ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸಣ್ಣ ಸಿ.ಎಂ ಆಗ್ತಾನಂತ ನಂಬಿಕೆ ಇತ್ತು: ಬೊಮ್ಮಾಯಿ ಅವರ ಅಕ್ಕ ಉಮಾ ಪಾಟೀಲ

ಬಸವರಾಜ ಬೊಮ್ಮಾಯಿ ಅವರ ಅಕ್ಕ ಉಮಾ, ಮಾವ ಎನ್‌.ಎಂ. ಪಾಟೀಲ ಮೆಚ್ಚುಗೆಯ ಮಾತು
Last Updated 28 ಜುಲೈ 2021, 13:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಸಣ್ಣ ಇಂದಲ್ಲ ನಾಳೆ ಮುಖ್ಯಮಂತ್ರಿ ಆಗೇ ಆಗ್ತಾನೆ ಅನ್ನೊ ನಂಬಿಕೆ ನನಗಿತ್ತು. ಇಂದು ಆ ಕನಸು ಈಡೇರಿದೆ. ತಂದೆಯ ಹಾದಿಯಲ್ಲೇ ಸ್ವಚ್ಛ ರಾಜಕಾರಣ ಮಾಡಿದ ಬಸಣ್ಣ ಕಡೆಗೂ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾನೆ. ಈಗ ತಂದೆ ಎಸ್.ಆರ್. ಬೊಮ್ಮಾಯಿ ಅವರಿದ್ದಿದ್ದರೆ ಎಷ್ಟು ಖುಷಿಪಡುತ್ತಿದ್ದರೊ....’

– ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರ ಅಕ್ಕ ಉಮಾ ಪಾಟೀಲ ಹಾಗೂ ಮಾವಎನ್‌.ಎಂ. ಪಾಟೀಲ ಅವರ ಸಂತಸದ ನುಡಿಗಳಿವು. ಬೊಮ್ಮಾಯಿ ಅವರು ಸಿ.ಎಂ ಆದ ವಿಷಯ ಗೊತ್ತಾಗುತ್ತಿದ್ದಂತೆ, ಹುಬ್ಬಳ್ಳಿಯ ಆದರ್ಶನಗರದಲ್ಲಿರುವ ಬೊಮ್ಮಾಯಿ ಅವರ ನಿವಾಸದಲ್ಲಿ ದಂಪತಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

‘ಬಸಣ್ಣ ರಾಜಕಾರಣಕ್ಕೆ ಬರುವುದು ತಂದೆಗೆ ಇಷ್ಟವಿರಲಿಲ್ಲ. ಎಂಜಿನಿಯರಿಂಗ್ ಓದಿದ್ದ ಬಸಣ್ಣ ಕೈಗಾರಿಕೆಯೊಂದನ್ನು ನೋಡಿಕೊಂಡಿದ್ದ. ಆದರೆ, ರಾಜಕೀಯ ಪರಿಸ್ಥಿತಿ ಅನಿವಾರ್ಯವಾಗಿ ರಾಜಕೀಯಕ್ಕೆ ಬರುವಂತೆ ಮಾಡಿತು. ತಂದೆಯಂತೆ ಮಿತಭಾಷಿ ಮತ್ತು ಸಂಕಷ್ಟಕ್ಕೆ ಮಿಡಿಯುವ ಮನೋಭಾವದ ಬಸಣ್ಣ ಮೊದಲ ಚುನಾವಣೆಯಲ್ಲಿ ಸೋತರೂ ನಂತರ, ವಿಧಾನ ಪರಿಷತ್ ಸದಸ್ಯರಾಗಿ, ಸತತ ಮೂರು ಸಲ ಶಾಸಕನಾಗಿ ಗೆದ್ದು ಬಂದ. ಸಚಿವನಾಗಿ ಒಳ್ಳೆಯ ಕೆಲಸಗಳನ್ನು ಮಾಡಿದ’ ಎಂದು ಉಮಾ ಪಾಟೀಲ ಮೆಲುಕು ಹಾಕಿದರು.

‘ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟ ಬಳಿಕ, ಮುಖ್ಯಮಂತ್ರಿ ಸ್ಥಾನಕ್ಕೆ ಬಸಣ್ಣನ ಹೆಸರಿನ ಜತೆಗೆ, ಹಲವರ ಹೆಸರುಗಳು ಹರಿದಾಡುತ್ತಿದ್ದವು. ಆದರೆ, ಉಳಿದವರೆಲ್ಲರಿಗಿಂತಲೂ ಬಸಣ್ಣನಿಗೆ ಮುಖ್ಯಮಂತ್ರಿಯಾಗಲು ಹೆಚ್ಚಿನ ಆರ್ಹತೆ ಇತ್ತು. ತಂದೆಯಂತೆ ಜಾತಿ ಮೀರಿ ರಾಜಕಾರಣ ಮಾಡಿಕೊಂಡು ಬಂದ್ದಿದ್ದಾನೆ. ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಜನತಾ ಪಕ್ಷದಲ್ಲಿದ್ದ ತಂದೆ ಪ್ರಧಾನಿ ಹುದ್ದೆಗೇರುವ ಮಟ್ಟಕ್ಕೆ ಹೋಗಿದ್ದರು. ತಂದೆಯ ಹಾದಿಯಲ್ಲೇ ಬಂದ ಬಸಣ್ಣ ಕೂಡ, ಒಂದಲ್ಲ ಒಂದು ಒಂದು ದಿನ ಮುಖ್ಯಮಂತ್ರಿಯಾಗುತ್ತಾನೆ ಎಂಬ ವಿಶ್ವಾಸ ನನಗಿತ್ತು. ಅದು ಇಂದು ನನಸಾಗಿದೆ’ ಎಂದು ಸಂಭ್ರಮ ಹಂಚಿಕೊಂಡರು.

‘ನಮ್ಮ ತಾಯಿಯ ತಂದೆ ಮಲ್ಲಪ್ಪ ಹುರಳಿಕೊಪ್ಪ ಅವರು ಬಾಂಬೆಪ್ರೆಸಿಡೆನ್ಸಿಯಲ್ಲಿ ಶಿಗ್ಗಾವಿಯಿಂದ ಶಾಸಕರಾಗಿದ್ದರು. ನಮ್ಮ ತಂದೆ ಸಿ.ಎಂ ಆಗಿದ್ದರು. ಅವರ ಹಾದಿಯಲ್ಲಿ ಸಾಗಿದ ಬಸಣ್ಣ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿದ್ದಾನೆ’ ಎಂದು ಸಂತಸ ವ್ಯಕ್ತಪಡಿಸಿದರು.

ಊಟದಲ್ಲಿ ರೊಟ್ಟಿ, ಆಟದಲ್ಲಿ ಕ್ರಿಕೆಟ್ ಇಷ್ಟ...

‘ಬಸಣ್ಣಗೆ ರೊಟ್ಟಿ, ಕೆಂಪು ಚಟ್ನಿ ಹಾಗೂ ಮಂಡಕ್ಕಿ ಅಂದ್ರೆ ಬಲು ಇಷ್ಟ. ಆಟದಲ್ಲಿ ಕ್ರಿಕೆಟ್ ಅಂದರೆ ಜೀವ.ರಜೆ ಇದ್ದಾಗಲೆಲ್ಲಾ ನಗರದ ನೆಹರೂ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ. ಆಟದಲ್ಲಿ ಜಗಳವಾದರೂ ತಕ್ಷಣ ಎಲ್ಲ ಮರೆತು ಎಲ್ಲರೊಂದಿಗೆ ಬೆರೆಯುತ್ತಿದ್ದ. ದುರ್ಗದ ಬೈಲ್‌ನಲ್ಲಿ ಯಕ್ಕುಂಡಿಮಠ ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದೆವು. ಅವರು ಬಸವಣ್ಣನ ವಚನಗಳನ್ನು ನಮಗೆ ನಿತ್ಯ ಹೇಳಿ ಕೊಡುತ್ತಿದ್ದರು. ವಚನಗಳ ಪಠಣದಲ್ಲಿ ಬಸಣ್ಣ ಮುಂದಿದ್ದ’ ಎಂದು ಸಹೋದರಿ ಉಮಾ ಪಾಟೀಲ ಅವರು ಬೊಮ್ಮಾಯಿ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

‘ದೇಶಪಾಂಡೆ ನಗರದಲ್ಲಿರುವ ರೋಟರಿ ಶಾಲೆಗೆ ದುರ್ಗದ ಬೈಲ್‌ನಿಂದ ನಿತ್ಯ ನಡೆದುಕೊಂಡು ಹೋಗಿ ಬರುತ್ತಿದ್ದ.ಶಾಲೆಯಲ್ಲಿ ಗೆಳೆಯರು ತುಂಬಾ ಕಾಡಿಸಿದಾಗ, ನನ್ನನ್ನು ಶಾಲೆಗೆ ಬಾ ಅವರಿಗೆ ಪಾಠ ಕಲಿಸೋಣ ಅಂತ ಕರೆಯುತ್ತಿದ್ದ. ಸೈಕಲ್ ಓಡಿಸುವುದೆಂದರೆ ಇಷ್ಟ’ ಎಂದು ಹೇಳಿದರು.

‘ಶಾಂತ ಸ್ವಭಾವದ ಬಸಣ್ಣ ಪ್ರತಿ ಮಾತನ್ನೂ ತೂಗಿ ಆಡುತ್ತಾನೆ. ಆತನ ಸ್ನೇಹಿತರ ಕೂಟ ದೊಡ್ಡದು. ಸಚಿವನಾದರೂ ಬಿಡುವಿದ್ದಾಗ ಸ್ನೇಹಿತರೆಲ್ಲರೂ ಒಂದು ಕಡೆ ಸೇರುತ್ತಿದ್ದರು.ಮಕ್ಕಳ ಜತೆ ಸ್ನೇಹಿತನಂತಿರುತ್ತಾನೆ. ತಂದೆ–ತಾಯಿ ನಿಧನರಾದ ಬಳಿಕ, ಬಸಣ್ಣ ಅವರ ಸ್ಥಾನದಲ್ಲಿ ನಿಂತು ಎಲ್ಲಾ ಜವಾಬ್ದಾರಿಗಳನ್ನು ಹೊತ್ತುಕೊಂಡು ನಿಭಾಯಿಸಿದ. ಅಕ್ಕಂದಿರು ಹಾಗೂ ತಮ್ಮ ಎಂದರೆ ಬಲು ಪ್ರೀತಿ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT