳಿದರು ‘ಅಂಜಲಿಯನ್ನು ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ಹೇಳಿದ್ದ. ಏಕೆ ಈ ರೀತಿ ಮಾಡಿದ್ದಾನೆ ಎಂಬುದು ಗೊತ್ತಿಲ್ಲ. 6 ತಿಂಗಳಿಂದ ನನ್ನ ಜತೆ ಇರಲಿಲ್ಲ. ಒಂದು ತಿಂಗಳಿನಿಂದ ಕರೆ ಮಾಡಿರಲಿಲ್ಲ.’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು. ‘ಹಿಂದೆ ಕಳವು ಪ್ರಕರಣದಲ್ಲಿ ಆತ ಜೈಲಿಗೆ ಹೋಗಿದ್ದ. ಹಿಂದೆಯೂ ಮಗನ ಮೇಲೆ ಒಂದು ಪ್ರಕರಣ ದಾಖಲಾಗಿತ್ತು. ಜಾಮೀನು ಕೊಟ್ಟು ಬಿಡಿಸಿದ್ದೆವು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT