ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಂಟಿ ಮುಗಿದವರಿಂದ ಗ್ಯಾರಂಟಿ ಕಾರ್ಡ್: ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವ್ಯಂಗ್ಯ

Last Updated 17 ಮಾರ್ಚ್ 2023, 7:40 IST
ಅಕ್ಷರ ಗಾತ್ರ

ಕುಂದಗೋಳ: ವಾರಂಟಿ ಮುಗಿದಿರುವ ಕಾಂಗ್ರೆಸ್ ಪಕ್ಷವು, ಜನರಿಗೆ ಸುಳ್ಳಿನ ಗ್ಯಾರಂಟಿ‌ ಕಾರ್ಡ್ ಕೊಡುತ್ತಿದೆ. ಅವರದ್ದು ಗ್ಯಾರಂಟಿ ಕಾರ್ಡ್ ಅಲ್ಲ, ಫಾಲ್ಸ್ ಕಾರ್ಡ್ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಮನ್ನಾ ಆಗಿಲ್ಲ. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈಗಿನ ಗ್ಯಾರಂಟಿ ಕಾರ್ಡ್ ಅದೇ ಸುಳ್ಳಿನ ಮುಂದುವರಿದ ಭಾಗವಾಗಿದೆ ಎಂದರು.

ಲಿಂಗಾಯತ ರ ಮನೆ ಮಗ ನಾನು:

ವೀರಶೈವ-ಲಿಂಗಾಯತ ಕುರಿತು ನಾನು‌ ನೀಡಿದ್ದೇನೆ ಎನ್ನಲಾದ ಹೇಳಿಕೆಗೆ ಅಪ್ಪ-ಅಮ್ಮ‌ ಇಲ್ಲ. ಆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿ ಕಾಂಗ್ರೆಸ್ ನ ಸುಳ್ಳಿನ ಕಾರ್ಖಾನೆಯ ಟೂಲ್ ಕಿಟ್ ಆಗಿದೆ. ಲಿಂಗಾಯತ ಸಮುದಾಯ ನನ್ನನ್ನು ಮನೆ ಮಗನಂತೆ ಕಂಡಿದೆ. ನನಗೆ ಹಿಂದುತ್ವ ಬಿಟ್ಟರೆ ಯಾವುದೇ ಜಾತಿ ಮತ್ತು ಪಂಗಡವಿಲ್ಲ. ಕಾಂಗ್ರೆಸ್ ನವರು ಹಿಂದೆ‌ ಲಿಂಗಾಯತ ಧರ್ಮದ ಹೆಸರಿನಲ್ಲಿ ವೀರಶೈವ- ಲಿಂಗಾಯತರನ್ನು ಒಡೆಯಲು ಹೋಗಿ ಕೈ ಸುಟ್ಟುಕೊಂಡರು. ಈಗ ಮತ್ತೆ ಸುಳ್ಳು ಸೃಷ್ಟಿಸಿ, ದೊಡ್ಡ ತಪ್ಪು ಮಾಡಲು ಕಾಂಗ್ರೆಸ್ ಮುಂದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕುಂದಗೋಳ ಟಿಕೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ಗೆಲ್ಲುವ ಸಾಧ್ಯತೆ ಆಧರಿಸಿ ಪಕ್ಷದ ರಾಜ್ಯ ಸಮಿತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ನಮ್ಮ ಪಕ್ಷಕ್ಕೆ ರಾಷ್ಟ್ರ ಮೊದಲು ಎಂಬುದು ನೀತಿಯಾಗಿದೆ. ವೋಟ್ ಮೊದಲು ಎಂಬುವವರು ಕುಕ್ಕರ್ ಬಾಂಬ್ ಸಮರ್ಥಿಸಿಕೊಳ್ಳುತ್ತಾರೆ. ಯಡಿಯೂರಪ್ಪ ಮಾರ್ಗದರ್ಶನ ಮತ್ತು ಬೊಮ್ಮಾಯಿ‌ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಹೇಳಿದರು.

ಉರಿಗೌಡ-ನಂಜೇಗೌಡ ಐತಿಹಾಸಿಕ ಪಾತ್ರಗಳು. ಟಿಪ್ಪು‌ ಸುಲ್ತಾನ್ ನನ್ನು ಕೊಂದಿದ್ದು ಅವರೇ ಎಂಬುದು ಸತ್ಯ. ಟಿಪ್ಪು ಇನ್ನೂ ಹೆಚ್ಚು ಕಾಲ ಬದುಕಿದ್ದಿದ್ದರೆ ಹಾಸನ‌ವು ಕೈಮಾಬಾದ್ ಆಗಿರುತ್ತಿತ್ತು ಎಂದರು.

ಮಾರ್ಚ್ 1ರಿಂದ ಆರಂಭಗೊಂಡಿರುವ ವಿಜಯಸಂಕಲ್ಪ ರಥಯಾತ್ರೆ ಇದುವರೆಗೆ 140 ಕ್ಷೇತ್ರಗಳಲ್ಲಿ ಹಾದುಹೋಗಿದೆ.‌ ಅಭೂತಪೂರ್ವ ಜನಬೆಂಬಲ‌ ಸಿಗುತ್ತಿದೆ. ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ.‌ ಕೇಂದ್ತದಲ್ಲಿ‌ ಮೋದಿ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅಭಿವೃದ್ಧಿ ಕೆಲಸಗಳ‌ ರಿಪೋರ್ಟ್ ಕಾರ್ಡ್ ಅನ್ನು ಜನರ ಮುಂದಿಟ್ಟು ಮತ ಕೇಳುತ್ತಿದ್ದೇವೆ. ಹಿಂದೆ ಸ್ಪಷ್ಟ ಬಹುಮತ ಇಲ್ಲದಿದ್ದರಿಂದ ಅನಿವಾರ್ಯವಾಗಿ ಬೇರೆಯವರ ಸಹಕಾರ ಪಡೆದಿದ್ದೆವು.‌ ಈ ಸಲ‌ ಅಂತಹ ಸ್ಥಿತಿ ಉದ್ಭವಿಸುವುದಿಲ್ಲ ಎಂದರು.

ಧಾರವಾಡ ಜಿಲ್ಲೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ಹಾಗೂ ದಿ. ಎಚ್.ಎನ್. ಅನಂತಕುಮಾರ್ ಅವರ ಪ್ರಯತ್ನದಿಂದಾಗಿ ಹಲವು ಯೋಜನೆಗಳು ಜಿಲ್ಲೆಗೆ ಬಂದಿವೆ. ಮೋದಿ ಅವರು ಐಐಟಿ ಉದ್ಘಾಟನೆ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಪ್ರತಿ ಕ್ಷೇತ್ರಗಳಲ್ಲಿ ಶೇ 75ರಷ್ಟು ಕೇಂದ್ರ ಮತ್ತು ರಾಜ್ಯದ ಯೋಜನೆಗಳ‌ ಫಲಾನುಭವಿಗಳಿದ್ದಾರೆ. ಅವರನ್ನು ಪಕ್ಷದ ಮತದಾರರನ್ನಾಗಿ ಮಾಡಿದರೆ ವಿರೋಧ ಪಕ್ಷದವರು ಠೇವಣಿ ಕಳೆದುಕೊಳ್ಳುತ್ತಾರೆ. ಈ ಭಾಗದ ಅಭಿವೃದ್ಧಿಗಾಗಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ‌ ಮಾಡಿದ್ದೇವೆ. ವಿದ್ಯಾನಿಧಿ ಹೆಸರಲ್ಲಿ ವಿವಿಧ ಕಾರ್ಮಿಕರ 11 ಲಕ್ಷ ಮಕ್ಕಳಿಗೆ ವಿದ್ಯಾರ್ಥಿವೇತನ, ಕಳಸಾ -ಬಂಡೂರಿ ಯೋಜನೆಗೆ ಬಜೆಟ್‌ನಲ್ಲಿ ₹1 ಸಾವಿರ ಕೋಟಿ ತೆಗೆದಿರಿಸಲಾಗಿದೆ. ಒಂದು ಕಾಲದಲ್ಲಿ ಈ ಯೋಜನೆಗಾಗಿ ಹೋರಾಟ ಮಾಡಿದ್ದೇವೆ. ಅಧಿಕಾರಕ್ಕೆ ಬಂದಾಗ ಆ ಬದ್ದತೆ ತೋರಿದ್ದೇವೆ. ಬಡ್ತಿ ಮೀಸಲಾತಿ ಪರವಾಗಿ ಸರ್ಕಾರ ಅಫಿಡೆಮಿಟ್ ಸಲ್ಲಿಸಿ ಮೀಸಲಾತಿ ಪರ ಬದ್ಧತೆ ತೋರಿದೆ. ಸುಮಾರು 60 ಸಾವಿರಕ್ಕೂ ಹೆಚ್ಚು ಲಂಬಾಣಿ ತಾಂಡಾದ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯನ್ನು ಮೋದಿ ನೇತೃತ್ವದಲ್ಲಿ ಮಾಡಲಾಗಿದೆ. ಹುಬ್ಬಳ್ಳಿ ನಿಲ್ದಾಣದ ಉದ್ದ್ ಪ್ಲಾಟ್ ಫಾರಂ ಉದ್ಘಾಟನೆ, ಜಯದೇವ ಹೃದ್ರೋಗ ಆಸ್ಪತ್ರೆಗೆ ಶಂಕುಸ್ಥಾಪನೆ ಸೇರಿದಂತೆ ಹಲವು ಕೆಲಸಗಳನ್ನು ಈ ಭಾಗದಲ್ಲಿ ಮಾಡಿದ್ದೇವೆ ಎಂದು‌ ತಿಳಿಸಿದರು.

ಸಚಿವರಾದ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಟಿಕೆಟ್ ಆಕಾಂಕ್ಷಿಗಳಾದ ಎಸ್.ಐ. ಚಿಕ್ಕನಗೌಡರ, ಎಂ.ಆರ್. ಪಾಟೀಲ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT