ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ವಿದ್ಯಾರ್ಥಿಗಳ ಕೊಡುಗೆ; ‘ಕಿಮ್ಸ್‌’ಗೆ ಮೆರುಗು

Published 17 ಮಾರ್ಚ್ 2024, 0:03 IST
Last Updated 17 ಮಾರ್ಚ್ 2024, 0:03 IST
ಅಕ್ಷರ ಗಾತ್ರ

ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ನಿರ್ವಹಣಾ ಅಧ್ಯಯನ ಸಂಸ್ಥೆಯ (ಕಿಮ್ಸ್‌) ಹಳೆಯ ವಿದ್ಯಾರ್ಥಿಗಳು ಸಂಸ್ಥೆಗೆ ಹೊಸ ರೂಪ ನೀಡಿ ಮಾದರಿಯಾಗಿದ್ದಾರೆ. ಸ್ವಂತ ಕಟ್ಟಡ, ಸೌಕರ್ಯಗಳು ಇಲ್ಲದೆ ಸೊರಗಿದ್ದ ಸಂಸ್ಥೆ ಇದೀಗ ನವಚೈತನ್ಯ ತುಂಬಿಕೊಂಡಿದೆ.

ತಾವು ಕಲಿತ ಸಂಸ್ಥೆಯು ಸಂಕಷ್ಟ ಸ್ಥಿತಿಯಲ್ಲಿರುವುದನ್ನು ತಿಳಿದು ಅದಕ್ಕೆ ಕಾಯಕಲ್ಪ ನೀಡಿ ಉತ್ಕೃಷ್ಟ ಸಂಸ್ಥೆಯಾಗಿ ಬೆಳೆಸಲು ಹಿರಿಯ ವಿದ್ಯಾರ್ಥಿಗಳು ಟೊಂಕಕಟ್ಟಿ ನಿಂತಿದ್ದಾರೆ. ದೇಣಿಗೆ ನೀಡಿ ತಾವೇ ಮುಂದೆ ನಿಂತು ಕಾಮಗಾರಿಗಳ ಮೇಲೆ ನಿಗಾ ಇಟ್ಟು ಅತ್ಯಾಧುನಿಕ ಸೌಕರ್ಯಗಳನ್ನು ಕಲ್ಪಿಸಿದ್ದಾರೆ.

1976ರಲ್ಲಿ ಆರಂಭವಾದ ‘ಕಿಮ್ಸ್‌’ ಈಗ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ. ಈವರೆಗೆ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಸಂಸ್ಥೆ ಆರಂಭ ವಾಗಿ 48 ವರ್ಷಗಳೇ ಕಳೆದರೂ ಸ್ವಂತಕಟ್ಟಡ, ಅಗತ್ಯ ಸೌಕರ್ಯಗಳು ಇರಲಿಲ್ಲ. ಪ್ರಾಚ್ಯ ವಸ್ತುಸಂಗ್ರಹಾಲಯದ ಕಟ್ಟಡದಲ್ಲಿ ಅಧ್ಯಯನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ‘ಕಿಮ್ಸ್‌ ಅಲುಮ್ನಿ ನೆಟ್‌ವರ್ಕ್‌’ (ಕೆಎಎನ್‌) ರಚಿಸಿಕೊಂಡಿದ್ದಾರೆ. ಪ್ರತಿವರ್ಷ ಸಂಸ್ಥೆಯಲ್ಲಿ ‘ದರ್ಪಣ್‌’ ಕಾರ್ಯಕ್ರಮ ಆಯೋಜಿಸುತ್ತಾರೆ. ಎರಡು ವರ್ಷಗಳ ಹಿಂದೆ ‘ದರ್ಪಣ್‌’ ನಲ್ಲಿ ಸಂಸ್ಥೆಯ ಸ್ಥಿತಿ ಕುರಿತು ಬೋಧಕರು ಹಿರಿಯ ವಿದ್ಯಾರ್ಥಿಗಳ ಗಮನಕ್ಕೆ ತಂದಿದ್ದರು. ಸಂಸ್ಥೆಗೆ ನವಸ್ಪರ್ಶ ನೀಡಲು ಹಳೆಯ ವಿದ್ಯಾರ್ಥಿಗಳು ನಿರ್ಧರಿಸಿ ಕಾರ್ಯಪ್ರವೃತ್ತರಾದರು. ‌

‘ಪ್ರತಿವರ್ಷ ದರ್ಪಣ್‌ ಕಾರ್ಯಕ್ರಮದಲ್ಲಿ ನೂರರಿಂದ ನೂರೈವತ್ತು ಹಳೆಯ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ಸಂಸ್ಥೆಯ ಅಭಿವೃದ್ಧಿ ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಅವರೊಂದಿಗೆ ಚರ್ಚೆ ನಡೆಸಿದ್ದೆವು. ಹಲವರು ನೆರವು ನೀಡುವ ಮೂಲಕ ವಿಭಾಗದ ಅಭಿವೃದ್ಧಿಗೆ ಕೈ ಜೋಡಿಸಿದ್ಧಾರೆ’ ಎಂದು ಕಿಮ್ಸ್‌ ನಿರ್ದೇಶಕ ಪ್ರೊ.ಎನ್‌.ರಾಮಾಂಜನೇಯಲು ಹೇಳುತ್ತಾರೆ.

ಕೆಎಎನ್‌ ಅಧ್ಯಕ್ಷ ನರೇಶ್‌ ಶಾ, ಸಂಜೀವ್‌ ಘನಾಟೆ, ಪ್ರಮೋದ್‌ ಝಳಕೀಕರ್‌, ಜ್ಯೋತಿರಾಜ್‌, ಮಂಜುನಾಥ್‌ ಅವರು ಮುತುವರ್ಜಿವಹಿಸಿದರು. ಪ್ರಮೋದ್‌ ಹಣ ಸಂಗ್ರಹ ಹೊಣೆ, ಸಂಜೀವ ಘನಾಟೆ ಕಟ್ಟಡ ಕಾಮಗಾರಿ ನಿಗಾ... ಹೀಗೆ ಒಬ್ಬೊಬ್ಬರು ಒಂದೊಂದು ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯೋನ್ಮುಖರಾದರು. ತಾವು ಕಲಿತ ಸಂಸ್ಥೆಯಲ್ಲಿ ಉತ್ಕೃಷ್ಟ ಸೌಲಭ್ಯಗಳನ್ನು ಕಲ್ಪಿಸಿ ಶ್ರೇಷ್ಠ ನಿರ್ವಹಣಾ ಅಧ್ಯಯನ ಕೇಂದ್ರಗಳಲ್ಲಿ ಒಂದನ್ನಾಗಿಸುವ ಅಪೇಕ್ಷೆ ಅವರದು.

ಮೊದಲು ಸಂಸ್ಥೆಗೆ ಸ್ವಂತ ಕಟ್ಟಡ ಕಲ್ಪಿಸುವತ್ತ ಗಮನಹರಿಸಿ ಬೋಧಕರ ಜೊತೆ ಕುಲಪತಿಯವರಿಗೆ ಮನವಿ ಸಲ್ಲಿಸಿದರು. ಪ್ರಾಚ್ಯ ವಸ್ತುಸಂಗ್ರಹಾಲಯದ ಪಕ್ಕದ ನಿರ್ಮಾಣ ಹಂತದಲ್ಲಿದ್ದ ಕಟ್ಟಡವನ್ನು ಸಂಸ್ಥೆಗೆ ನೀಡಲು ಅವರು ಕ್ರಮ ವಹಿಸಿದರು. ವಿವಿಧೆಡೆಗಳಲ್ಲಿ ಇರುವ  ಸಂಸ್ಥೆಯ ವಿದ್ಯಾರ್ಥಿಗಳನ್ನು ಪ್ರಮೋದ್‌ ಝಳಕೀಕರ್‌ ಅವರು ಸಂಪರ್ಕಿಸಿದರು. ಸುಮಾರು 400 ವಿದ್ಯಾರ್ಥಿಗಳಿಂದ ₹ 1.35 ಕೋಟಿ ದೇಣಿಗೆ ಸಂಗ್ರಹಿಸಿದರು. ಕನಿಷ್ಠ ₹ 5 ಸಾವಿರ, ಗರಿಷ್ಠ ₹ 10 ಲಕ್ಷದವರೆಗೂ ದೇಣಿಗೆ ನೀಡಿದ್ದಾರೆ.

ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಹಲವರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಕೆಲವರು ಐಐಟಿ, ಐಐಎಂಗಳಲ್ಲಿ ಬೋಧಕರಾಗಿದ್ಧಾರೆ. ಇನ್ನು ಹಲವರು ಸ್ವಂತ ವ್ಯವಹಾರ, ಉದ್ಯಮದಲ್ಲಿ ತೊಡಗಿದ್ಧಾರೆ. ಕೆನಡಾದಲ್ಲಿ ಸಂಸದರಾಗಿರುವ ಚಂದ್ರಆರ್ಯ ಅವರು ಕಿಮ್ಸ್‌ನ ಹಳೆಯ ವಿದ್ಯಾರ್ಥಿ.

ಸಂಜೀವ ಘಾಟೆ ಮುಂದೆ ನಿಂತು ಕಾಮಗಾರಿ ನಿಗಾ ವಹಿಸಿದರು. ಹೈಟೆಕ್‌ ಸೌಕರ್ಯಗಳೊಂದಿಗೆ ಕಟ್ಟಡವನ್ನು (34 ಸಾವಿರ ಚದರ ಅಡಿ ವಿಸ್ತೀರ್ಣ) ನವೀಕರಣಗೊಳಿಸಿದರು. ಡಿಜಿಟಲ್‌ ಬೋರ್ಡ್ ಸೌಲಭ್ಯದ ತರಗತಿ ಕೊಠಡಿ, ಗ್ರಂಥಾಲಯ, ಉದ್ಯೋಗ ಮಾರ್ಗದರ್ಶನ ಕೇಂದ್ರ, ಕಂಪ್ಯೂಟರ್‌ ಪ್ರಯೋಗಾಲಯ, ಬೋಧಕರಿಗೆ ಕೊಠಡಿಗಳು, ಸಭಾಂಗಣ, ಮೈದಾನ ಕಲ್ಪಿಸಲಾಗಿದೆ. ಹಳೆಯ ವಿದ್ಯಾರ್ಥಿಗಳ ತಂಡವು ಮೂಲಸೌಕರ್ಯ ಕಲ್ಪಿಸುವ ಮೊದಲ ಹಂತವನ್ನು ಪೂರ್ಣಗೊಳಿಸಿದೆ.

‘ಕಿಮ್ಸ್‌’ನ ಗಂಭೀರ ಸ್ಥಿತಿ ಕುರಿತು ಕುಲಪತಿ ಅವರೊಂದಿಗೆ ಚರ್ಚಿಸಿದೆವು. ಅವರು ಪ್ರಾಚ್ಯ ವಸ್ತುಸಂಗ್ರಹಾಲಯದ ಪಕ್ಕದ ಕಟ್ಟಡ ಒದಗಿಸಿದರು. ಅನುದಾನದ ಕೊರತೆಯ ವಿಚಾರವನ್ನು ತಿಳಿಸಿದರು. ನಾವೇ ಹಣ ಸಂಗ್ರಹಿಸಿ ಹೈಟೆಕ್‌ ಸೌಲಭ್ಯ ಕಲ್ಪಿಸಿದೆವು’ ಎಂದು ಕಿಮ್ಸ್‌ ಅಲುಮ್ನಿ ನೆಟ್‌ವರ್ಕ್‌ ಅಧ್ಯಕ್ಷ ನರೇಶ್‌ ಶಾ ಖುಷಿಯಿಂದಲೇ ಹೇಳುತ್ತಾರೆ.

‘ಸಂಸ್ಥೆಯ ಅಭಿವೃದ್ಧಿಗೆ ಹಣ ನೀಡಲು ಬಹಳ ಮಂದಿ ಉತ್ಸುಕರಾಗಿದ್ಧಾರೆ. ಧಾರವಾಡ– ಹುಬ್ಬಳ್ಳಿಯಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳು ಜವಾಬ್ದಾರಿವಹಿಸಿಕೊಂಡಿದ್ದೇವೆ. ಸಿವಿಲ್‌ ಕಾಮಗಾರಿ, ಹಣ ಸಂಗ್ರಹ, ನಿರ್ವಹಣೆ ಹೀಗೆ ಒಂದೊಂದು ಜವಾಬ್ದಾರಿಯನ್ನು ಒಬ್ಬೊಬ್ಬರು ವಹಿಸಿಕೊಂಡಿದ್ಧಾರೆ. ಎರಡನೇ ಹಂತದಲ್ಲಿ ಪ್ರಾಯೋಗಿಕ ತರಬೇತಿ, ಮಾರ್ಗದರ್ಶನ, ಎಲ್ಲ ವಿದ್ಯಾರ್ಥಿಗಳಿಗೆ ಉದ್ಯೋಗ ಒದಗಿಸುವ ಯೋಜನೆ ಮಾಡಿದ್ಧೇವೆ’ ಎನ್ನುತ್ತಾರೆ.

ನರೇಶ್‌ ಶಾ ಅವರ ಸಮೂಹವು ‘ಸಾಫ್ಟ್‌ ಸ್ಕಿಲ್‌’, ಕೃತಕ ಬುದ್ಧಿವಂತಿಕೆ ಹಾಗೂ ಯಂತ್ರಭಾಷೆ ಮೊದಲಾದ ಸುಧಾರಿತ ಕೌಶಲಗಳ ತರಬೇತಿಯನ್ನು ಆರಂಭಿಸಿದೆ.

‘ಕಿಮ್ಸ್‌ ಹಳೆಯ ವಿದ್ಯಾರ್ಥಿಗಳ ಈ ನಡೆ ಮಾದರಿ. ತಾವು ಕಲಿತ ಸಂಸ್ಥೆಗೆ ಏನಾದರೂ ಕೊಡುಗೆ ನೀಡುವುದು ಒಳ್ಳೆಯದು. ಈ ಮಾದರಿಯನ್ನು ಇತರ ಅಧ್ಯಯನ ವಿಭಾಗಗಳು ಅನುಸರಿಸಬೇಕು’ ಎನ್ನುವುದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅವರ ಆಶಯ.

ಸಂಸ್ಥೆಯ ಹಳೆಯ ವಿದ್ಯಾರ್ಥಿ ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ ಸಿ.ಸಜ್ಜನವರ ಅವರು ನವೀಕೃತ ಕಟ್ಟಡವನ್ನು ಮಾರ್ಚ್‌ 3ರಂದು ಉದ್ಘಾಟಿಸಿದರು. ತಾವು ಕಲಿತ ಸಂಸ್ಥೆಗೆ ತಮ್ಮ ಕೈಲಾದ ನೆರವಿನ ಹಸ್ತಚಾಚಿ, ತಮ್ಮಂತೆಯೇ ಮುಂದಿನ ತಲೆಮಾರಿನ ವಿದ್ಯಾರ್ಥಿಗಳು ನೆಲೆ ಕಂಡುಕೊಳ್ಳಬೇಕು ಎನ್ನುವ ಕಾಳಜಿ ಮೆಚ್ಚುವಂತದ್ದು.

ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಬಿ.ಎಂ.ಕೇದಾರನಾಥ/ಪ್ರಜಾವಾಣಿ ಚಿತ್ರ
ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಬಿ.ಎಂ.ಕೇದಾರನಾಥ/ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿನ ಕೌಸಾಳಿ ನಿರ್ವಹಣಾ ಸಂಸ್ಥೆ ಕಟ್ಟಡ ಉದ್ಘಾಟನೆ ದಿನ ಮೈದಾನದಲ್ಲಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಕೆಎಎನ್‌ ಅಧ್ಯಕ್ಷ ನರೇಶ್‌ ಶಾ ಹಿರಿಯ ವಿದ್ಯಾರ್ಥಿಗಳು ಸಂಸ್ಥೆ ಸಿಬ್ಬಂದಿ ಪಾಲ್ಗೊಂಡಿದ್ದರು
ಧಾರವಾಡದಲ್ಲಿನ ಕೌಸಾಳಿ ನಿರ್ವಹಣಾ ಸಂಸ್ಥೆ ಕಟ್ಟಡ ಉದ್ಘಾಟನೆ ದಿನ ಮೈದಾನದಲ್ಲಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಕೆಎಎನ್‌ ಅಧ್ಯಕ್ಷ ನರೇಶ್‌ ಶಾ ಹಿರಿಯ ವಿದ್ಯಾರ್ಥಿಗಳು ಸಂಸ್ಥೆ ಸಿಬ್ಬಂದಿ ಪಾಲ್ಗೊಂಡಿದ್ದರು
ಪ್ರತಿವರ್ಷ ದರ್ಪಣ್‌ ಕಾರ್ಯಕ್ರಮದಲ್ಲಿ 100ರಿಂದ 150 ಹಿರಿಯ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ಸಂಸ್ಥೆಯ ಅಭಿವೃದ್ಧಿ ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ್ದೆವು. ಹಿರಿಯ ವಿದ್ಯಾರ್ಥಿಗಳು ವಾಟ್ಸ್ ಆ್ಯಪ್‌ ಗುಂಪು ಮಾಡಿದ್ಧಾರೆ. ಹಲವರು ನೆರವು ನೀಡಿದ್ದಾರೆ. ವಿಭಾಗದ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.
– ಪ್ರೊ.ಎನ್‌.ರಾಮಾಂಜನೇಯುಲು, ನಿರ್ದೇಶಕ ಕಿಮ್ಸ್‌ ಕರ್ನಾಟಕ ವಿ.ವಿ ಧಾರವಾಡ
ಕಿಮ್ಸ್‌ ಹಿರಿಯ ವಿದ್ಯಾರ್ಥಿಗಳ ಈ ನಡೆ ಮಾದರಿ. ತಾವು ಕಲಿತ ವಿದ್ಯಾಲಯಕ್ಕೆ ಏನಾದರೂ ಕೊಡುಗೆ ನೀಡುವುದು ಒಳ್ಳೆಯದು. ಈ ಮಾದರಿಯನ್ನು ಇತರ ಅಧ್ಯಯನ ವಿಭಾಗಗಳು ಅನುಸರಿಸಬೇಕು.
– ಪ್ರೊ.ಕೆ.ಬಿ.ಗುಡಸಿ, ಕುಲಪತಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ

‘ಪ್ರತಿಷ್ಠಿತ ಸಂಸ್ಥೆಯಾಗಿಸುವ ಕನಸು’

ಕಿಮ್ಸ್‌ ಆರಂಭವಾಗಿ 48 ವರ್ಷಗಳು ಕಳದರೂ ಸ್ವಂತ ಕಟ್ಟಡ ಇರಲಿಲ್ಲ. ಎರಡು ವರ್ಷಗಳ ಹಿಂದೆ ದರ್ಪಣ್‌ ಕಾರ್ಯಕ್ರಮದಲ್ಲಿ ‘ಕಿಮ್ಸ್‌’ನ ಗಂಭೀರ ಸ್ಥಿತಿಯ ಕುರಿತು ನಿರ್ದೇಶಕರೊಂದಿಗೆ ಚರ್ಚೆ ನಡೆಸಿದೆವು. ಕುಲಪತಿಯವರಿಗೆ ಪ್ರಸ್ತಾಪ ಸಲ್ಲಿಸಿದೆವು. ಅವರು ಪ್ರಾಚ್ಯವಸ್ತುಸಂಗ್ರಹಾಲಯದ ಪಕ್ಕದ ಕಟ್ಟಡ ಒದಗಿಸಿದರು. ಅನುದಾನದ ಕೊರತೆಯ ವಿಚಾರವನ್ನು ಅವರು ತಿಳಿಸಿದರು.

‘ಕಿಮ್ಸ್‌’ ಅಲುಮ್ನಿಯಿಂದ ಹಣ ಸಂಗ್ರಹಿಸಿ ಕಟ್ಟಡದಲ್ಲಿ ಹೈಟೆಕ್‌ ಸೌಲಭ್ಯ ಕಲ್ಪಿಸಿದೆವು’ ಎಂದು ಕಿಮ್ಸ್‌ ಅಲುಮ್ನಿ ನೆಟ್‌ವರ್ಕ್‌ ಅಧ್ಯಕ್ಷ ನರೇಶ್‌ ಶಾ ತಿಳಿಸಿದರು. ಪ್ರತಿಷ್ಠಿತ ಖಾಸಗಿ ಅಧ್ಯಯನ ಸಂಸ್ಥೆಗಳಿಗೆ ಸಮನಾಗಿ ಕಿಮ್ಸ್‌ ಅಭಿವೃದ್ಧಿಪಡಿಸಬೇಕು ಎಂಬುದು ಮಹನ್ನೋತ ಉದ್ದೇಶ ಅಲುಮ್ನಿಗೆ ಇದೆ.

ಮೊದಲ ಹಂತದಲ್ಲಿ ಕಟ್ಟಡದಲ್ಲಿ ಮೂಲಸೌಕರ್ಯ ವ್ಯವಸ್ಥೆ ಮಾಡಿದ್ದೇವೆ. ಸಂಸ್ಥೆಯ ಅಭಿವೃದ್ಧಿಗೆ ಹಣ ನೀಡಲು ಬಹಳ ಮಂದಿ ಉತ್ಸುಕರಾಗಿದ್ಧಾರೆ. ಧಾರವಾಡ– ಹುಬ್ಬಳ್ಳಿಯಲ್ಲಿ ನೆಲೆಸಿರುವ ಹಿರಿಯ ವಿದ್ಯಾರ್ಥಿಗಳು ಜವಾಬ್ದಾರಿ ವಹಿಸಿಕೊಂಡಿದ್ದೇವೆ. ಸಿವಿಲ್‌ ಕಾಮಗಾರಿ ಹಣ ಸಂಗ್ರಹ ನಿರ್ವಹಣೆ ಹೀಗೆ ಒಂದೊಂದು ಜವಾಬ್ದಾರಿಯನ್ನು ಒಬ್ಬೊಬ್ಬರು ವಹಿಸಿಕೊಂಡಿದ್ಧಾರೆ. ಎರಡನೇ ಹಂತದಲ್ಲಿ ಪ್ರಾಯೋಗಿಕ ತರಬೇತಿ ಮಾರ್ಗದರ್ಶನ ಎಲ್ಲ ವಿದ್ಯಾರ್ಥಿಗಳಿಗೆ ಉದ್ಯೋಗ ಒದಗಿಸುವ ಯೋಜನೆ ಮಾಡಿದ್ಧೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT