ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ | ಹಲವು ಶಾಲೆಗಳಲ್ಲಿ ಸೌಕರ್ಯ ಕೊರತೆ

‘ವಿವೇಕ’, ಕೋಲ್‌ ಇಂಡಿಯಾ ಸಿಎಸ್‌ಆರ್‌ ಯೋಜನೆ; 198 ಕೊಠಡಿ ನಿರ್ಮಾಣ ಬಾಕಿ
ಬಿ.ಜೆ.ಧನ್ಯಪ್ರಸಾದ್‌
Published 3 ಜೂನ್ 2024, 5:59 IST
Last Updated 3 ಜೂನ್ 2024, 5:59 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳಲ್ಲಿ ಸೌಕರ್ಯಗಳ ಕೊರತೆ ಇದೆ. ಶೌಚಾಲಯಕ್ಕೆ ನೀರಿನ ಸಮಸ್ಯೆ, ಚಾವಣಿ ಹೆಂಚುಗಳು ಹಾಳಾಗಿರುವುದು, ಸೋರುವುದು, ಮೈದಾನ ಇಲ್ಲದಿರುವುದು, ಬೆಂಚುಗಳ ಕೊರತೆ ಇವೆ.

ಧಾರವಾಡ ಚೈತನ್ಯ ನಗರದ (ಕೆಲಗೇರಿ ಕೆರೆ ಪಕ್ಕ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ನಾಲ್ಕನೇ ತರಗತಿಯಲ್ಲಿ 25 ವಿದ್ಯಾರ್ಥಿಗಳು ಇದ್ದಾರೆ. ಇಲ್ಲಿರುವುದು ಒಬ್ಬರೇ ಶಿಕ್ಷಕಿ.

ಶಾಲೆಯ ಬದಿಯಲ್ಲಿ ದೊಡ್ಡ ಮೋರಿ ಇದೆ. ಮಳೆ ಜೋರಾಗಿ ಸುರಿದಾಗ ಮೋರಿಯ ಕೊಳಕು ನೀರು ಶಾಲೆಯ ಆವರಣಕ್ಕೂ ನುಗ್ಗುತ್ತದೆ. ವಿದ್ಯಾರ್ಥಿಗಳಿಗೆ ಬೆಂಚಿನ ವ್ಯವಸ್ಥೆ ಇಲ್ಲ.

‘ಬೋಧನೆ, ನಿರ್ವಹಣೆ ಎಲ್ಲವನ್ನು ಒಬ್ಬರೇ ನಿಭಾಯಿಸುವುದು ಕಷ್ಟ. ಕಳೆದ ವರ್ಷ ಅತಿಥಿ ಶಿಕ್ಷಕರೊಬ್ಬರನ್ನು ವ್ಯವಸ್ಥೆ ಮಾಡಿದ್ದರು. ಈ ವರ್ಷವೂ ಅತಿಥಿ ಶಿಕ್ಷಕರೊಬ್ಬರನ್ನು ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ’ ಎಂದು ಚೈತನ್ಯ ನಗರದ ಶಾಲೆಯ ಶಿಕ್ಷಕಿ ‘ಪ್ರಜಾವಾಣಿ’ಗೆ ತಿಳಿಸಿದರು.

ನೆಹರೂ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಪುಂಡರು ರಜಾ ದಿನಗಳಂದು ಶಾಲಾಕಟ್ಟಡದ ಪಡಸಾಲೆಯಲ್ಲಿ ಮೋಜು ಮಾಡುತ್ತಾರೆ. ಕಾಂಪೌಂಡ್‌ ದಾಟಿ ಆವರಣದೊಳಕ್ಕೆ ನುಗ್ಗಿ ಕಟ್ಟಡದ ಪಡಸಾಲೆಯಲ್ಲಿ ಮದ್ಯಪಾನ ಮಾಡುತ್ತಾರೆ. ಖಾಲಿ ಬಾಟಲಿ, ಆಹಾರದ ಪೊಟ್ಟಣ ಮೊದಲಾದವನ್ನು ಅಲ್ಲಿಯೇ ಎಸೆಯುತ್ತಾರೆ. ಅಮಲಿನಲ್ಲಿ ಕಿಟಕಿ ಗಾಜು ಹೊಡೆದ ಉದಾಹರಣೆಗಳು ಇವೆ.

ಜೋರು ಮಳೆಯಾದಾಗ ಮಳೆಗಾಲದಲ್ಲಿ ಶಾಲಾವರಣಕ್ಕೆ ನೀರು ನುಗ್ಗುತ್ತದೆ. ಕೆಸರಿನಲ್ಲಿ ಮಕ್ಕಳು, ಶಿಕ್ಷಕರು ಓಡಾಡಬೇಕು.

‘ಮಳೆ ನೀರು ಆವರಣದಲ್ಲಿ ನಿಲ್ಲದಂತೆ ವ್ಯವಸ್ಥೆ ಮಾಡಬೇಕು. ಮದ್ಯವ್ಯಸನಿಗಳ ಮೋಜಿಗೆ ಕಡಿವಾಣ ಹಾಕಬೇಕು’ ಎಂದು ಶಾಲೆಯ ಶಿಕ್ಷಕರು ಮನವಿ ಮಾಡುತ್ತಾರೆ.

ಶಾಲೆಗಳಲ್ಲಿ ಶೌಚಾಲಯಗಳಿವೆ. ಆದರೆ, ಸ್ವಚ್ಛತೆಯ ಸಮಸ್ಯೆಯಿದೆ. ಕೆಲವೆಡೆ ದುಃಸ್ಥಿತಿಯಲ್ಲಿವೆ. ಗ್ರಾಮೀಣ ಭಾಗದ ಬಹಳಷ್ಟು ಶಾಲೆಗಳ ಶೌಚಾಲಯಗಳಲ್ಲಿ ನೀರಿನ ಕೊರತೆ ಇದೆ. ಶೌಚಾಲಯಗಳ ನಿರ್ವಹಣೆ ಶಾಲಾ ಸಮಿತಿಗಳಿಗೆ ಸವಾಲಾಗಿದೆ.

ಜಿಲ್ಲೆಯಲ್ಲಿ ಶಾಲಾ ಕೊಠಡಿಗಳ ಕೊರತೆ ನಿವಾರಣೆ ನಿಟ್ಟಿನಲ್ಲಿ ವಿವೇಕ ಶಾಲಾ ಕೊಠಡಿ ಯೋಜನೆ ಮತ್ತು ಕೋಲ್‌ ಇಂಡಿಯಾ ಸಿಎಸ್‌ಆರ್‌ (ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ) ಯೋಜನೆಯಡಿ ಒಟ್ಟು 436 ಕೊಠಡಿಗಳು ಮಂಜೂರಾಗಿವೆ.

ವಿವೇಕ ಶಾಲಾ ಕೊಠಡಿ ಯೋಜನೆಯಡಿ 295 ಕೊಠಡಿಗಳು ಮಂಜೂರಾಗಿವೆ. ಈ ಪೈಕಿ 157 ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿದೆ. 138 ಕೊಠಡಿಗಳ ಕಾಮಗಾರಿ ಬಾಕಿ ಇದೆ.

ಕೋಲ್‌ ಇಂಡಿಯಾ ಸಿಎಸ್‌ಆರ್‌ ಯೋಜನೆಯಡಿ 141 ಕೊಠಡಿ ಮಂಜೂರಾಗಿದ್ದು, 81 ಕೊಠಡಿಗಳ ಕಾಮಗಾರಿ ಮುಗಿದಿದೆ. ಇನ್ನು 60 ಕೊಠಡಿ ಕಾಮಗಾರಿ ಬಾಕಿ ಇದೆ.

ಶಾಲೆಗಳಲ್ಲಿ ಮೈದಾನ ಕೊರತೆ

ಅಳ್ನಾವರ: ತಾಲ್ಲೂಕಿನಲಿ 35 ಸರ್ಕಾರಿ ಶಾಲೆಗಳಿವೆ. ಹಲವಡೆ ಮೈದಾನ ಹಾಗೂ ಕೊಠಡಿಗಳ ಕೊರತೆ ಇದೆ.

ಪಟ್ಟಣದ ಸರ್ಕಾರಿ ಪ್ರೌಢಶಾಲೆಗೆ ಸ್ವಂತ ಕಟ್ಟಡ ಬೇಕು. ಜೊತೆಗೆ ಈ ವರ್ಷ ಹೊಸದಾಗಿ ಪಿಯು ಕಾಲೇಜು ಮಂಜೂರಾಗಿದೆ. ಪ್ರೌಢಶಾಲೆ ಮತ್ತು ಪಿಯು ಕಾಲೇಜಿಗೆ ನೂತನ ಕಟ್ಟಡದ ಬೇಡಿಕೆ ಇದೆ.

‘ಮಳೆಗಾಲದಲ್ಲಿ ಶಾಲೆಯ ಮೈದಾನದಲ್ಲಿ ನೀರು ನಿಲ್ಲುತ್ತದೆ. ಓಡಾಡುವುದಕ್ಕೆ ಸಮಸ್ಯೆಯಾಗುತ್ತದೆ. ತಾಲ್ಲೂಕು ಕೇಂದ್ರದ ಸರ್ಕಾರಿ ಶಾಲೆಗೆ ಸುಸಜ್ಜಿತ ಮೈದಾನ ನಿರ್ಮಿಸಬೇಕು’ ಎಂದು ಅಳ್ನಾವರದ ಪ್ರವೀಣ ಪವಾರ ಹೇಳುತ್ತಾರೆ.

ಸಮೀಪದ ಕಡಬಗಟ್ಟಿ ಸರ್ಕಾರಿ ಶಾಲೆ ಇಕ್ಕಟ್ಟಾದ ಸ್ಥಳದಲ್ಲಿದೆ. ಹಳೆಯ ಕಟ್ಟಡ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ. ಈ ಶಾಲೆಗೆ ಮೈದಾನ ಇಲ್ಲ. ಪಟ್ಟಣದ ನಂ-1 ಸರ್ಕಾರಿ ಶಾಲೆ ಪಟ್ಟಣದ ಮಧ್ಯ ಭಾಗದಲ್ಲಿದೆ. ಈ ಶಾಲೆಗೂ  ಮೈದಾನವಿಲ್ಲ.

ಹೂಲಿಕೇರಿ ಸರ್ಕಾರಿ ಶಾಲೆಯಲ್ಲಿ ಉರ್ದು ಮತ್ತು ಕನ್ನಡ ಶಾಲೆಯಲ್ಲಿ. ಶೌಚಾಲಯ ಇದೆ. ಆದರೆ, ಸ್ವಚ್ಛತೆಯ ಕೊರತೆ ಇದೆ.

‘ತಾಲ್ಲೂಕಿನ ಶಾಲೆಗಳ 9 ಶೌಚಾಲಯ ಹಾಗೂ 58 ಕೊಠಡಿ ರಿಪೇರಿ ಆಗಬೇಕಿದೆ. ಒಟ್ಟು 25 ಶೌಚಾಲಯ ಮತ್ತು 57 ಕೊಠಡಿ ಬೇಡಿಕೆ ಇದೆ. ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡ ಶಿಥಿಲಾವಸ್ಥೆ

ಅಣ್ಣಿಗೇರಿ: ತಾಲ್ಲೂಕಿನ ಕೆಲವು ಶಾಲಾ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ. ಚಾವಣಿಗಳು ಹಾಳಾಗಿವೆ.

ಕೆಲವು ಶಾಲೆಗಳಲ್ಲಿ ಶೌಚಾಲಯ ಇದೆ. ಆದರೆ, ನೀರಿನ ವ್ಯವಸ್ಥೆ ಇಲ್ಲ. ಕೆಲವು ಕಡೆ ನೀರಿನ ವ್ಯವಸ್ಥೆ ಇದೆ. ಆದರೆ, ನಿರ್ವಹಣೆ ಕೊರತೆಯಿಂದಾಗಿ ಸ್ವಚ್ಛತೆ ಇಲ್ಲ. ತಾಲ್ಲೂಕಿನ ಹಲವು ಶಾಲೆಗಳಿಗೆ ಇನ್ನೂ ಪಠ್ಯಪುಸ್ತಕ ತಲುಪಿಲ್ಲ.

‘ಅಣ್ಣಿಗೇರಿಯ ಸರ್ಕಾರಿ ಶಾಲೆ ನಂ 2ರ ಕೊಠಡಿ ದುರಸ್ತಿಗೆ ₹ 10 ಲಕ್ಷ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ ತಿಳಿಸಿದರು.

55 ಕೊಠಡಿ ನಿರ್ಮಾಣ, 98 ಕೊಠಡಿ ದುರಸ್ತಿ ಬಾಕಿ

ಕಲಘಟಗಿ: ತಾಲ್ಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸೇರಿ ಒಟ್ಟು 142 ಶಾಲೆಗಳಿವೆ. 982 ಕೊಠಡಿಗಳಲ್ಲಿ ಒಟ್ಟು 20,722 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

55 ನೂತನ ಕೊಠಡಿ ಹಾಗೂ 98 ಕೊಠಡಿಗಳ ದುರಸ್ತಿ ಆಗಬೇಕಿದ್ದು ಈಗ ಶಿಕ್ಷಣ ಇಲಾಖೆ ಕೆಲವು ಕೊಠಡಿಗಳ ದುರಸ್ತಿ ಕೈಗೊಂಡು ಶೈಕ್ಷಣಿಕ ವರ್ಷದ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಠಡಿಗಳು ಅನುಕೂಲ ಮಾಡಿಕೊಟ್ಟಿದೆ.

166 ಕೊಠಡಿಗಳಿಗೆ ಬೇಡಿಕೆ: ತಾಲ್ಲೂಕಿನಲ್ಲಿ ಒಟ್ಟು 982 ಶಾಲಾ ಕೊಠಡಿಗಳಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ 166 ಕೊಠಡಿಗಳಿಗೆ ಹೆಚ್ಚುವರಿ ಬೇಡಿಕೆಯಿದೆ. ಹೊಸ ಕೊಠಡಿಗಳ ಬೇಡಿಕೆಯನ್ನು ಉಪನಿರ್ದೇಶಕರ ಕಚೇರಿ ಸಹಕಾರದಿಂದ ಸಿ.ಎಸ್.ಆರ್, ತಾಲ್ಲೂಕು ಪಂಚಾಯಿತಿ ಅನುದಾನ, ಇತರೆ ದಾನಿಗಳ ಸಹಕಾರದಿಂದ ಪರಿಹರಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.

ಕಳೆದ ವರ್ಷದಲ್ಲಿ ವಿವೇಕ ಯೋಜನೆಯಡಿ 38 ಕೊಠಡಿ, ಕೋಲ್ ಇಂಡಿಯಾ ಸಿ.ಎಸ್.ಆರ್. ಯೋಜನೆಯಡಿ 29 ಕೊಠಡಿ, ತಾಲ್ಲೂಕು ಪಂಚಾಯಿತಿ ‌ಅನುದಾನದಲ್ಲಿ 4 ಕೊಠಡಿ ಮಂಜೂರಾಗಿದ್ದು, 50 ಕೊಠಡಿ ನಿರ್ಮಾಣ ಮುಕ್ತಾಯವಾಗಿವೆ. 21 ಕೊಠಡಿಗಳ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ.

ಎಸ್.ಡಿ.ಪಿ 2023-24ರಲ್ಲಿ 43 ಶಾಲೆಗಳ ದುರಸ್ತಿಗೆ ₹ 1 ಕೋಟಿ ಅನುದಾನ ಪಿ.ಆರ್.ಇ.ಡಿಗೆ ಮಂಜೂರಾಗಿದೆ. ನೀತಿ ಸಂಹಿತೆ ತೆರವಾದ ಬಳಿಕ ದುರಸ್ತಿ ಕೈಗೆತ್ತಿಕೊಳ್ಳಲಾಗುತ್ತದೆ. ಸಮಗ್ರ ಶಿಕ್ಷಣ ಯೋಜನೆಯಲ್ಲಿ ಪ್ರಮುಖ ದುರಸ್ತಿಗಾಗಿ ಮೂರು ಶಾಲೆಗಳಿಗೆ ₹ 50 ಲಕ್ಷ ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ತಿಳಿಸಿದರು.

(ಪೂರಕ ಮಾಹಿತಿ: ರಾಜಶೇಖರ ಸುಣಗಾರ, ಜಗದೀಶ ಗಾಣಿಗೇರ, ಬಸನಗೌಡ ಪಾಟೀಲ, ಕಲ್ಲಪ್ಪ ಮಿರ್ಜಿ)

ಅಣ್ಣಿಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ನಂ.2) ಚಾವಣಿ ಹೆಂಚುಗಳು ಹಾಳಾಗಿರುವುದು
ಅಣ್ಣಿಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ನಂ.2) ಚಾವಣಿ ಹೆಂಚುಗಳು ಹಾಳಾಗಿರುವುದು
ಧಾರವಾಡದ ಚೈತನ್ಯನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ತರಗತಿ ಕೊಠಡಿ                 -ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಚೈತನ್ಯನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ತರಗತಿ ಕೊಠಡಿ                 -ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಕುಂದಗೋಳ ತಾಲ್ಲೂಕಿನ ಹಿರೇನರ್ತಿ ಸರ್ಕಾರಿ ಪ್ರೌಢಶಾಲೆಯ ಕೊಠಡಿ ಗೋಡೆ ಬಿರುಕು ಬಿಟ್ಟಿರುವುದು
ಕುಂದಗೋಳ ತಾಲ್ಲೂಕಿನ ಹಿರೇನರ್ತಿ ಸರ್ಕಾರಿ ಪ್ರೌಢಶಾಲೆಯ ಕೊಠಡಿ ಗೋಡೆ ಬಿರುಕು ಬಿಟ್ಟಿರುವುದು
ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದ ಪ್ರೌಢಶಾಲೆಯ ಆವರಣದಲ್ಲಿ ಮದ್ಯದ ಪೊಟ್ಟಣ ಪ್ಲಾಸ್ಟಿಕ್‌ ಲೋಟಗಳು ಗುಟ್ಕಾ ಪೊಟ್ಟಣಗಳು ಬಿದ್ದಿರುವುದು
ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದ ಪ್ರೌಢಶಾಲೆಯ ಆವರಣದಲ್ಲಿ ಮದ್ಯದ ಪೊಟ್ಟಣ ಪ್ಲಾಸ್ಟಿಕ್‌ ಲೋಟಗಳು ಗುಟ್ಕಾ ಪೊಟ್ಟಣಗಳು ಬಿದ್ದಿರುವುದು

ಶಾಲೆ ಆವರಣ; ಮದ್ಯವ್ಯಸನಿಗಳ ಅಡ್ಡೆ ಕುಂದಗೋಳ: ತಾಲ್ಲೂಕಿನ ಯರಗುಪ್ಪಿ ಪ್ರೌಢ ಶಾಲೆಯ ಆವರಣ ಕುಡುಕರ ಅಡ್ಡೆಯಾಗಿದೆ. ಶಾಲಾ ಆವರಣದಲ್ಲಿ ಮದ್ಯದ ಖಾಲಿ ಪೊಟ್ಟಣ ಬಾಟಲಿಗಳನ್ನು ಬಿಸಾಕುತ್ತಾರೆ. ಮದ್ಯವ್ಯಸನಿಗಳು ಆವರಣದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಶಾಲೆಯ ಶೌಚಾಲಯಕ್ಕೆ ನೀರಿನ ಕೊರತೆಯಿದೆ. ಹಿರೇನರ್ತಿ ಗ್ರಾಮದ ಪ್ರೌಢಶಾಲೆಯಲ್ಲಿನ ಶೌಚಾಲಯಗಳನ್ನು ಶಿಕ್ಷಕರು ಮಾತ್ರ ಬಳಸುತ್ತಾರೆ. ಮಕ್ಕಳ ಬಳಕೆಗೆ ಲಭ್ಯವಿಲ್ಲ. ಶಾಲೆಯ 8ನೇ ತರಗತಿ ಕೊಠಡಿಯ ಬಾಗಿಲು ಹಾಳಾಗಿದ್ದು ಗೋಡೆ ಬಿರುಕು ಬಿಟ್ಟಿದೆ. ಶಾಲೆಯ ಮೈದಾನ ತುಂಬ ಕಸ ಬಿದ್ದಿದೆ. ಮುಳ್ಳೊಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶೌಚಾಲಯದಲ್ಲಿ ಸ್ವಚ್ಛತೆ ಸಮಸ್ಯೆ ಇದೆ. ಯರಿನಾರಾಯಣಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಗುಡೇಣಕಟ್ಟಿ ಗ್ರಾಮದ ಪ್ರಾಥಮಿಕ ಶಾಲೆಯ ಪ್ರಾರ್ಥನಾ ಮಂದಿರದ ಮೇಲ್ಛಾವಣಿ ಹೆಂಚು ಕಿತ್ತಿದೆ. ‘ತಾಲ್ಲೂಕಿನಲ್ಲಿ ನೂತನವಾಗಿ 49 ಕೊಠಡಿಗಳನ್ನು ನಿರ್ಮಿಸಲಾಗಿದೆ. ಎರಡು ಕೊಠಡಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ‘ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಂಜೀವಕುಮಾರ್ ಬೆಳವಟಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT